ರವಿಕುಮಾರ್, ದೀಪಕ್‍ಪೂನಿಯಾ ಸೆಮಿಫೈನಲ್‍ಗೆ ಪ್ರವೇಶ : ಭಾರತಕ್ಕೆ ಮತ್ತೆರಡು ಪದಕ ಖಚಿತ

ಈ ಸುದ್ದಿಯನ್ನು ಶೇರ್ ಮಾಡಿ

ಟೋಕಿಯೋ, ಆ.4- ಭಾರತದ ಯುವ ಕುಸ್ತಿಪಟುಗಳಾದ ರವಿಕುಮಾರ್ ಹಾಗೂ ದೀಪಕ್ ಪೂನಿಯಾ ಅವರು ಸೆಮಿಫೈನಲ್‍ಗೇರಿದ್ದು ದೇಶಕ್ಕೆ 2 ಪದಕಗಳನ್ನು ಗೆದ್ದು ಕೊಡುವ ಭರವಸೆ ಮೂಡಿಸಿದ್ದಾರೆ. ನಿನ್ನೆ ನಡೆದ ಮಹಿಳೆಯರ 62 ಕೆಜಿಯ ಫ್ರೀಸ್ಟೈಲ್ ವಿಭಾಗದಲ್ಲಿ ಸೋನು ಮಲ್ಲಿಕ್ ನಿರಾಸೆ ಮೂಡಿಸಿದರೂ ಕೂಡ ಉಳಿದ ಭಾರತೀಯ ಕುಸ್ತಿಪಟುಗಳು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

ಚಿನ್ನದ ಭರವಸೆ ಮೂಡಿಸಿರುವ ದಾಹಿಯಾ:
ಟೋಕಿಯೋದ ಮುಕುಹರಿ ಮೆಸ್ಸೆ ಹಾಲ್‍ನಲ್ಲಿ ನಡೆದ 57 ಕೆಜಿ ವಿಭಾಗದ ಪುರುಷರ ಫ್ರೀಸ್ಟೈಲ್ ವಿಭಾಗದಲ್ಲಿ ಏಷ್ಯಾ ಚಾಂಪಿಯನ್‍ಷಿಪ್‍ನಲ್ಲಿ ಚಿನ್ನದ ಪದಕ ಗೆದ್ದಿರುವ ರವಿಕುಮಾರ್‍ದಾಹಿಯಾ ಅವರು ಬಲ್ಗೇರಿಯಾದ ವಾಂಗೆಲೋವ್ ವ್ಯಾಲೆಂಟಿನೋವ್ ವಿರುದ್ಧ 14-4 ಅಂತರದಿಂದ ಗೆಲ್ಲುವ ಮೂಲಕ ಸೆಮಿಫೈನಲ್‍ಗೇರಿದ್ದಾರೆ. ರವಿಕುಮಾರ್ ಅವರು ಸೆಮಿಫೈನಲ್‍ನಲ್ಲಿ ಕಜಕಿಸ್ತಾನದ ಸನಾಯೆವ್ ನುರಿಸ್ಲಾಂ ವಿರುದ್ಧ ಸೆಣಸಲಿದ್ದು ಈ ಬೋಲ್ಟ್ ನಲ್ಲಿ ಗೆದ್ದರೆ ಫೈನಲ್‍ಗೆ ಪ್ರವೇಶ ಪಡೆಯಲಿದ್ದಾರೆ, ಒಂದು ವೇಳೆ ಸೋತರೆ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗುತ್ತದೆ.

ರವಿಕುಮಾರ್ ಫ್ರಿ ಕ್ವಾರ್ಟರ್‍ಫೈನಲ್‍ನಲ್ಲಿ ಕೊಲಂಬಿಯಾದ ಒಸ್ಕರ್ ಟಿಗ್‍ರೆರೋಸ್ ವಿರುದ್ಧ 13-2 ರಿಂದ ಗೆಲ್ಲುವ ಮೂಲಕ ಕ್ವಾರ್ಟರ್‍ಫೈನಲ್ ಪ್ರವೇಶಿಸಿದ್ದರು.
ಸೆಮಿಫೈನಲ್‍ಗೆ ದೀಪಕ್

# ಪೂನಿಯಾ ಲಗ್ಗೆ:
ಪುರುಷರ 86 ಕೆಜಿ ಫ್ರಿ ಸ್ಟೈಲ್ ಕ್ವಾರ್ಟರ್‍ಫೈನಲ್ ವಿಭಾಗದಲ್ಲಿ ಭಾರತದ ದೀಪಕ್ ಪೂನಿಯಾ ಆರಂಭಿಕ ಸುತ್ತಿ ನಿಂದಲೂ ಚೀನಾದ ಜುಸೆಹೆನ್ ಲಿ ವಿರುದ್ಧ ಬಲಿಷ್ಠ ಪಟ್ಟುಗಳನ್ನು ಪ್ರದರ್ಶಿಸಿ 6-3 ಅಂತರದಿಂದ ಗೆಲ್ಲುವ ಮೂಲಕ ಸೆಮಿಫೈನಲ್‍ಗೆ ಲಗ್ಗೆ ಇಟ್ಟಿದ್ದಾರೆ. ವಿಶ್ವದ 3ನೆ ಶ್ರೇಯಾಂಕಿತ ಕುಸ್ತಿಪಟುವಾ ಗಿರುವ ದೀಪಕ್ ಪೂನಿಯಾ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಈಗ ಟೋಕಿಯೋ ಒಲಿಂಪಿಕ್ಸ್‍ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಸೆಮಿಫೈನಲ್‍ಗೇರಿದ್ದು ಇಂದು ನಡೆಯುವ ಪಂದ್ಯದಲ್ಲಿ ಅವರು ಅಮೆರಿಕಾದ ಡೇವಿಡ್ ಮೋರಿಸ್‍ರ ಸವಾಲನ್ನು ಎದುರಿಸಲಿದ್ದಾರೆ.

ಇದಕ್ಕೂ ಮುನ್ನ ದೀಪಕ್ ಪೂನಿಯಾ ಫ್ರೀ ಕ್ವಾರ್ಟರ್‍ಫೈನಲ್‍ನಲ್ಲಿ ನೈಜೀರಿಯಾದ ಎಕೆರೆಕೆಮೆ ಅಜಿಯೋಮೋನ್ ವಿರುದ್ಧ 12-1 ರಿಂದ ಭರ್ಜರಿ ಗೆಲುವು ಸಾಧಿಸಿ ಕ್ವಾರ್ಟರ್‍ಫೈನಲ್‍ಗೆ ಲಗ್ಗೆ ಇಟ್ಟಿದ್ದರು. ಮೋರಿಸ್‍ರ ಸವಾಲನ್ನು ಎದುರಿಸಿ ಫೈನಲ್‍ಗೇರುವತ್ತ ದೀಪಕ್ ಪೂನಿಯಾ ಒಂದು ವೇಳೆ ಸೋಲು ಕಂಡರೂ ಕೂಡ ಭಾರತಕ್ಕೆ ಕಂಚಿನ ಪದಕವನ್ನು ಖಾತ್ರಿಗೊಳಿಸಲಿದ್ದಾರೆ.

ನಿರಾಸೆ ಮೂಡಿಸಿದ ಅನ್ಷು:
ಭಾರತದ ಪುರುಷ ಕುಸ್ತಿಪಟುಗಳು ಪದಕ ಗೆಲ್ಲುವ ಭರವಸೆ ಮೂಡಿಸಿದ್ದರೆ, ಮಹಿಳಾ ಕುಸ್ತಿಪಟುಗಳು ನೀರಸ ಪ್ರದರ್ಶನ ನೀಡುವ ಮೂಲಕ ನಿರಾಸೆಗೊಳಿಸಿದ್ದಾರೆ. ನಿನ್ನೆ ನಡೆದ 62 ಕೆಜಿಯ ಫ್ರೀಸ್ಟೈಲ್ ವಿಭಾಗದಲ್ಲಿ ಸೋನು ಮಲ್ಲಿಕ್ ಮೊದಲ ಸುತ್ತಿನಲ್ಲಿ ಸೋತು ಒಲಿಂಪಿಕ್ಸ್‍ನಿಂದ ಹೊರಬಿದ್ದರೆ, ಇಂದು ನಡೆದ ಕುಸ್ತಿ ವಿಭಾಗದಲ್ಲಿ ಏಷ್ಯಾನ್ ಚಾಂಪಿಯನ್‍ಷಿಪ್‍ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್‍ಗೆ ಅರ್ಹತೆ ಪಡೆದಿದ್ದ 19 ವರ್ಷದ ಅನ್ಷು ಮಲ್ಲಿಕ್ ವಿಶ್ವ ಶ್ರೇಯಾಂಕಿತ ಮೂರನೇ ಕುಸ್ತಿಪಟು ಬೆಲಾರಸ್‍ನ ಇರಿನಾ ಕುರಾಚ್ಕಿನಾ ವಿರುದ್ಧ ರೌಂಡ್ 16ನಲ್ಲಿ 2-8 ಅಂತರದಿಂದ ಸೋಲುವ ಮೂಲಕ ಪದಕದ ಸುತ್ತಿನಿಂದ ಹೊರಬಿದ್ದಿದ್ದಾರೆ.

#ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡ ಲವ್ಲೀನಾ..
ಟೋಕಿಯೊ, ಆ.4- ಚೊಚ್ಚಲ ಒಲಿಂಪಿಕ್ಸ್‍ನಲ್ಲೇ ಚಿನ್ನದ ಪದಕ ಗೆಲ್ಲಬೇಕೆಂಬ ಮಹದಾಸೆಯನ್ನು ಹೊಂದಿದ್ದ ಭಾರತದ ಯುವ ಬಾಕ್ಸರ್ ಲವ್ಲೀನಾ ಬೊರ್ಗೊಹೆನ್ ಸೆಮಿಫೈನಲ್‍ನಲ್ಲೇ ತನ್ನ ಪ್ರಯಾಣ ಮುಗಿಸುವ ಮೂಲಕ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಇಂದಿಲ್ಲಿ ನಡೆದ 69 ಕೆಜಿ ವಿಭಾಗದ ವೆಲ್ಟರ್‍ವೇಟ್ ಬಾಕ್ಸಿಂಗ್‍ನಲ್ಲಿ ವಿಶ್ವ ಚಾಂಪಿಯನ್ ಟರ್ಕಿಯ ಬುಸೆನಾಜ್ ಸುರ್ಮೆನೆಲಿ ವಿರುದ್ಧ 5-0 ಯಿಂದ ಸೋಲುವ ಮೂಲಕ ಫೈನಲ್ ಕನಸನ್ನು ಕೈಬಿಟ್ಟರು.

ಆರಂಭಿಕ ಸುತ್ತಿನಲ್ಲಿ ಭಾರತದ ಯುವ ಬಾಕ್ಸರ್ ಲವ್ಲೀನಾ ಆಕ್ರಮಣಕಾರಿ ಪಂಚ್‍ಗಳನ್ನು ಕೊಡುವ ಮೂಲಕ ಗೆಲುವಿನ ಹಾದಿಯಲ್ಲಿ ಸಾಗಿದ್ದರಾದರೂ ಪ್ರಥಮ ಸುತ್ತು ಮುಗಿಯಲು 30 ಸೆಕೆಂಡ್‍ಗಳಿರುವಾಗ ಲಯ ಕಂಡುಕೊಂಡ ಬುಸೆನಾಜ್, ಲವ್ಲೀನಾಗೆ ಬಲಿಷ್ಠವಾದ ಗುದ್ದುಗಳನ್ನು ಕೊಟ್ಟರು. ಈ ನಡುವೆ ಇಬ್ಬರು ಬಾಕ್ಸರ್‍ಗಳ ನಡುವೆ ವಾಗ್ವಾದ ನಡೆದಿದ್ದರಿಂದ ರೆಫ್ರಿ ಪಂದ್ಯವನ್ನು ಸ್ವಲ್ಪ ಸಮಯ ಸ್ಥಗಿತಗೊಳಿಸಿದರು.

ಎರಡು ಹಾಗೂ ಮೂರನೇ ಸುತ್ತಿನಲ್ಲೂ ಭಾರತದ ಯುವ ಬಾಕ್ಸರ್ ಲವ್ಲೀನಾ ಉತ್ತಮ ಹೋರಾಟ ಪ್ರದರ್ಶಿಸಿದರೂ ವಿಶ್ವಚಾಂಪಿಯನ್ ಆಗಿರುವ ಸುರ್ಮೆನೆಲಿ ಅವರ ಅನುಭವದ ಎದುರು ತಲೆಬಾಗಿ 5-0 ಅಂತರದಿಂದ ಸೋಲುವ ಮೂಲಕ ಕಂಚಿನ ಪದಕಕ್ಕೆ ಕೊರಳೊಡ್ಡಿದರು.
ಈ ಹಿಂದೆ ನಡೆದ ಒಲಿಂಪಿಕ್ಸ್‍ಗಳಲ್ಲಿ ಭಾರತದ ಬಾಕ್ಸರ್‍ಗಳಾದ ವಿಜಯೇಂದ್ರಸಿಂಗ್ ಹಾಗೂ ಮೇರಿಕೋಮ್ ಅವರು ಕೂಡ ಸೆಮಿಫೈನಲ್‍ಗಳಲ್ಲಿ ಸೋಲು ಕಾಣುವ ಮೂಲಕ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು.

# ಚೊಚ್ಚಲ ಒಲಿಂಪಿಕ್ಸ್‍ನಲ್ಲೇ ಫೈನಲ್‍ಗೆ ಲಗ್ಗೆ ನೀರಜ್ ಚೋಪ್ರಾ ಅದ್ಭುತ ಪ್ರದರ್ಶನ
ಟೋಕಿಯೊ, ಆ. 4- ಒಲಿಂಪಿಕ್ಸ್‍ನ ಜಾವೆಲಿನ್ ಥ್ರೋನ ಫೈನಲ್‍ಗೆ ಲಗ್ಗೆ ಇಟ್ಟಿರುವ ಭಾರತದ ಶ್ರೇಷ್ಠ ಆಥ್ಲೀಟ್ ನೀರಜ್ ಚೋಪ್ರಾ ಪದಕ ಗೆಲ್ಲುವ ಆಸೆಯನ್ನು ಮೂಡಿಸಿದ್ದಾರೆ.
ಇಂದಿಲ್ಲಿ ನಡೆದ ಜಾವೆಲಿನ್ ಥ್ರೋನ ಫೈನಲ್ ಅರ್ಹತೆ ಸುತ್ತಿನಲ್ಲಿ ಭಾರತದ ನೀರಜ್ ಚೋಪ್ರಾ ಮೊದಲ ಸುತ್ತಿನಲ್ಲೇ 86.65 ಮೀಟರ್ ದೂರ ಭರ್ಜಿಯನ್ನು ಎಸೆಯುವ ಮೂಲಕ ಫೈನಲ್‍ಗೆ ಅರ್ಹತೆ ಗಿಟ್ಟಿಸಿದರೆ, ವಿಶ್ವ ಶ್ರೇಷ್ಠ ನಂಬರ್ 1 ಆಟಗಾರ ಜರ್ಮನಿಯ ಜೋಹಾನ್ಸ್ ವೆಟರ್ ಮೂರನೆ ಎಸೆತದಲ್ಲಿ 85.64 ಮೀಟರ್ ಎಸೆಯುವ ಮೂಲಕ ಫೈನಲ್‍ಗೆ ಎಂಟ್ರಿ ಪಡೆದಿದ್ದಾರೆ.

ವೆಟರ್ ಮೊದಲ ಎಸೆತದಲ್ಲಿ 82.04 ಮೀಟರ್ ದೂರ ಇಟಿ (ಭರ್ಜಿ)ಯನ್ನು ಎಸೆದರೆ, ದ್ವಿತೀಯ ಎಸೆತದಲ್ಲಿ 82.08 ಮೀಟರ್ ಹಾಗೂ ಅಂತಿಮ ಎಸೆತದಲ್ಲಿ 85.64 ಮೀಟರ್ ದೂರ ಎಸೆದು ಫೈನಲ್‍ಗೆ ಲಗ್ಗೆ ಇಟ್ಟಿದ್ದಾರೆ. ಜಾವೆಲಿನ್ ಥ್ರೋನ ಫೈನಲ್‍ಗೆ ಅರ್ಹತೆ ಗಿಟ್ಟಿಸಬೇಕಾದರೆ ಸ್ಪರ್ಧಿಗಳು 84.50 ಮೀಟರ್ ದೂರ ಭರ್ಜಿಯನ್ನು ಎಸೆಯಬೇಕಾಗಿತ್ತು ಆದರೆ ಭಾರತದ ನೀರಜ್ ಚೋಪ್ರಾ ಮೊದಲ ಎಸೆತದಲ್ಲೇ 86.65 ಮೀಟರ್ ದೂರ ಎಸೆಯುವ ಮೂಲಕ ಫೈನಲ್‍ಗೆ ಲಗ್ಗೆ ಇಟ್ಟಿದ್ದಾರಲ್ಲದೆ ಚೊಚ್ಚಲ ಒಲಿಂಪಿಕ್ಸ್‍ನಲ್ಲೇ ಪದಕ ಗೆಲ್ಲುವ ಹುಮ್ಮಸ್ಸು ಮೂಡಿಸಿದ್ದಾರೆ.

ವಿಶ್ವದ ನಂ. 1 ಶ್ರೇಯಾಂಕಿತ ಜಾವೆಲಿನ್ ಥ್ರೋವರ್ ಎನಿಸಿಕೊಂಡಿರುವ ಜರ್ಮನಿಯ ವೆಟರ್ ವೈಯಕ್ತಿಕವಾಗಿ 97.76 ಮೀಟರ್ ದೂರ ಭರ್ಜಿ ಎಸೆದಿದ್ದರೂ ಅವರ ಸವಾಲನ್ನು ಮೆಟ್ಟಿನಿಂತು ಫೈನಲ್ ಅರ್ಹತಾ ಸುತ್ತಿನಲ್ಲಿ ನಂಬರ್ 1 ಸ್ಥಾನ ಪಡೆದಿರುವ ಭಾರತದ ನೀರಜ್ ಚೋಪ್ರಾ ವೈಯಕ್ತಿಕವಾಗಿ 88.07 ಮೀಟರ್ ದೂರ ಭರ್ಜಿಯನ್ನು ಎಸೆಯುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

ಈಗ ಫೈನಲ್‍ನಲ್ಲಿ ಚೋಪ್ರಾ ಮತ್ತೊಮ್ಮೆ ವೆಟರ್‍ಗೆ ಉತ್ತಮ ಸವಾಲನ್ನು ನೀಡುವ ಮೂಲಕ ಪದಕ ಗೆಲ್ಲುವತ್ತ ಚಿತ್ತ ಹರಿಸಿದ್ದಾರೆ. ಆದರೆ ಮತ್ತೊಬ್ಬ ಭಾರತೀಯ ಜಾವೆಲಿನ್ ಥ್ರೋವರ್ ಶಿವಪಾಲ್ ಫೈನಲ್‍ಗೇರುವಲ್ಲಿ ಎಡವಿ ನಿರಾಸೆ ಮೂಡಿಸಿದರು.

Facebook Comments