Tokyo Olympics Updates : ಭಾರತದ ಮಹಾಗೋಡೆಯಾದ ಹಾಕಿ ಉಪನಾಯಕಿ ಸವಿತಾ ಪೂನಿಯಾ

ಈ ಸುದ್ದಿಯನ್ನು ಶೇರ್ ಮಾಡಿ

ಟೋಕಿಯೋ, ಆ.2- ಆಸ್ಟ್ರೇಲಿಯಾ ವಿರುದ್ಧ ಅಭೂತ ಗೆಲುವು ಸಾಧಿಸುವಲ್ಲಿ ಮಹತ್ತರ ಪಾತ್ರ ವಹಿಸಿರುವ ಮಹಿಳಾ ಹಾಕಿ ತಂಡದ ಗೋಲ್‍ಕೀಪರ್ ಸವಿತಾ ಪೂನಿಯಾ ಅವರು ಭಾರತದ ನೂತನ ಮಹಾಗೋಡೆಯಾಗಿ ಹೊರಹೊಮ್ಮಿದ್ದಾರೆ. ಭಾರತ ಸೆಮಿಫೈನಲ್‍ಗೇರುವಲ್ಲಿ ತಂಡದ ಮುಂಚೂಣಿ ಆಟಗಾರ್ತಿ ಗುರ್‍ಜಿತ್ ಕೌರ್ ಅವರು ಕಾರಣವಾಗಿದ್ದರೂ ಕೂಡ ಆಸ್ಟ್ರೇಲಿಯಾ ಗೋಲ್ ಬಾರಿಸದಂತೆ ನೋಡಿಕೊಂಡ ಸವಿತಾರ ಪಾತ್ರವು ಅಗಾಧವಾಗಿದೆ.

ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಕಿ ಆಟಗಾರ್ತಿಯರಿಗೆ 8 ಬಾರಿ ಗೋಲ್ ಗಳಿಸುವ ಅವಕಾಶವಿತ್ತಾದರೂ ಭಾರತದ ಗೋಲ್ ಕೀಪರ್ ಆಗಿದ್ದ ಸವಿತಾರ ಚುರುಕಿನ ಆಟದಿಂದಾಗಿ ಒಂದು ಗೋಲನ್ನು ಗಳಿಸದೆ ಆಸೀಸ್ ಆಟಗಾರ್ತಿಯರು ನಿರಾಸೆ ಅನುಭವಿಸಿದರು. ಭಾರತ ಹಾಕಿ ತಂಡದ ಉಪನಾಯಕಿಯೂ ಆಗಿರುವ ಸವಿತಾ ಪೂನಿಯಾರ ಆಟದ ವೈಖರಿಯನ್ನು ಎಲ್ಲರೂ ಕೊಂಡಾಡುತ್ತಿದ್ದು ಆಕೆಯನ್ನು ಭಾರತದ ಹೊಸ ಮಹಾಗೋಡೆಯೆಂದೇ ಬಿಂಬಿಸಿದ್ದಾರೆ.

ರಿಯೋ ಒಲಿಂಪಿಕ್ಸ್‍ನಲ್ಲಿ ಉತ್ತಮ ಸಾಧನೆ ತೋರಿಸಲು ಎಡವಿದ್ದ ಭಾರತ ಆ ಋತುವಿನ ಗುಂಪು ಹಂತದಲ್ಲಿ ನಾಲ್ಕು ಸೋಲು ಹಾಗೂ ಜಪಾನ್ ವಿರುದ್ಧ ಡ್ರಾ ಮಾಡಿಕೊಂಡಿತ್ತು.
ರಿಯೋ ಒಲಿಂಪಿಕ್ಸ್‍ನ ಗುಂಪು ಹಂತದಲ್ಲಿ ಆಸ್ಟ್ರೇಲಿಯಾ ವಿರುದ್ಧ 1-6 ರಿಂದ ಹೀನಾಯ ಸೋಲು ಕಂಡಿದ್ದ ಭಾರತೀಯ ಹಾಕಿ ವನಿತೆಯರು ಟೋಕಿಯೋ ಒಲಿಂಪಿಕ್ಸ್‍ನಲ್ಲಿ ಕೆಚ್ಚೆದೆಯ ಆಟ ಪ್ರದರ್ಶಿಸುವ ಮೂಲಕ ಕ್ವಾರ್ಟರ್‍ಫೈನಲ್‍ನಲ್ಲಿ 1-0 ಯಿಂದ ಗೆಲ್ಲುವ ಮೂಲಕ ಸೆಮಿಫೈನಲ್‍ಗೆ ಏರುವ ಮೂಲಕ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ.

# ಪದಕ ಗೆಲ್ಲುವತ್ತ ಚಿತ್ತ:
ರಿಯೋ ಒಲಿಂಪಿಕ್ಸ್ ಈಗ ಮುಗಿದ ಅಧ್ಯಾಯ. ಅಲ್ಲಿನ ಸೋಲಿನ ಕಹಿಯಿಂದ ಹೊರ ಬಂದಿರುವ ನಾವು ಟೋಕಿಯೋ ಒಲಿಂಪಿಕ್ಸ್‍ನಲ್ಲಿ ಎಂತಹ ಬಲಿಷ್ಠ ತಂಡವನ್ನು ಮಣಿಸುವ ಶಕ್ತಿಯನ್ನು ಹೊಂದಿದ್ದು ಸೆಮಿಫೈನಲ್‍ನಲ್ಲೂ ಉತ್ತಮ ಪ್ರದರ್ಶನ ತೋರುವ ಮೂಲಕ ಪದಕ ಗೆದ್ದು ದೇಶಕ್ಕೆ ಹೆಮ್ಮೆ ತರುವತ್ತ ಚಿತ್ತ ಹರಿಸಿದ್ದೇವೆ ಎಂದು ಮಹಿಳಾ ಹಾಕಿ ತಂಡದ ಉಪನಾಯಕಿ ಹಾಗೂ ಗೋಲ್ ಕೀಪರ್ ಸವಿತಾ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

#ನಿರಾಸೆ ಮೂಡಿಸಿದ ತೋಮರ್, ರಜಪೂತ್
ಟೋಕಿಯೋ, ಆ.2- ಭಾರತೀಯ ಶೂಟರ್ ವೈಫಲ್ಯ ಮುಂದುವರೆದಿದ್ದು ಇಂದಿಲ್ಲಿ ನಡೆದ ಪುರುಷರ 50 ಮೀಟರ್ ರೈಫಲ್ 3 ಪಿ ವಿಭಾಗದ ಫೈನಲ್‍ಗೇರುವಲ್ಲಿ ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಹಾಗೂ ಸಂಜೀವ್ ರಜಪೂತ್ ಅವರು ವಿಫಲವಾಗಿ ನಿರಾಸೆ ಮೂಡಿಸಿದ್ದಾರೆ.

ಫೈನಲ್‍ಗೆ ತಲಪಬೇಕಾದ ಅರ್ಹತಾ ಸುತ್ತಿನಲ್ಲಿ ಭಾರತದ ಐಶ್ವರಿ ಪ್ರತಾಪ್ ಸಿಂಗ್ 1167 ಅಂಕಗಳನ್ನು ಗಳಿಸುವ ಮೂಲಕ 21ನೆ ಸ್ಥಾನ ಪಡೆದರೆ, ಸಂಜೀಪ್ ರಜಪೂತ್ 1157 ಪಾಯಿಂಟ್ಸ್ ಕಲೆ ಹಾಕುವ ಮೂಲಕ 32ನೆ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಫೈನಲ್‍ಗೇ ಅರ್ಹತೆ ಗಿಟ್ಟಿಸಲು 1176 ಅಂಕಗಳ ಅವಶ್ಯಕತೆಯಿತ್ತು ಆದರೆ ಐಶ್ವರಿ ಸಿಂಗ್ 1167 ಅಂಕಗಳನ್ನು ಕಲೆ ಹಾಕಿ ಕೇವಲ 9 ಅಂಕಗಳಿಂದ ಪದಕ ಗೆಲ್ಲುವ ಸುತ್ತಿನಿಂದ ಹೊರಬಿದ್ದರು.

ಟೋಕಿಯೋಕ್ಕೆ ತೆರಳಿದ್ದ ಎಲ್ಲಾ ಭಾರತೀಯ ಶೂಟರ್‍ಗಳು ನಿರಾಸೆ ಮೂಡಿಸಿದ್ದರೂ ಕೂಡ ಸೌರಭ್ ಚೌದರಿಯವರು ಪದಕ ಗೆಲ್ಲುವ ಆಸೆಯನ್ನು ಜೀವಂತವಾಗಿರಿಸಿದ್ದಾರೆ.

#ಮಹಿಳೆಯರ 200 ಮೀಟರ್ ಸೆಮಿಫೈನಲ್‍ಗೇರುವಲ್ಲಿ ದುತಿಚಂದ್ ವಿಫಲ
ಟೋಕಿಯೋ, ಆ.2- ಮಹಿಳೆಯರ ಹೀಟ್ 4 ಗುಂಪಿನಲ್ಲಿ ಪಾಲ್ಗೊಂಡಿದ್ದ ಭಾರತದ ಖ್ಯಾತ ಓಟಗಾರ್ತಿ ದುತಿಚಂದ್ ಅವರು ಮಹಿಳೆಯರ 200 ಮೀಟರ್ ಸೆಮಿಫೈನಲ್‍ಗೇರುವಲ್ಲಿ ಎಡವಿದ್ದಾರೆ. ದುತಿಚಂದ್ ಅವರು ಗೆಲುವಿನ ಗುರಿಯನ್ನು 23.85 ಸೆಕೆಂಡ್‍ಗಳಲ್ಲಿ ಮುಟ್ಟಿದರೆ, ಸೆಮಿಫೈನಲ್‍ಗೆ ಅರ್ಹತೆ ಗಿಟ್ಟಿಸಿರುವ ಅಮೆರಿಕಾದ ಗರ್ಬಿಯಲ್ ಥಾಮಸ್ (21.61 ಸೆಕೆಂಡ್), ನಮಿಬಿಯಾದ ಕ್ರಿಸ್ಟಿಯಾನೆ ಮೊಬೊಮಾ (22.67 ಸೆಕೆಂಡ್), ಬ್ರೆಜಿಲ್‍ನ ಕ್ರಿಸ್ಟಿಯಾನ ವಿಕ್ಟೋರಿಯಾ ರೊಸಾ ಮೂರನೇ ಸ್ಥಾನ ಪಡೆದರೆ, ಭಾರತದ ಓಟಗಾರ್ತಿ 7ನೇ ಸ್ಥಾನಿಯಾಗುವ ಮೂಲಕ ನಿರಾಸೆ ಮೂಡಿಸಿದರು.

ಇದಕ್ಕೂ ಮುನ್ನ ದುತಿಚಂದ್ 100 ಓಟದಲ್ಲೂ ನಿರಾಸ ಪ್ರದರ್ಶನ ತೋರುವ ಮೂಲಕ ಪದಕ ಸುತ್ತಿನಿಂದ ಹೊರಬಿದ್ದಿದ್ದರು. ಟೋಕಿಯೋ ಒಲಿಂಪಿಕ್ಸ್‍ನಲ್ಲಿ ಭಾರತದಿಂದ ಪಾಲ್ಗೊಂಡಿದ್ದ ಓಟಗಾರರಾದ ಅವಿನಾಶ್ ಸಾಬ್ಲೆ (ಸ್ಟೇಪಲ್ ಚೇಸ್), ಎಂ.ಪಿ. ಜಬೀರ್ (400 ಮೀಟರ್ ಹರ್ಡಲ್ಸ್), ಮುಹಮದ್ ಅನಾಸ್ ಯಾಹಿಯಾ, ರೇವತಿ ವೀರಾಮಣಿ, ಶುಭ ವೆಂಕಟೇಶನ್, ರಾಜೀವ್ ಅರೋಕಿಯಾ ಅವರು 400 ಮೀಟರ್ ಮಿಕ್ಸ್ಡ್ ರಿಲೇಯಲ್ಲಿ ಸೋಲುವ ಮೂಲಕ ನಿರಾಸೆ ಮೂಡಿಸಿದ್ದರು.

#ಚೀನಾಗೆ ಅಗ್ರಸ್ಥಾನ
ಟೋಕಿಯೋ, ಆ.2- ಒಲಿಂಪಿಕ್ಸ್‍ನ 10ನೆ ದಿನವಾದ ಇಂದು ಕೂಡ ಚೀನಾದ ಆಟಗಾರರು ಉತ್ತಮ ಪ್ರದರ್ಶನ ತೋರುವ ಮೂಲಕ ಪಾಯಿಂಟ್ಸ್ ಪಟ್ಟಿಯಲ್ಲಿ ದೇಶವನ್ನು ನಂಬರ್ 1 ಸ್ಥಾನಕ್ಕೆ ಕೊಂಡೊಯ್ದಿದ್ದಾರೆ. ಭಾರತ ತಂಡವು ಮೀರಾ ಬಾಯಿಚಾನು ಅವರು ವೇಟ್ ಲಿಫ್ಟಿಂಗ್‍ನಲ್ಲಿ ಬೆಳ್ಳಿ ಹಾಗ ಬ್ಯಾಡ್ಮಿಂಟನ್‍ನಲ್ಲಿ ಪಿ.ವಿ.ಸಿಂಧು ಅವರು ಕಂಚಿನ ಪದಕವನ್ನು ಗೆದ್ದರೂ ಕೂಡ 61 ಸ್ಥಾನಕ್ಕೆ ಕುಸಿದಿದೆ.ಚೀನಾ ಇದುವರೆಗೂ 24 ಚಿನ್ನ, 15 ಬೆಳ್ಳಿ, 14 ಕಂಚಿನ ಪದಕಗಳು ಸೇರಿದಂತೆ ಒಟ್ಟು 53 ಪದಕಗಳನ್ನು ತನ್ನದಾಗಿಸಿಕೊಂಡಿದೆ.

Facebook Comments