ಇಂದಿನ ಒಲಿಂಪಿಕ್ಸ್ ಅಪ್ಡೇಟ್ಸ್ : ಹಾಕಿಯಲ್ಲಿ ಮಿಂಚು-ಶೂಟಿಂಗ್, ಆರ್ಚರಿಯಲ್ಲಿ ಮಂಕು

ಈ ಸುದ್ದಿಯನ್ನು ಶೇರ್ ಮಾಡಿ

ಟೋಕಿಯೋ, ಜು. 30- ಒಲಿಂಪಿಕ್ಸ್‍ನ 7ನೇ ದಿನವಾದ ಇಂದು ಕೂಡ ಭಾರತಕ್ಕೆ ಮಿಶ್ರಫಲದ ಫಲಿತಾಂಶ ಸಿಕ್ಕಿದೆ. ಬಾಕ್ಸರ್ ಲವ್ಲೀನಾ ವಿಶ್ವದ ಮಾಜಿ ಚಾಂಪಿಯನ್ ಚೀನಾದ ವಿರುದ್ಧ 4-1 ರಿಂದ ಗೆಲ್ಲುವ ಮೂಲಕ ಸೆಮಿಫೈನಲ್‍ಗೆ ಪ್ರವೇಶಿಸಿ ಮತ್ತೊಂದು ಪದಕ ಗೆಲ್ಲುವ ಮೂಲಕ ಭಾರತೀಯ ಕ್ರೀಡಾಭಿಮಾನಿಗಳನ್ನು ರಂಜಿಸಿದರೆ, ಸತತ ಸೋಲಿನಿಂದ ಕಂಗೆಟ್ಟಿದ್ದ ಮಹಿಳಾ ಹಾಕಿ ತಂಡವು ಐರ್ಲೆಂಡ್ ವಿರುದ್ಧ 1-0 ಯಿಂದ ಗೆಲ್ಲುವ ಮೂಲಕ ಗೆಲುವಿನ ನಗೆ ಚೆಲ್ಲಿದೆ.

ಭಾರತದ ಮಹಿಳಾ ಬಿಲ್ಲುಗಾರ್ತಿಯಾದ ದೀಪಿಕಾಕುಮಾರಿ ಅವರು ಪದಕ ಗೆಲ್ಲುವ ಭರವಸೆ ಮೂಡಿಸಿದ್ದರಾದರೂ ಕ್ವಾರ್ಟರ್‍ಫೈನಲ್‍ನಲ್ಲಿ ಕೋರಿಯಾದ ಅನ್‍ಸಾನ್ ವಿರುದ್ಧ 0-6 ರಿಂದ ಸೋಲು ಕಾಣುವ ಮೂಲಕ ಸೆಮಿಫೈನಲ್ ಹಾದಿ ತಲುಪುವಲ್ಲಿ ಎಡವಿದ್ದಾರೆ. ಪದಕ ಗೆಲ್ಲುವ ಭರವಸೆ ಮೂಡಿಸಿದ್ದ ಭಾರತದ ವೇಗದ ಓಟಗಾರ್ತಿ ಧೃತಿಚಂದ್ ಅವರು 100 ಮೀಟರ್‍ನ ಹೀಟ್ 5ನಲ್ಲಿ 7ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವ ಮೂಲಕ ಮುಂದಿನ ಸುತ್ತಿಗೆ ತಲುಪುವ ಅರ್ಹತೆಯನ್ನು ಕಳೆದುಕೊಂಡರು.

ಪುರುಷರ 3000 ಮೀಟರ್ ಸ್ಟೇಪಲ್‍ಚೇಸ್‍ನಲ್ಲಿ ಭಾರತದ ಅವಿನಾಶ್ ಸಾಬ್ಲೆ ಅವರು 8:18.12 ನಿಮಿಷಗಳಲ್ಲಿ ಗೆಲುವಿನ ಗುರಿ ಮುಟ್ಟಿ ತಾವೇ ನಿರ್ಮಿಸಿದ ದಾಖಲೆಯನ್ನು ಮುರಿದರಾದರೂ ಫೈನಲ್‍ಗೆ ಪ್ರವೇಶಿಸುವಲ್ಲಿ ಎಡವಿದ್ದಾರೆ. ಟೋಕಿಯೋ ಒಲಿಂಪ್‍ಕ್ಸ್‍ನಲ್ಲಿ ಪದಕ ಗೆಲ್ಲುವ ಮೂಲಕ ಚೊಚ್ಚಲ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಅವಿಸ್ಮರಣೀಯವಾಗಿಸಿಕೊಳ್ಳಬೇಕೆಂಬ ಕನಸು ಹೊತ್ತಿದ್ದ ಭಾರತದ ಮಹಿಳಾ ಶೂಟರ್ ಮನುಬಾಕರ್ 25 ಮೀಟರ್ ಮಹಿಳೆಯರ ಪಿಸ್ತೂಲ್ ವಿಭಾಗದಲ್ಲಿ ಫೈನಲ್‍ಗೇರದೆ ನಿರಾಸೆ ಮೂಡಿಸಿದ್ದಾರೆ.

ಅಂಪೈರ್‍ಗಳ ಸರ್ವಾನು ಮತದ ನಿರ್ಧಾರದಿಂದಾಗಿ ಮಹಿಳೆಯರ ಲೈಟ್‍ವೇಟ್ ಬಾಕ್ಸಿಂಗ್‍ನಲ್ಲಿ ಪಾಲ್ಗೊಂಡಿದ್ದ ಭಾರತದ ಸಿಮ್‍ರಣ್‍ಜಿತ್ ಕೌರ್ ಅವರು ಥೈಲ್ಯಾಂಡ್‍ನ ಸುಧಾಪೋರ್ನ್ ವಿರುದ್ಧ ಸೋಲುವ ಮೂಲಕ ಪ್ರೀ ಕ್ವಾರ್ಟರ್‍ಫೈನಲ್‍ನಲ್ಲೇ ತಮ್ಮ ಪಯಣವನ್ನು ಮುಗಿಸಿದ್ದಾರೆ. ಪುರುಷರ 400 ಮೀಟರ್ ಹರ್ಡಲ್ಸ್‍ನಲ್ಲಿ ಭಾರತದ ಎಂ.ಪಿ.ಜಾಬೀರ್ 33 ನೆ ಸ್ಥಾನ ಪಡೆಯುವ ಮೂಲಕ ಫೈನಲ್‍ಗೇರುವ ಅವಕಾಶವನ್ನು ಕೈಚೆಲ್ಲಿದ್ದಾರೆ.

# ದಾಖಲೆ ಬರೆದರೂ ಪದಕದ ಸುತ್ತಿನಿಂದ ಹೊರ ಬಿದ್ದ ಅವಿನಾಶ್
ಟೋಕಿಯೋ, ಜು. 30- ಫೆಡರೇಷನ್ ಕಪ್‍ನಲ್ಲಿ ತಾವೇ ನಿರ್ಮಿಸಿದ್ದ ದಾಖಲೆಯನ್ನು ಟೋಕಿಯೋ ಒಲಿಂಪಿಕ್ಸ್‍ನಲ್ಲಿ ಮುರಿದರೂ ಕೂಡ 3000 ಮೀಟರ್ ಸ್ಟೀಪಲ್‍ಚೇಸ್À ಫೈನಲ್‍ಗೇರುವಲ್ಲಿ ಭಾರತದ ಅವಿನಾಶ್ ಮುಕುಂದ್ ಸಬ್ಲೆ ಅವರು ಎಡವಿದ್ದಾರೆ. 3000 ಮೀಟರ್‍ನ ಸ್ಟೀಪಲ್‍ಚೇಸ್ನ ಮೊದಲ ಸುತ್ತಿನಲ್ಲಿ ಅತಿ ವೇಗವಾಗಿ ಓಡುವ ಮೂಲಕ 1000 ಮೀಟರ್‍ಗಳ ಅಂತರವನ್ನು ಕೇವಲ 2:46.6 ನಿಮಿಷಗಳಲ್ಲಿ ಪೂರೈಸಿದ ಅವಿನಾಶ್, ನಂತರವ 2000 ಮೀಟರ್ ಕ್ರಮಿಸುವಾಗಲೂ ಅತ್ಯಂತ ಆತ್ಮವಿಶ್ವಾಸದಿಂದ ಓಡಿ 5:33.6 ನಿಮಿಷಗಳಲ್ಲಿ ಪೂರೈಸಿದರಾದರೂ ಅಂತಿಮ ಸುತ್ತು ಓಡುವಾಗ ಬಹಳ ದಣಿದಿದ್ದರೂ 8:18.2 ನಿಮಿಷಗಳಲ್ಲಿ ಗೆಲುವಿನ ಗೆರೆಯನ್ನು ಮುಟ್ಟುವ ಮೂಲಕ 7 ನೆ ಸ್ಥಾನವನ್ನು ಪಡೆದರಾದರೂ ಫೈನಲ್‍ಗೇರುವಲ್ಲಿ ಎಡವಿದ್ದಾರೆ.

ಅವಿನಾಶ್ ಮುಕುಂದ್ ಸಬ್ಲೆ ಅವರು ಈ ಹಿಂದೆ ನಡೆದ ಫೆಡರೇಷನ್ ಕಪ್ ಟೂರ್ನಿಯಲ್ಲಿ 3000 ಮೀಟರ್ ಸ್ಟೀಪಲ್‍ಚೇಸ್ ಸ್ಪರ್ಧೆಯಲ್ಲಿ 8:20.20 ನಿಮಿಷಗಳಲ್ಲಿ ಅಂತಿಮ ಗುರಿಯನ್ನು ಮುಟ್ಟಿದ್ದರಾದರೂ ಒಲಿಂಪಿಕ್ಸ್‍ನಲ್ಲಿ ಆ ಅಂತರವನ್ನು 8:18.2 ನಿಮಿಷಗಳಲ್ಲಿ ಪೂರೈಸುವ ಮೂಲಕ ತಾವು ನಿರ್ಮಿಸಿದ್ದ ದಾಖಲೆಯನ್ನು ಮುರಿಯುವ ಮೂಲಕ ಗಮನ ಸೆಳೆದರೂ ಒಲಿಂಪಿಕ್ಸ್ ಪದಕ ಗೆಲ್ಲುವ ಅವಕಾಶ ಕೈಚೆಲ್ಲಿದ್ದಾರೆ.

# ಐರ್ಲೆಂಡ್ ವಿರುದ್ಧ ಭಾರತಕ್ಕೆ 1-0 ಜಯ
ಟೋಕಿಯೋ, ಜು. 30- ಒಲಿಂಪಿಕ್ಸ್ ಆರಂಭಕ್ಕೂ ಮುನ್ನ ಸದೃಢವಾಗಿ ಕಾಣಿಸಿಕೊಂಡಿದ್ದ ಭಾರತೀಯ ಹಾಕಿ ವನಿತೆಯರು ಆಡಿದ ಎಲ್ಲಾ ಪಂದ್ಯಗಳಲ್ಲೂ ಸೋತರೂ ಕೂಡ ಇಂದು ನಡೆದ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 1-0 ಗೋಲಿನಿಂದ ಪಂದ್ಯ ವಶಪಡಿಸಿಕೊಂಡು ಗೆಲುವಿನ ನಗೆ ಚೆಲ್ಲಿದ್ದಾರೆ. ಈಗಾಗಲೇ ಕ್ವಾರ್ಟರ್‍ಫೈನಲ್ ಹಂತ ತಲುಪುವಲ್ಲಿ ಎಡವಿರುವ ಭಾರತೀಯ ಹಾಕಿ ವನಿತೆಯರು ಇಂದು ನಡೆದ ಪಂದ್ಯದ ಆರಂಭದಿಂದಲೂ ಐರ್ಲೆಂಡ್ ಆಟಗಾರ್ತಿಯರಿಗೆ ಪ್ರಬಲ ಪೈಪೋಟಿ ನೀಡಿದರು.

ಪಂದ್ಯದ ಆರಂಭಿಕ ಹಂತ ದಲ್ಲಿ ಯಾವುದೇ ಗೋಲು ಗಳಿಸಲು ಎರಡು ತಂಡಗಳಿಗೂ ಸಾಧ್ಯವಾಗಿರಲಿಲ್ಲ, ದ್ವಿತೀಯ ಹಂತದಲ್ಲೂ ಎರಡು ತಂಡಗಳು ಪ್ರಬಲ ಹೋರಾಟ ನಡೆಸಿದವಾದರೂ 57ನೆ ನಿಮಿಷದಲ್ಲಿ ಭಾರತ ಹಾಕಿ ಆಟಗಾರ್ತಿ ನವನೀತ್ ಕೌರ್ ಐರ್ಲೆಂಡ್‍ನ ಗೋಲ್ ಕೀಪರ್‍ನ ಕಣ್ತಪ್ಪಿಸಿ ಗೋಲು ಬಾರಿಸುವ ಮೂಲಕ ಭಾರತಕ್ಕೆ ಮೊದಲ ಜಯ ತಂದುಕೊಡುವಲ್ಲಿ ಯಶಸ್ವಿಯಾದರು.

# ನನ್ನ ಪುತ್ರಿ ಚಿನ್ನದ ಪದಕ ಗೆಲ್ಲುವ ಭರವಸೆ ಇದೆ
ಗುವಾಹಟಿ, ಜು. 30- ನನ್ನ ಮಗಳು ಚೊಚ್ಚಲ ಒಲಿಂಪಿಕ್ಸ್‍ನಲ್ಲೇ ಉತ್ತಮ ಪ್ರದರ್ಶನ ತೋರುತ್ತಿದ್ದು ದೇಶಕ್ಕಾಗಿ ಸ್ವರ್ಣ ಪದಕವನ್ನು ಗೆದ್ದು ಕೊಡುತ್ತಾಳೆ ಎಂಬ ಭರವಸೆ ಇದೆ ಎಂದು ಯುವ ಬಾಕ್ಸರ್ ಲವ್ಲೀನಾ ಬೊರ್ಗೊಹೆನ್ ಅವರ ತಂದೆ ಟೆಕನ್ ಬೊರ್ಗೆಹೆನ್ ಅವರು ಸಂತಸ ಹಂಚಿಕೊಂಡಿದ್ದಾರೆ. ಕ್ವಾರ್ಟರ್‍ಫೈನಲ್‍ನಲ್ಲಿ ಚೀನಾದ ಚೆನ್ ನಿಲ್ ಚಿನ್‍ರ ವಿರುದ್ಧ 4-1ರಲ್ಲಿ ಗೆದ್ದು ಸೆಮಿಫೈನಲ್‍ಗೆ ಪ್ರವೇಶಿಸುತ್ತಿದ್ದಂತೆ ಟ್ವಿಟ್ ಮಾಡಿದ ಟೆಕನ್, ನನ್ನ ಪುತ್ರಿಯ ಸಾಧನೆಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ, ಒಲಿಂಪಿಕ್ಸ್‍ನಲ್ಲಿ ಚಿನ್ನದ ಪದಕ ಗೆಲ್ಲಬೇಕೆಂಬ ನನ್ನ ಪುತ್ರಿಯ ಕನಸು ಟೊಕಿಯೋ ಒಲಿಂಪಿಕ್ಸ್‍ನಲ್ಲಿ ನಿಜವಾಗುವ ಮೂಲಕ ಭಾರತದ ಕೀರ್ತಿಯನ್ನು ಹೆಚ್ಚಿಸಲಿದ್ದಾಳೆ ಎಂಬ ಆತ್ಮವಿಶ್ವಾಸದ ನುಡಿಗಳನ್ನಾಡಿದ್ದಾರೆ.

2008ರ ಒಲಿಂಪಿಕ್ಸ್‍ನಲ್ಲಿ ಕಂಚಿನ ಪದಕ ಗೆದ್ದಿದ್ದ ಭಾರತೀಯ ಬಾಕ್ಸರ್ ವಿಜಯೇಂದ್ರ ಕೂಡ ಟ್ವಿಟ್ ಮಾಡಿ ಯುವ ಬಾಕ್ಸರ್ ಲವ್ಲೀನಾರ ಸಾಧನೆಯನ್ನು ಕೊಂಡಾಡಿದ್ದಾರೆ. ಅಸ್ಸಾಮ್‍ನ ಮುಖ್ಯಮಂತ್ರಿ ಡಾ. ಹಿಮಂತ ಬಿಸ್ವಾ ಶರ್ಮಾ ಅವರು ಕೂಡ ಲವ್ಲೀನಾರ ಸಾಧನೆಯನ್ನು ಕೊಂಡಾಡಿದ್ದು ಸ್ವರ್ಣ ಪದಕವನ್ನು ಗೆದ್ದು ಬರುವಂತೆ ಹಾರೈಸಿದ್ದಾರೆ.

Facebook Comments