ಬೆಲೆ ಏರಿಕೆಗೆ ಮತ್ತಷ್ಟು ಹುಳಿ ಹಿಂಡಿದ ಟೊಮೊಟೊ ದರ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಅ.13- ದಸರಾ ನವರಾತ್ರಿ ಸಂದರ್ಭದಲ್ಲಿ ಏಕಾಏಕಿ ದುಪ್ಪಾಟ್ಟಗಿರುವ ಟೊಮೊಟೊ ದರ ಗ್ರಾಹಕರನ್ನು ಕಕ್ಕಾಬಿಕ್ಕಿ ಮಾಡಿದೆ.
ಅಕಾಲಿಕ ಮಳೆಯಿಂದ ದೇಶದ ಮೆಟ್ರೋ ನಗರಗಳಲ್ಲಿ ತರಕಾರಿ, ಹಣ್ಣುಗಳ ಬೆಲೆ ದುಬಾರಿಯಾಗಿದೆ. ಅದರಲ್ಲು ಅಡುಗೆಗೆ ಪ್ರಶಸ್ತ್ಯವಾಗಿ ಬಳಕೆ ಮಾಡುವ ಟೊಮೊಟೊ ದರ ಕೆ.ಜಿ.ಗೆ. 72 ರೂಪಾಯಿ ದಾಟಿದೆ.ಈಗಾಗಲೇ ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ, ಅಗತ್ಯ ವಸ್ತುಗಳ ದರ ಏರಿಕೆಯಿಂದ ಜನ ಕಂಗಾಲಾಗಿದ್ದಾರೆ. ಇವುಗಳ ನಡುವೆ ಟೊಮೊಟೊ ದರ ಗಗನ ಮುಖಿಯಾಗಿರುವುದು ಜನ ಸಾಮಾನ್ಯರನ್ನು ಆಘಾತಕ್ಕೀಡು ಮಾಡಿದೆ.

ಚೀನ ನಂತರ ಅತಿ ಹೆಚ್ಚು ಟೊಮೊಟೊ ಉತ್ಪಾದಿಸುವ ದೇಶ ಭಾರತವಾಗಿದೆ. 7.89 ಲಕ್ಷ ಹೆಕ್ಟರ್‍ನಲ್ಲಿ ವಾರ್ಷಿಕ 19.75 ಮಿಲಿಯನ್ ಟನ್ ಟೊಮೊಟೊವನ್ನು ಭಾರತದಲ್ಲಿ ಬೆಳೆಯಲಾಗುತ್ತದೆ. ಪ್ರತಿ ಹೆಕ್ಟರ್‍ಗೆ ಸರಾಸರಿ 25.05 ಟನ್ ಇಳುವರಿ ಭಾರತದಲ್ಲಿ ದಾಖಲಾಗಿದೆ.

ಕಳೆದ ಹದಿನೈದು ದಿನಗಳಿಂದ ಅಕಾಲಿಕವಾಗಿ ಸುರಿಯುತ್ತಿರುವ ನಿರಂತರ ಮಳೆಯಿಂದ ಟೊಮೊಟೊ ಬೆಳೆ ಹಾನಿಯಾಗಿದೆ. ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರ ಟೊಮೊಟೊ ಬೆಳೆಯ ಪ್ರಮುಖ ರಾಜ್ಯಗಳಾಗಿದ್ದು, ಅಲ್ಲಿ ಭಾರಿ ಮಳೆಯಿಂದ ಬೆಳೆ ಹಾನಿಯಾಗಿದೆ.

ಕಳೆದ ತಿಂಗಳು ದೆಹಲಿ, ಕೊಲ್ಕತ್ತಾ, ಮುಂಬೈ ಸೇರಿದಂತೆ ಮಹಾನಗರಗಳಲ್ಲಿ 15ರಿಂದ 38 ರೂ.ನಷ್ಟಿದ್ದ ಟೊಮೊಟೊ ಬೆಲೆ ನಿನ್ನೆಯಿಂದಿಚೆಗೆ ಕೆ.ಜಿ.ಗೆ 72 ರೂ.ಗಳಾಗಿದೆ. ಬೆಳೆ ಹಾನಿಯಾಗಿರುವುದರಿಂದ ರೈತರಿಗೆ ನಷ್ಟವಾಗಿದೆ. ಟೊಮೊಟೊ ಮಾರುಕಟ್ಟೆಗೆ ಬರುತ್ತಿಲ್ಲ. ಬೇಡಿಕೆ ಹೆಚ್ಚಾಗಿದೆ. ಹಾಗಾಗಿ ದರ ಏರಿಕೆಯಾಗಿದೆ ಎಂದು ವರ್ತಕರು ಹೇಳಿದ್ದಾರೆ. ಬೆಂಗಳೂರು, ಹೈದರಾಬಾದ್, ಚನೈ ಸೇರಿದಂತೆ ಅನೇಕ ನಗರಗಳಲ್ಲೂ 10 ರೂ.ನಿಂದ ಟೊಮೊಟೊ ಬೆಲೆ 50 ರೂ. ದಾಟಿದೆ ಎಂದು ವರದಿಯಾಗಿದೆ.

Facebook Comments