ಬೆಂಗಳೂರಿನ ಶಿವಾಜಿನಗರದಲ್ಲಿ 30ಕ್ಕೇರಿದ ಕೊರೋನಾ ಸೋಂಕಿತರ ಸಂಖ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 16- ಶಿವಾಜಿನಗರದಲ್ಲಿ ಕೊರೊನಾ ಮಹಾಮಾರಿ ಅಟ್ಟಹಾಸ ಮುಂದುವರಿದಿದೆ. ದಿನೇ ದಿನೇ ಶಿವಾಜಿನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳುತ್ತಲೇ ಇರುವುದು ಬಿಬಿಎಂಪಿಯ ನಿದ್ದೆಗೆಡಿಸಿದೆ.

ನಿನ್ನೆಯಷ್ಟೆ ಚಾಂದಿನಿ ಚೌಕ್ ಸುತ್ತಮುತ್ತಲ ಪ್ರದೇಶಗಳ 11 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟ ಬೆನ್ನಲ್ಲೇ ಮತ್ತೆ ಅಲ್ಲಿ 14 ಹೊಸ ಪ್ರಕರಣಗಳು ಪತ್ತೆಯಾಗಿವೆ.ಶಿವಾಜಿನಗರಕ್ಕೆ ಕಂಟಕನಾಗಿದ್ದ ಹೌಸ್‍ಕೀಪರ್ ಜತೆ ಸೆಕೆಂಡರಿ ಕಾಂಟ್ಯಾಕ್ಟ್ ಹೊಂದಿದ್ದ 14 ಮಂದಿಗೆ ಸೋಂಕು ತಗುಲಿದೆ.

ನಿನ್ನೆಯವರೆಗೆ ಶಿವಾಜಿನಗರದಲ್ಲಿ 16 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಇದೀಗ ಮತ್ತೆ 14 ಪ್ರಕರಣಗಳು ಸೇರ್ಪಡೆಯಾಗಿರುವುದರಿಂದ ಶಿವಾಜಿನಗರ ಒಂದರಲ್ಲೇ 30 ಸೋಂಕಿತರು ಇರುವುದು ದೃಢಪಟ್ಟಿದೆ.

ಈ 30 ಮಂದಿಯಿಂದ ಇನ್ನೂ ಅದೆಷ್ಟು ಮಂದಿಗೆ ಸೋಂಕು ಹರಡಲಿದೆಯೋ ಎಂಬ ಆತಂಕ ಎದುರಾಗಿದೆ.ಸೋಂಕು ಹೆಚ್ಚಿರುವ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಆಗಿ ಪರಿವರ್ತಿಸಿ ಅಗತ್ಯ ಮುನ್ನೆಚ್ಚರಿಕೆ ಕೈಗೊಂಡಿದ್ದರೂ ಸ್ಥಳೀಯರು ಕಳ್ಳ ಮಾರ್ಗಗಳಲ್ಲಿ ಇತರ ಪ್ರದೇಶಗಳಿಗೆ ತೆರಳಿ ವಾಪಸಾಗುತ್ತಿರುವುದರಿಂದ ಅಕ್ಕಪಕ್ಕದ ಪ್ರದೇಶಗಳಿಗೂ ಸೋಂಕು ಹರಡುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.

ಹೀಗಾಗಿ ಶಿವಾಜಿನಗರದ ಮೇಲೆ ಬಿಬಿಎಂಪಿ ಸಿಬ್ಬಂದಿ ಮತ್ತು ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಹಲವಾರು ಶಂಕಿತರ ಸ್ವಾಬ್ ಟೆಸ್ಟ್ ನಡೆಸುತ್ತಿದ್ದಾರೆ.

Facebook Comments

Sri Raghav

Admin