ಲಾಕ್‍ಡೌನ್ ನಿಂದ ರಾಜ್ಯ ಸರ್ಕಾರಕ್ಕಾದ ನಷ್ಟ ಎಷ್ಟು ಗೊತ್ತೇ..? ಇಲ್ಲಿದೆ ಲೆಕ್ಕಾಚಾರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 12- ರಾಜ್ಯದಲ್ಲಿ ಮಾರಕ ಕೊರೊನಾ ಸೋಂಕು ತಲ್ಲಣ ಸೃಷ್ಟಿಸಿದ್ದು, ಹಲವು ಸೇವೆಗಳು ಸ್ಥಗಿತಗೊಂಡಿವೆ. ಹೀಗಾಗಿ ರಾಜ್ಯದ ಬೊಕ್ಕಸಕ್ಕೆ ಬರೋಬರಿ 10,675 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಆರಂಭದಲ್ಲಿ ಲಾಕ್‍ಡೌನ್ ನಿಯಮ ಕಠಿಣಗೊಂಡಿದ್ದರಿಂದ 2020-21ನೇ ಸಾಲಿನ ಆರ್ಥಿಕ ವರ್ಷದಲ್ಲಿ ಸರ್ಕಾರಕ್ಕೆ ಬರಬೇಕಿದ್ದ ಎಲ್ಲಾ ಆದಾಯ ಸ್ಥಗಿತಗೊಂಡಿತ್ತು. ತೆರಿಗೆ, ಅಬಕಾರಿ, ಅಂಚೆ ಚೀಟಿ, ನೋಂದಾಣಿ, ಸಾರಿಗೆಗಳಿಂದ ಬರಬೇಕಿದ್ದ ಆದಾಯ ಬಾರದ ಕಾರಣ ರಾಜ್ಯದ ಬೊಕ್ಕಸಕ್ಕೆ ಬರೋಬರಿ 10,675 ಕೋಟಿ ರೂ. ನಷ್ಟ ಸಂಭವಿಸಿದೆ.

ಏಪ್ರಿಲ್ ತಿಂಗಳಿನಲ್ಲಿ ವಾಣಿಜ್ಯ ತೆರಿಗೆ ರೂ.6,870.25 ಕೋಟಿ, ಅಬಕಾರಿ ರೂ.1,891.6, ಅಂಚೆ ಮತ್ತು ನೋಂದಾವಣಿ ರೂ.1,054 ಕೋಟಿ ಹಾಗೂ ಸಾರಿಗೆ ರೂ.592.91 ಕೋಟಿ ಸಂಗ್ರಹವಾಗಿಬೇಕಿತ್ತು. ಆದರೆ, 10,675 ಕೋಟಿ ರೂ. ನಷ್ಟವಾದ್ದರಿಂದ, 2020-2021ರ ಆರ್ಥಿಕ ವರ್ಷದಲ್ಲಿ ಸುಮಾರು 1/12 ನೇ ಅಂದಾಜು ಆದಾಯವನ್ನು ಕಳೆದುಕೊಳ್ಳಲಾಗಿದೆ.

ಈ ಪೈಕಿ ಆದಾಯ ಮೂಲವಾದ ವಾಣಿಜ್ಯ ತೆರಿಗೆ ಸಂಗ್ರಹದಲ್ಲಿ ಭಾರೀ ಖೋತಾ ಆಗಿದೆ. 3,900 ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹದಲ್ಲಿ ಕೊರತೆ ಆಗಿದೆ. ಇದರ ಜತೆಗೆ ಮೋಟಾರು ವಾಹನ ತೆರಿಗೆ 630 ಕೋಟಿ ರೂ., ಮುಂದ್ರಾಂಕ ಮತ್ತು ನೋಂದಣಿ ತೆರಿಗೆ 450 ಕೋಟಿ ರೂ. ನಷ್ಟ ಆಗಿದೆ.

ಸಾಮನ್ಯವಾಗಿ ಮಾಸಿಕ 4,500 ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹವಾಗುತ್ತದೆ. ಆದರೆ, ಲಾಕ್‍ಡೌನ್‍ನಿಂದ ತೆರಿಗೆ ಸಂಗ್ರಹ ಪ್ರಮಾಣ ಸುಮಾರು 1500 ಕೋಟಿ ರೂ.ನಷ್ಟು ಕಡಿಮೆ ಆಗಲಿದೆ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಲಾಕ್‍ಡೌನ್ ಸಡಿಲಗೊಳಿಸಿದ ಬಳಿಕ ಅಬಕಾರಿ ಸುಂಕದ ಹೆಚ್ಚಳವೂ 2,530 ಕೋಟಿ ರೂ. ತಂದುಕೊಟ್ಟಿದೆ. 2019ನೇ ವರ್ಷದ ನವೆಂಬರ್ ತಿಂಗಳರವರೆಗೆ ಜಿಎಸ್‍ಟಿ ಪರಿಹಾರ ಸ್ವೀಕರಿಸಿದ ಪರಿಣಾಮ 5,000 ಕೋಟಿ ರೂ. ಬಾಕಿಯಿದೆ ಎಂದು ಹಣಕಾಸು ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.

ಇನ್ನು, ಲಾಕ್‍ಡೌನ್‍ನಿಂದಾಗಿ ದೇಶದ ಖಾಸಗಿ ಸಂಸ್ಥೆಗಳು, ಸರ್ಕಾರದ ಇಲಾಖೆಗಳು, ಸಾರಿಗೆ ಸಂಸ್ಥೆಗಳು, ಅಂಗಡಿಗಳು ಭಾರೀ ನಷ್ಟವನ್ನು ಅನುಭವಿಸುತ್ತಿವೆ. ಇದಕ್ಕೆ ಕರ್ನಾಟಕವೂ ಹೊರತಾಗಿಲ್ಲ. ರಾಜ್ಯದ ಸಾರಿಗೆ ಸಂಸ್ಥೆಗಳು ತೀವ್ರ ಆರ್ಥಿಕ ಸಂಕಷ್ಟಕ್ಕೀಡಾಗಿದ್ದು, 1 ತಿಂಗಳಿಗೆ ಸಂಬಳ ನೀಡಲು 130 ಕೋಟಿ ರೂ. ಬೇಕು. ಇಷ್ಟು ದೊಡ್ಡ ಮೊತ್ತವಿಲ್ಲದ ಕಾರಣ ಸಾರಿಗೆ ನಿಗಮಗಳ ನೌಕಕರಿಗೆ ಸಂಬಳ ನೀಡುವುದು ಕಷ್ಟಕರವಾಗಿದೆ.

# ಜಿಎಸ್‍ಟಿ ತೆರಿಗೆಯಲ್ಲಿನ ನಷ್ಟ ಎಷ್ಟು..?
ವ್ಯಾಪಾರ-ವಹಿವಾಟು ಸ್ಥಗಿತದಿಂದ ಬಹುತೇಕ ಜಿಎಸ್‍ಟಿ ತೆರಿಗೆ ಸಂಗ್ರಹವೂ ಪಾತಾಳಕ್ಕೆ ಇಳಿದಿದೆ. ಸಾಮಾನ್ಯವಾಗಿ ಒಂದು ತಿಂಗಳಲ್ಲಿ ಜಿಎಸ್‍ಟಿ ತೆರಿಗೆ ಸುಮಾರು 7,000 ಕೋಟಿ ರೂ. ಸಂಗ್ರಹ ಆಗಬೇಕು.

ಅಂದರೆ ಒಂದು ವಾರದಲ್ಲಿ ಸುಮಾರು 1,750 ಕೋಟಿ ರೂ. ಜಿಎಸ್‍ಟಿ ತೆರಿಗೆ ಸಂಗ್ರಹವಾಗುತ್ತದೆ. ಆದರೆ, ಲಾಕ್‍ಡೌನ್ ಹಿನ್ನೆಲೆ ಸರ್ಕಾರಕ್ಕೆ ಕಳೆದ ಮೂರು ವಾರಗಳಲ್ಲಿ ಸುಮಾರು 4,000 ಕೋಟಿ ರೂ. ಜಿಎಸïಟಿ ತೆರಿಗೆ ನಷ್ಟ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರ್ಥಿಕ ಸಂಕಷ್ಟದ ಮಧ್ಯೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಸಂಜೀವಿನಿ ಎಂಬಂತೆ ಅಲ್ಪ ಆರ್ಥಿಕ ನೆರವನ್ನು ನೀಡಿದೆ. ಕೋವಿಡ್-19 ನಿಯಂತ್ರಿಸಲು ಕೇಂದ್ರ ಸರ್ಕಾರ ಎಸ್‍ಡಿಆರೆಫ್‍ನಿಂದ ಮೊದಲ ಕಂತಿನಲ್ಲಿ ಎಲ್ಲಾ ರಾಜ್ಯಗಳಿಗೆ 11,092 ಕೋಟಿ ರೂ. ಬಿಡುಗಡೆ ಮಾಡಿದ್ದು, ಈ ಪೈಕಿ ಕರ್ನಾಟಕದ ಪಾಲಿನ 395 ಕೋಟಿ ರೂ. ಪಾವತಿಯಾಗಿದೆ.

15ನೆ ಹಣಕಾಸು ಆಯೋಗದ ಮೂಲಕ ಕೇಂದ್ರ ಸರ್ಕಾರದ ತೆರಿಗೆ ಪಾಲಿನಲ್ಲಿ ಮೊದಲ ಕಂತಾಗಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರ 1,679 ಕೋಟಿ ರೂ. ಬಿಡುಗಡೆ ಮಾಡಿದೆ. ಇತ್ತ ನವೆಂಬರ್- ಡಿಸೆಂಬರ್ ತಿಂಗಳಲ್ಲಿ ಬಾಕಿ ಇದ್ದ ಜಿಎಸ್‍ಟಿ ತೆರಿಗೆ ಪರಿಹಾರ ಮೊತ್ತವಾದ 1,580 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.

ಇನ್ನು ಜನವರಿ-ಫೆಬ್ರವರಿ ತಿಂಗಳ ರಾಜ್ಯದ ಜಿಎಸ್‍ಟಿ ಪರಿಹಾರ ಮೊತ್ತವಾದ 3,500 ಕೋಟಿ ರೂ. ಬರಬೇಕಾಗಿದೆ. ಮೊದಲ ಕಂತಿನಲ್ಲಿ ಕೇಂದ್ರ ಸರ್ಕಾರದಿಂದ ಬಾಕಿ ಜಿಎಸ್‍ಟಿ ತೆರಿಗೆ ಪರಿಹಾರ ಮೊತ್ತ, ಕೇಂದ್ರದ ತೆರಿಗೆ ಪಾಲು ಸೇರಿ ರಾಜ್ಯಕ್ಕೆ ಸುಮಾರು 7,000-8,000 ಕೋಟಿ ರೂ. ಬರಬೇಕಾಗಿದೆ.

ಸದ್ಯ ಲಾಕ್‍ಡೌನ್ ಸಡಿಲಗೊಳಿಸಿದ ಬಳಿಕ ಅಬಕಾರಿ ಸುಂಕದ ಹೆಚ್ಚಳವೂ 2,530 ಕೋಟಿ ರೂ. ಆದಾಯ ತಂದುಕೊಟ್ಟಿದೆ. 2019ನೇ ವರ್ಷದ ನವೆಂಬರ್ ತಿಂಗಳರವರೆಗೆ ಜಿಎಸ್‍ಟಿ ಪರಿಹಾರ ಸ್ವೀಕರಿಸಿದ ಪರಿಣಾಮ 5,000 ಕೋಟಿ ರೂ. ಬಾಕಿಯಿದೆ.

Facebook Comments

Sri Raghav

Admin