ಪ್ರವಾಸೋದ್ಯಮ ಪ್ರಗತಿಗೆ ಸಂಕಲ್ಪ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.18- ಅತ್ಯುತ್ತಮ ಪ್ರವಾಸಿ ತಾಣಗಳನ್ನು ಹೊಂದಿರುವ ಕರ್ನಾಟಕವನ್ನು ರಾಷ್ಟ್ರ ದಲ್ಲೇ ಐದನೇ ಸ್ಥಾನಕ್ಕೆ ಕೊಂಡೊಯ್ಯಲು ಸರ್ಕಾರ ಬದ್ದವಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.  ಖಾಸಗಿ ಹೋಟೆಲ್‍ನಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ  2020-25ರ ಪ್ರವಾಸೋದ್ಯಮ ನೀತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕ ದೇಶವಿದೇಶಗಳಲ್ಲಿ ವಿಶ್ವ ಪ್ರಸಿದ್ದವಾದ ಪ್ರವಾಸಿ ತಾಣಗಳನ್ನು ಹೊಂದಿದೆ. ಪ್ರವಾಸಿಗರನ್ನು ಆಕರ್ಷಿಸಲು ಬಜೆಟ್‍ನಲ್ಲಿ ಹೆಚ್ಚಿನ ಹಣಕಾಸಿನ ನೆರವು, ಪ್ರವಾಸಿಗರಿಗೆ ಮೂಲಭೂತ ಸೌಕರ್ಯ ಸೇರಿದಂತೆ ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದರು.  ಇನ್ನು ಕೆಲವೇ ತಿಂಗಳಲ್ಲಿ ಕರ್ನಾಟಕವನ್ನು ರಾಷ್ಟ್ರಮಟ್ಟದಲ್ಲಿ ಪ್ರವಾಸೋದ್ಯಮ ಸ್ಥಾನಗಳ ಪೈಕಿ 5ನೇ ಸ್ಥಾನಕ್ಕೆ ಕೊಂಡೊಯ್ಯುಲು ಅಮೂಲಾಗ್ರ ಬದಲಾವಣೆಯಾಗಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.

ಸುಧಾ ನಾರಾಯಣಮೂರ್ತಿ ಅವರನ್ನು ಪ್ರವಾಸೋದ್ಯಮ ಇಲಾಖೆಗೆ ಕಾರ್ಯಪಡೆ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಈಗಾಗಲೇ ವಿಷನ್ ಗ್ರೂಪ್‍ನಡಿ 33 ಕಾಮಗಾರಿಗಳಿಗೆ 149 ಕೋಟಿ ವೆಚ್ಚದಲ್ಲಿ ಅನುಮೋದನೆ ನೀಡಿದ್ದೇವೆ ಎಂದು ಹೇಳಿದರು.  ಇನ್ನು ಕಾರ್ಯಪಡೆ ಸಲ್ಲಿಸಿರುವ ವರದಿಯಂತೆ ನಮ್ಮ ಸರ್ಕಾರ 105 ಕೋಟಿ ವೆಚ್ಚದಲ್ಲಿ 144 ಕಾಮಗಾರಿಗಳಿಗೂ ಅನುಮೋದನೆ ನೀಡಲಾಗಿದೆ. ಪ್ರವಾಸೋದ್ಯಮ ಇಲಾಖೆಗೆ ಪಾಲುದಾರರು ಕೈಜೋಡಿಸಿದಾಗ ಮಾತ್ರ ಅಭಿವೃದ್ದಿಯಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಪ್ರವಾಸೋದ್ಯಮ ಇಲಾಖೆಯು ಶೇ.14ರಷ್ಟು ಆದಾಯವನ್ನು ಜಿಡಿಪಿ ಬೆಳವಣಿಗೆಗೆ ನೀಡಿದೆ. ಮುಂದಿನ ದಿನಗಳಲ್ಲಿ ಇದನ್ನು ಹೆಚ್ಚಳಮಾಡಲು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕು ಎಂದು ಸಿಎಂ ಸೂಚಿಸಿದರು.  ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಮಾತನಾಡಿ, ಪ್ರವಾಸೋದ್ಯಮ ಇಲಾಖೆಯಿಂದ ರಾಜ್ಯದ ಬೊಕ್ಕಸಕ್ಕೆ ಬರುವ ಆದಾಯದ ಪ್ರಮಾಣವನ್ನು ಶೇ.20ರಷ್ಟು ಹೆಚ್ಚಳ ಮಾಡಲು ಪ್ರವಾಸಿಗರಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ ಎಂದು ಅಧಿಕಾರಿಗಳಿಗೆ ಸೂಚನೆ ಕೊಟ್ಟರು.

ಈ ಹಿಂದೆ ಪ್ರವಾಸೋದ್ಯಮ ಇಲಾಖೆಯಿಂದ ಸರ್ಕಾರದ ಬೊಕ್ಕಸಕ್ಕೆ ಶೇ.14.25ರಷ್ಟು ಆದಾಯ ಬರುತ್ತಿತ್ತು. ಇದನ್ನು ಶೇ.20ರಷ್ಟು ಹೆಚ್ಚಳ ಮಾಡಲು ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕಿದೆ ಎಂದರು.  ದೇಶ, ವಿದೇಶಗಳಿಂದ ರಾಜ್ಯಕ್ಕೆ ಆಗಮಿಸುವ ಪ್ರವಾಸಿಗರನ್ನು ಸೆಳೆಯಲು ಪ್ರವಾಸೋದ್ಯಮ ಸ್ಥಳಗಳಲ್ಲಿ ಆಕರ್ಷಣೀಯವಾದ ಕಾರ್ಯಕ್ರಮಗಳನ್ನು ರೂಪಿಸಬೇಕೆಂದು ಸಲಹೆ ಮಾಡಿದರು.

ದೇಶದಲ್ಲೇ ಕರ್ನಾಟಕ ಅತ್ಯಂತ ಶ್ರೀಮಂತ ರಾಜ್ಯವಾಗಿದೆ. ವಿಶ್ವ ಪ್ರಸಿದ್ದ, ಐತಿಹಾಸಿಕ ಪ್ರವಾಸಿ ತಾಣಗಳಿವೆ. ಈ ಸ್ಥಳಗಳಲ್ಲಿ ಪ್ರವಾಸಿಗರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವುದು ನಿಮ್ಮ ಮುಂದಿರುವ ಬಹುದೊಡ್ಡ ಸವಾಲು ಎಂದರು.  ಪ್ರವಾಸೋದ್ಯಮದಲ್ಲಿ ಕರ್ನಾಟಕ ಶ್ರೀಮಂತರಾಜ್ಯವಾಗಿದ್ದರೂ ನಾವು ನಿರೀಕ್ಷಿಸಿದ ಗುರಿಯನ್ನು ತಲುಪಲು ಸಾಧ್ಯವಾಗುತ್ತಿಲ್ಲ.ಇದಕ್ಕೆ ಕಾರಣಗಳೇನು ಎಂಬುದನ್ನು ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ. ಪ್ರವಾಸಿಗರಿಗೆ ಅನುಕೂಲವಾಗುವಂತಹ ಪ್ರವಾಸೋದ್ಯಮ ನೀತಿಯನ್ನು ಜಾರಿ ಮಾಡುವುದಾಗಿ ತಿಳಿಸಿದರು.

ಪ್ರವಾಸೋದ್ಯಮ ಟಾಸ್ಕ್‍ಫೋರ್ಸ್ ಮುಖ್ಯಸ್ಥೆ ಡಾ.ಸುಧಾಮೂರ್ತಿ ಮಾತನಾಡಿ, ನಮ್ಮ ಟಾಸ್ಫೋರ್ಸ್ ಹೊಸ ಪ್ರವಾಸೋದ್ಯಮ ನೀತಿಯನ್ನು ಜಾರಿಗೆ ತರುತ್ತಿದೆ. ಇದು ಪ್ರವಾಸಿಗರನ್ನು ಆಕರ್ಷಿಸಲು ಸುಲಭವಾಗುತ್ತದೆ ಎಂದು ಅಭಿಪ್ರಾಯಪಟ್ಟರು.  ಪ್ರವಾಸೋದ್ಯಮದಿಂದ ಸಾಕಷ್ಟು ಸ್ಥಳೀಯ ಉದ್ಯೋಗಗಳು ಸೃಷ್ಟಿಯಾಗುತ್ತವೆ.

ಈ ಕ್ಷೇತ್ರವನ್ನು ಅಭಿವೃದ್ದಿ ಪಡಿಸಿದರೆ ಬೊಕ್ಕಸಕ್ಕೂ ಹೆಚ್ಚಿನ ವರಮಾನ ಬರಲಿದೆ. ಕರ್ನಾಟಕ ಶ್ರೀಮಂತ ಪರಂಪರೆಯನ್ನು ಹೊಂದಿದೆ. ವಿಶ್ವದ ಯಾವುದೇ ಭಾಗದಲ್ಲೂ ಕಡಿಮೆ ಇಲ್ಲದಂತಹ ಆಕರ್ಷಣೀಯ ಸ್ಥಳಗಳು ನಮ್ಮಲ್ಲಿವೆ. ಸರ್ಕಾರ ಇದಕ್ಕೆ ಹೆಚ್ಚಿನ ಗಮನಕೊಡಬೇಕೆಂದು ಸಲಹೆ ಮಾಡಿದರು.  ಕಾರ್ಯಾಗಾರವು ಎರಡು ದಿನಗಳ ಕಾಲ ನಡೆಯಲಿದೆ. ಮೊದಲ ದಿನವಾದ ಇಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಕಾರ್ಯಾಗಾರಕ್ಕೆ ಚಾಲನೆ ಕೊಟ್ಟರು. ಕಂದಾಯ ಸಚಿವ ಆರ್.ಅಶೋಕ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

Facebook Comments