ದೇಶದ ಮೊದಲ ಆಟಿಕೆ ಉತ್ಪಾದನಾ ಘಟಕಕ್ಕೆ ಸಿಎಂ ಬಿಎಸ್‍ವೈ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.9- ಆತ್ಮನಿರ್ಭರ ಭಾರತ ಅಭಿಯಾನದಡಿ ವೋಕಲ್ ಫಾರ್ ಲೋಕಲ್ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಕರೆಗೆ ಪೂರಕವಾಗಿ ದೇಶದ ಮೊಟ್ಟ ಮೊದಲ ಆಟಿಕೆ ಉತ್ಪಾದನಾ ಘಟಕಕ್ಕೆ ಕೊಪ್ಪಳದಲ್ಲಿ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕೃತವಾಗಿ ಚಾಲನೆ ಕೊಟ್ಟರು.  ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಬಾನಾಪುರದಲ್ಲಿ ಏಕಾಸ್ ಕಂಪನಿ ನಿರ್ಮಿಸುತ್ತಿರುವ ಸುಮಾರು 5 ಸಾವಿರ ಕೋಟಿ ವೆಚ್ಚದ, 400 ಎಕರೆ ಜಮೀನಿನಲ್ಲಿ ದೇಶದಲ್ಲೇ ಮೊಟ್ಟ ಮೊದಲ ಆಟಿಕೆ ಉತ್ಪಾದನ ಘಟಕ ತಲೆಎತ್ತಲಿದೆ.

ಸಿಎಂ ಬಿಎಸ್‍ವೈ , ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಕೃಷಿ ಸಚಿವ ಬಿ.ಸಿ.ಪಾಟೀಲ್, ಕೊಪ್ಪಳ ಸಂಸದ ಕರಡಿ ಸಂಗಣ್ಣ, ಮಾಜಿ ಸಚಿವರಾದ ಆರ್.ವಿ.ದೇಶಪಾಂಡೆ, ಬಸವರಾಜರಾಯರೆಡ್ಡಿ, ಶಾಸಕ ಆಚಾರ್ ಹಾಲಪ್ಪ ಸೇರಿದಂತೆ ಮತ್ತಿತರರು ಘಟಕಕ್ಕೆ ಇಂದು ಭೂಮಿ ಪೂಜೆ ನೆರವೇರಿಸಿದರು.

ಈ ಕ್ಲಸ್ಟರ್‍ನಿಂದ 40 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ. ಆಟಿಕೆ ತಯಾರಿಕೆ ಮೂಲಕ ಆರ್ಥಿಕ ಚಟುವಟಿಕೆ ಹೆಚ್ಚಿಸುವ ಜತೆಗೆ ಉದ್ಯೋಗ ಸೃಷ್ಟಿಗೆ ಬಲ ತುಂಬಲು ಇದರಿಂದ ಸಹಕಾರಿಯಾಗಲಿದೆ.  ಇಲ್ಲಿ ದೇಶ-ವಿದೇಶಗಳ ಆಟಿಕೆ ತಯಾರಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು.

ಒಟ್ಟಾರೆ 400 ಎಕರೆ ವಿಶೇಷ ಆರ್ಥಿಕ ವಲಯದಲ್ಲಿ 5 ಸಾವಿರ ಕೋಟಿ ರೂ.ಹೂಡಿಕೆ ಮಾಡುವ ಅಂದಾಜಿದ್ದು, ಮಕ್ಕಳ ಆಟದ ಸಾಮಾನು ಉತ್ಪಾದನಾ ಕ್ಷೇತ್ರದಲ್ಲಿ ಕೊಪ್ಪಳ ಶೇ.18ರಷ್ಟು ಕೊಡುಗೆ ನೀಡಲಿದೆ. 2023ರ ವೇಳೆಗೆ 2, 300 ಕೋಟಿ ರೂ. ಮೊತ್ತದಷ್ಟು ಮಾರುಕಟ್ಟೆ ಕ್ಷೇತ್ರವನ್ನು ವಿಸ್ತರಿಸಿಕೊಳ್ಳುವ ನಿರೀಕ್ಷೆ ಇದೆ. ಕಿನ್ನಾಳ ಆಟಿಕೆ ಖ್ಯಾತಿಯ ಕೊಪ್ಪಳದಲ್ಲಿ ಸ್ಥಾಪನೆಯಾಗುತ್ತಿರುವ ದೇಶದ ಮೊಟ್ಟ ಮೊದಲ ಆಟಿಕೆ ಕ್ಲಸ್ಟರ್‍ನಲ್ಲಿ ಹೂಡಿಕೆ ಮಾಡಲು ದೇಶ, ವಿದೇಶಗಳ ಆಟಿಕೆ ತಯಾರಕರಿಗೆ ರಾಜ್ಯ ಸರ್ಕಾರ ಮುಕ್ತ ಆಹ್ವಾನ ನೀಡಿದೆ.

# ಕೊಪ್ಪಳ ಟಾಯ್ಸ್ ಕ್ಲಸ್ಟರ್:
ಕೊಪ್ಪಳ ಟಾಯ್ ಕ್ಲಸ್ಟರ್ ರಾಷ್ಟ್ರೀಯ ಹೆದ್ದಾರಿ 63ರಲ್ಲಿದ್ದು, ಉತ್ತಮ ಸಂಪರ್ಕ ವ್ಯವಸ್ಥೆ ಹೊಂದಿದೆ. ಜತೆಗೆ, ವಾಣಿಜ್ಯ ನಗರ ಹುಬ್ಬಳ್ಳಿಗೆ ಸಮೀಪದಲ್ಲಿದೆ. ಕುಶಲ ಕರ್ಮಿಗಳಿಗೆ ವಿಫುಲ ಉದ್ಯೋಗಾವಕಾಶ ಕಲ್ಪಿಸುವ ಆಟಿಕೆ ಉದ್ಯಮದಿಂದ ಮುಂಬರುವ ದಿನಗಳಲ್ಲಿ ಬರೋಬ್ಬರಿ 1,00,000 ನೇರ ಹಾಗೂ ಪರೋಕ್ಷ ಉದ್ಯೋಗ ಸೃಷ್ಟಿ ಆಗುವ ನಿರೀಕ್ಷೆ ಇದೆ.

ದೇಶದ ಪ್ರಮುಖ ಆಟಿಕೆ ಕ್ಲಸ್ಟರ್ ಆಗಿ ಹೊರಹೊಮ್ಮಲು ಸಜ್ಜಾಗಿರುವ ಕರ್ನಾಟಕ, ಆಟಿಕೆ ತಯಾರಿಸುವ ಕೈಗಾರಿಕೆಗಳಿಗೆ ಪೂರಕ ವ್ಯವಸ್ಥೆ ಕಲ್ಪಿಸಲಿದೆ. ಇದರ ಫಲವಾಗಿ ಆಟಿಕೆ ಉದ್ಯಮ ಸಿಎಜಿಆರ್‍ನ (2010-17) ಶೇ.18ರಷ್ಟು ಪ್ರಗತಿ ಸಾಧಿಸಿದ್ದು, 2023ರ ವೇಳೆಗೆ 310 ದಶಲಕ್ಷ ಡಾಲರ್ ತಲುಪುವ ನಿರೀಕ್ಷೆಯಿದೆ.

ಕರ್ನಾಟಕವನ್ನು ಭಾರತದ ಆಟಿಕೆ ಉತ್ಪಾದನಾ ಕೇಂದ್ರವಾಗಿಸಲು ಮತ್ತು ಆಟಿಕೆ ಕ್ಷೇತ್ರಕ್ಕೆ ಉತ್ತೇಜನ ನೀಡುವ ರಾಜ್ಯ ಸರ್ಕಾರದ ಪ್ರಯತ್ನದ ಭಾಗವಾಗಿ, ಉತ್ಪನ್ನ ನಿರ್ದಿಷ್ಟ ಕೈಗಾರಿಕಾ ಕ್ಲಸ್ಟರ್ ಅಭಿವೃದ್ಧಿ (ಪಿಎಸ್‍ಐಸಿಡಿ) ಕಾರ್ಯಕ್ರಮ ರೂಪಿಸಲಾಗಿದೆ.

ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಪಾಲು ಹೆಚ್ಚಿಸುವುದು, ಕೈಗಾರಿಕಾ ಅಗತ್ಯತೆಗಳನ್ನು ಪೂರೈಸುವ ಅತ್ಯಾಧುನಿಕ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು, ಅಗತ್ಯ ಆಧಾರಿತ ಕೌಶಲ ಅಭಿವೃದ್ಧಿ ಸುಧಾರಿಸುವುದು ಮತ್ತು ಸಮತೋಲಿತ ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಸಾಧಿಸುವುದು ಮತ್ತು 700 ದಶಲಕ್ಷ ಡಾಲರ್ ಹೂಡಿಕೆ ಆಕರ್ಷಿಸುವುದು ಕ್ಲಸ್ಟರ್‍ನ ಮೂಲ ಉದ್ದೇಶವಾಗಿದೆ.

Facebook Comments