ಕೊರೊನಾ ಸೋಂಕಿತರನ್ನು ಪತ್ತೆಹಚ್ಚಲು ರೆಡಿಯಾಯ್ತು ಸಂಪರ್ಕ ಪತ್ತೆ ತಂಡ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.7- ನಗರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಕೊರೊನಾ ಸೋಂಕು ಪೀಡಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರ ಜತೆ ಸಂಪರ್ಕ ಹೊಂದಿರುವವರನ್ನು ಪತ್ತೆಹಚ್ಚಲು ಸರ್ಕಾರ ಸಂಪರ್ಕ ಪತ್ತೆ ತಂಡಗಳನ್ನು ರಚಿಸಿದೆ.

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ 1013 ನೌಕರರನ್ನು ಸಂಪರ್ಕ ತಂಡದ ಸದಸ್ಯರನ್ನಾಗಿ ನೇಮಿಸಿ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್‍ಭಾಸ್ಕರ್ ಆದೇಶ ಹೊರಡಿಸಿದ್ದಾರೆ.

ಸರ್ಕಾರದ ಎ, ಬಿ ಮತ್ತು ಸಿ ವರ್ಗದ ನೌಕರರು ತಮ್ಮ ದೈನಂದಿನ ಕೆಲಸ-ಕಾರ್ಯಗಳ ಜತೆಗೆ ಕೊರೊನಾ ಸೋಂಕಿತರ ಪತ್ತೆಕಾರ್ಯದಲ್ಲೂ ತೊಡಗಿಸಿಕೊಳ್ಳಬೇಕು ಎಂದು ವಿಜಯ್‍ಭಾಸ್ಕರ್ ಸ್ಪಷ್ಟ ಸೂಚನೆ ನೀಡಿದ್ದಾರೆ. ನಗರ ಮತ್ತು ಹೊರವಲಯಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ದ್ವಿಗುಣಗೊಳ್ಳುತ್ತಲೇ ಇದೆ.

ಸೋಂಕಿತರ ಜತೆ ಸಂಪರ್ಕವಿರಿಸಿಕೊಂಡವರನ್ನು ಪತ್ತೆಹಚ್ಚುವುದು ಸವಾಲಿನ ಕೆಲಸವಾಗಿದೆ. ಹೀಗಾಗಿ ಸೋಂಕಿತರೊಂದಿಗೆ ಸಂಪರ್ಕ ಹೊಂದಿರುವವರನ್ನು ಪತ್ತೆಹಚ್ಚಲು ಸಂಪರ್ಕ ಪತ್ತೆ ತಂಡ ರಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಆಡಳಿತ ತರಬೇತಿ ಸಂಸ್ಥೆಯ ಮುಖ್ಯಸ್ಥರಾದ ಮಂಜುಳಾ ಅವರು ಸಂಪರ್ಕ ಪತ್ತೆ ತಂಡದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಾಂತಿನಗರದ ಟಿಟಿಎಂಸಿ ಬಿ ಬ್ಲಾಕ್‍ನಲ್ಲಿರುವ ಭೂ ಸಾರಿಗೆ ನಿರ್ದೇಶನಾಲಯದಲ್ಲಿ ಕಚೇರಿ ಇದ್ದು, ಸಂಪರ್ಕ ಪತ್ತೆ ಕಾರ್ಯಕ್ಕೆ ನಿಯೋಜನೆಗೊಂಡಿರುವ ನೌಕರರು ಈ ಕೂಡಲೇ ಕಚೇರಿಗೆ ತೆರಳಿ ವರದಿ ಮಾಡಿಕೊಳ್ಳುವುದರ ಜತೆಗೆ ಕೋವಿಡ್ ಸಂಪರ್ಕದಲ್ಲಿರುವ ವ್ಯಕ್ತಿಗಳನ್ನು ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು.

ಈ ಆದೇಶವನ್ನು ಯಾವುದೇ ಅಧಿಕಾರಿಗಳು ಉಲ್ಲಂಘಿಸಿದರೆ ಅಥವಾ ಅವಿಧೇಯತೆ ತೋರಿದರೆ ಅಂತಹವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ-2005 ಸೆಕ್ಷನ್ 56ರ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ವಿಜಯ್‍ಭಾಸ್ಕರ್ ಎಚ್ಚರಿಸಿದ್ದಾರೆ.

Facebook Comments