ಕಾಡಾನೆಗಳ ದಾಳಿಗೆ ಟ್ರ್ಯಾಕ್ಟರ್ ಜಖಂ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ , ಮಾ.7- ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಮುಂದುವರೆದಿದ್ದು, ಕಳೆದ ರಾತ್ರಿ ಟ್ರ್ಯಾಕ್ಟರ್ ಮೇಲೆ ಕಾಡಾನೆ ಹಿಂಡುಗಳು ದಾಳಿ ಮಾಡಿ ಉರುಳಿಸಿರುವ ಘಟನೆ ಸಕಲೇಶಪುರ ತಾಲ್ಲೂಕಿನ ವಡೂರು ಗ್ರಾಮದಲ್ಲಿ ನಡೆದಿದೆ. ಆನಂದ್ ಎಂಬುವವರು ಕಾಫಿ ಗಿಡಗಳಿಗೆ ನೀರು ಹಾಯಿಸುವ ಸಲುವಾಗಿ ಟ್ರ್ಯಾಕ್ಟರ್ ಅನ್ನು ಕಾಫಿ ತೋಟದಲ್ಲಿ ನಿಲ್ಲಿಸಿದ್ದರು.

ಮರಿ ಆನೆಗಳೊಂದಿಗೆ ತೋಟಕ್ಕೆ ಕಾಡಾನೆಗಳ ಹಿಂಡು ನುಗ್ಗಿದ್ದು, ಇವುಗಳನ್ನು ಕಂಡ ನಾಯಿಗಳು ಬೊಗಳುವ ಶಬ್ಧಕ್ಕೆ ಆಕ್ರೋಶಗೊಂಡ ಆನೆಗಳು ನಾಯಿಗಳನ್ನು ಬೆನ್ನತ್ತಿ ಹೋಗುವಾಗ ಎದುರಿಗೆ ಇದ್ದ ಟ್ರ್ಯಾಕ್ಟರ್ ಅನ್ನು ಮನ ಬಂದಂತೆ ಉರುಳಿಸಿ ನಜ್ಜುಗುಜ್ಜು ಮಾಡಿವೆಇಂಜಿನ್ ಹಾಗೂ ಟ್ರೈಲರ್ ಸಂಪೂರ್ಣವಾಗಿ ನಾಶವಾಗಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಕಲೇಶಪುರ , ಆಲೂರು ಭಾಗದಲ್ಲಿ ಕಾಡಾನೆಗಳು ಪ್ರತಿ ನಿತ್ಯ ತೋಟಗಳಿಗೆ ಲಗ್ಗೆ ಇಟ್ಟು ಬೆಳೆಗಳನ್ನು ನಾಶ ಮಾಡುವುದಲ್ಲದೆ ನೀರಾವರಿ ಉಪಕರಣಗಳನ್ನು ನಾಶ ಮಾಡುತ್ತಿವೆ.
ಹಲವು ಬಾರಿ ಅರಣ್ಯ ಇಲಾಖೆಗೆ ಮಾಹಿತಿ ನೀಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ನಷ್ಟದ ಬಗ್ಗೆ ಅರ್ಜಿ ಸಲ್ಲಿಸಿ ಪರಿಹಾರ ನೀಡುವುದಾಗಿ ಹೇಳಿಕೆ ನೀಡುತ್ತಾರೆಯೇ ಹೊರತು ಆನೆಗಳ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

Facebook Comments