ಟ್ರ್ಯಾಕ್ಟರ್ ಭದ್ರಕೋಟೆ ಭೇದಿಸಲು ಬೆಂಗಳೂರು ಪೊಲೀಸರು ಚಕ್ರವ್ಯೂಹ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.26- ರೈತರ ಟ್ರ್ಯಾಕ್ಟರ್ ಭದ್ರಕೋಟೆ ಭೇದಿಸಲು ನಗರದಲ್ಲಿ ಪೊಲೀಸ್ ಚಕ್ರವ್ಯೂಹ ರಚಿಸಲಾಗಿದೆ. ಕೇಂದ್ರ ಸರ್ಕಾರದ ಕೃಷಿ ನೀತಿ ವಿರೋಧಿಸಿ ದೇಶಾದ್ಯಂತ ರೈತರು ಇಂದು ಟ್ರಾಕ್ಟರ್ ರ್ಯಾಲಿ ನಡೆಸುತ್ತಿದ್ದು, ನಗರದ ಆರು ಮಾರ್ಗಗಳ ಮೂಲಕ ರೈತರು ಫ್ರೀಡಂ ಪಾರ್ಕ್ ತಲುಪುತ್ತಿದ್ದಾರೆ. ನಗರಕ್ಕೆ ಟ್ರಾಕ್ಟರ್ ಪ್ರವೇಶಿಸಲು ಬೆಂಗಳೂರು ಪೊಲೀಸರು ಅವಕಾಶ ನಿರಾಕರಿಸಿದ್ದು, ಹೊರ ವಲಯಗಳಲ್ಲಿ ಪೊಲೀಸ್ ಸರ್ಪಗಾವಲು ಹಾಕಿ ಟ್ರಾಕ್ಟರ್ ಜೊತೆ ಆಗಮಿಸುವ ರೈತರನ್ನು ಗಡಿಯಲ್ಲೇ ತಡೆಯಲಾಗುತ್ತಿದೆ.

ಮೈಸೂರು ಮಾರ್ಗ: ಮೈಸೂರು ಸುತ್ತಮುತ್ತಲಿನಿಂದ ಆಗಮಿಸುವ ರೈತರನ್ನು ತಡೆಯಲು ಕೆಂಗೇರಿ ಸಮೀಪದ ನೈಸ್ ರಸ್ತೆ ಜಂಕ್ಷನ್‍ನಲ್ಲಿ 200 ಹೋಂಗಾಡ್ರ್ಸ್ ಸೇರಿದಂತೆ 500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಕೆಂಗೇರಿ ಗೇಟ್ ಉಪವಿಭಾಗದ ಎಸಿಪಿ ಕೃಷ್ಣಕುಮಾರ್ ನೇತೃತ್ವದಲ್ಲಿ ಉಪವಿಭಾಗದ ಎಲ್ಲಾ ಇನ್ಸ್‍ಪೇಕ್ಟರ್‍ಗಳು ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ. ಜೊತೆಗೆ 3 ಕೆಎಸ್‍ಆರ್‍ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. ಸ್ಥಳದಲ್ಲಿ ಐದು ಖಾಲಿ ಬಸ್ ಹಾಗೂ ಎರಡು ಕ್ರೇನ್‍ಗಳನ್ನು ಇರಿಸಲಾಗಿದ್ದು, ನಗರಕ್ಕೆ ಟ್ರಾಕ್ಟರ್ ಪ್ರವೇಶಿಸಲು ಅವಕಾಶ ನೀಡಲಾಗಿಲ್ಲ.

ಮಾಗಡಿ ರಸ್ತೆ: ದೊಡ್ಡಗೊಲ್ಲರಹಟ್ಟಿ ನೈಸ್ ವೃತ್ತದಲ್ಲಿ ವಿಜಯನಗರ ಉಪವಿಭಾಗದ ಎಸಿಪಿ ನಂಜುಂಡೇಗೌಡ ನೇತೃತ್ವದಲ್ಲಿ ಆಯಾ ವಿಭಾಗದ ಎಲ್ಲಾ ಇನ್ಸ್‍ಪೆಕ್ಟರ್‍ಗಳು ಸೇರಿದಂತೆ 300ಕ್ಕೂ ಹೆಚ್ಚುಪೊಲೀಸರು ಹಾಗೂ ಗೃಹರಕ್ಷದ ದಳದ ಸಿಬ್ಬಂದಿಗಳನ್ನು ನಿಯೋಜಿಲಾಗಿದ್ದು, ಎರಡು ಖಾಲಿ ಬಸ್ ಮತ್ತು ಕ್ರೇನ್ ಸಿದ್ದಪಡಿಸಿಕೊಳ್ಳಲಾಗಿದೆ.

ತುಮಕೂರು ರಸ್ತೆ: ಈ ಮಾರ್ಗವಾಗಿ ಆಗಮಿಸುವ ರೈತರ ಟ್ರಾಕ್ಟರ್‍ಗಳನ್ನು ತಡೆಹಿಡಿಯಲು ನೆಲಮಂಗಲದ ನವಯುಗ ಟೋಲ್ ಸಮೀಪ ಯಶವಂತಪುರ ಮತ್ತು ಜೆಸಿನಗರ ಉಪವಿಭಾಗಗಳ ಇಬ್ಬರು ಎಸಿಪಿಗಳ ನೇತೃತ್ವದಲ್ಲಿ ಭಾರಿ ಭದ್ರತೆ ಮಾಡಿಕೊಳ್ಳಲಾಗಿದೆ.

ಎರಡು ವಿಭಾಗಗಳ ಎಲ್ಲಾ ಠಾಣೆಗಳ ಇನ್ಸ್‍ಪೆಕ್ಟರ್‍ಗಳು ಸೇರಿದಂತೆ 500 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. 5 ಖಾಲಿ ಬಸ್ ಹಾಗೂ ಕ್ರೇನ್ ಇರಿಸಲಾಗಿದೆ.
ದೇವನಹಳ್ಳಿ: ಇಲ್ಲಿನ ಬಿ.ಬಿ.ರಸ್ತೆ ಸಮೀಪದ ರಾಣಿ ಕ್ರಾಸ್ ಹಾಗೂ ದೊಡ್ಡಬಳ್ಳಾಪುರದ ನಾಗೇನಹಳ್ಳಿಗೇಟ್ ಹತ್ತಿರ ತಲಾ ಒಬ್ಬೊಬ್ಬರು ಎಸಿಪಿ ಹಾಗೂ 250 ಪೆÇಲೀಸರನ್ನು ನಿಯೋಜಿಸಲಾಗಿದೆ.

ಹೊಸೂರು ರಸ್ತೆ: ಇಲ್ಲಿನ ವೀರಸಂದ್ರ ಚೆಕ್‍ಪೊಸ್ಟ್ ಹತ್ತಿರ 300 ಪೊಲೀಸರು ಹಾಗೂ ಒಬ್ಬರು ಎಸಿಪಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.ಅದೇ ರೀತಿ ಬನ್ನೇರುಘಟ್ಟ ರಸ್ತೆಯ ಕೋಳಿಫಾರಂ ಗೇಟ್ ಹತ್ತಿರ ಒಬ್ಬರು ಎಸಿಪಿ ಹಾಗೂ 250ಪೊಲೀಸರ ಹದ್ದಿನಕಣ್ಣಿಡಲಾಗಿದೆ.

ಕೋಲಾರ ಮತ್ತಿತರ ಕಡೆಗಳಿಂದ ಬರುವ ರೈತರನ್ನು ತಡೆಹಿಡಿಯಲು ಕೆ.ಆರ್.ಪುರಂ ಬಿಬಿಎಂಪಿ ಕಚೇರಿ ಹತ್ತಿರ ಒಬ್ಬರು ಎಸಿಪಿ ನೇತೃತ್ವದಲ್ಲಿ 250 ಪೊಲೀಸರು ಹಾಗೂ ಕನಕಪುರ ರಸ್ತೆಯ ನೈಸ್ ಜಂಕ್ಷನ್‍ನಲ್ಲಿ ಎಸಿಪಿ ನೇತೃತ್ವದ 300 ಪೊಲೀಸರನ್ನು ಕಾಯ್ದಿರಿಸಲಾಗಿದೆ. ಒಟ್ಟಾರೆ, ನಗರವನ್ನು ಸಂಪರ್ಕಿಸುವ ಎಲ್ಲಾ ನೈಸ್ ಜಂಕ್ಷನ್‍ಗಳು ಸೇರಿದಂತೆ ಯಾವುದೇ ಭಾಗಗಳಿಂದ ರೈತರು ತಮ್ಮ ಟ್ರಾಕ್ಟರ್‍ಗಳೊಂದಿಗೆ ನಗರ ಪ್ರವೇಶಿಸಲು ಸಾಧ್ಯವಾಗದಂತೆ ಹೊರ ವಲಯಗಳಲ್ಲಿ ಬಿಗಿ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ.

Facebook Comments