ಬೆಂಗಳೂರಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಅನ್ನದಾತರ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.26- ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಗರದಲ್ಲಿಂದು ಅನ್ನದಾತರ ಆಕ್ರೋಶ ತೀವ್ರಗೊಂಡಿತ್ತು.  ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ಕಳೆದ ಎರಡು ತಿಂಗಳಿನಿಂದ ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿ ಹಮ್ಮಿಕೊಂಡಿರುವ ಟ್ರ್ಯಾಕ್ಟರ್ ರ್ಯಾಲಿಗೆ ಬೆಂಬಲ ನೀಡಿರುವ ರಾಜ್ಯದ ರೈತರು, ಪೋಲೀಸರ ನಿರ್ಬಂಧದ ನಡುವೆಯೂ ವಿವಿಧ ಮೂಲೆಗಳಿಂದ ಟ್ರ್ಯಾಕ್ಟರ್, ಬಸ್, ಕಾರು, ಟೆಂಪೋಗಳಲ್ಲಿ ಆಗಮಿಸಿ ಪೆರೇಡ್ ನಡೆಸಿದರು.

ಪೆರೇಡ್‍ಗೂ ಮುನ್ನ ರೈತ ಸಂಘಟನೆಗಳವರು ಧ್ವಜಾರೋಹಣ ನೆರವೇರಿಸಿ ಇಂದು ರಾಷ್ಟ್ರಪತಿ ಹಾಗೂ ರಾಜ್ಯಪಾಲರು ದೇಶದ ಅಭ್ಯುದ್ಯಯದ ಬಗ್ಗೆ ಸಂದೇಶ ನೀಡಿದ್ದಾರೆ. ನಾವು ನಮ್ಮ ಸಮಸ್ಯೆಗಳ ಬಗ್ಗೆ ರಾಜ್ಯದ ಜನರಿಗೆ ಮಾಹಿತಿ ನೀಡಬೇಕಾಗಿದೆ. ಅದಕ್ಕೆ ಜನಗಣ ಪೆರೇಡ್ ನಡೆಸುತ್ತಿದ್ದೇವೆ ಎಂದು ರೈತ ಮುಖಂಡರು ಹೇಳಿದರು.

ತುಮಕೂರು ರಸ್ತೆ, ನೈಸ್ ರೋಡ್ ಜಂಕ್ಷನ್, ದೇವನಹಳ್ಳಿ ನಂದಿಕ್ರಾಸ್, ಹೊಸಕೋಟೆ ಟೋಲ್ ಜಂಕ್ಷನ್, ಸುಮನಹಳ್ಳಿ ಗೇಟ್, ಬೆಂಗಳೂರುನಗರ ರೈಲ್ವೆ ನಿಲ್ದಾಣ ಸೇರಿದಂತೆ 6 ಕಡೆಗಳಿಂದ ಬಂದು ಸಮಾವೇಶಗೊಂಡ ರೈತರು ಅಲ್ಲಿಂದ ಫ್ರೀಡಂಪಾರ್ಕ್ ವರೆಗೆ ಪರೇಡ್ ನಡೆಸಿ ಕೇಂದ್ರದ ಕೃಷಿ ಕಾಯ್ದೆಗಳು, ರಾಜ್ಯ ಸರ್ಕಾರದ ಭೂ ಸುಧಾರಣೆ ಕಾಯ್ದೆ, ಭೂಸ್ವಾಧೀನ ಕಾಯ್ದೆ, ಎಪಿಎಂಸಿ ಕಾಯ್ದೆ, ಜಾನುವಾರು ಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.

ದೂರದ ಜಿಲ್ಲೆಯಿಂದ ಪರೇಡ್‍ಗೆ ಬರುವ ರೈತರು ಜೀಪು, ಟೆಂಪೋ, ಬಸ್, ವ್ಯಾನ್‍ಗಳಲ್ಲಿ ಆಗಮಿಸಿದರೆ, ಬೆಂಗಳೂರು ಸುತ್ತಮುತ್ತಲಿನ ರೈತರು ಟ್ರ್ಯಾಕ್ಟರ್‍ಗಳಲ್ಲಿ ಆಗಮಿಸಿದ್ದರು. ಟ್ರ್ಯಾಕ್ಟರ್‍ಗಳನ್ನು ನಗರದ ಒಳಗೆ ಬಿಡುವ ವಿಷಯದಲ್ಲಿ ಪೋಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಪೋಲೀಸರ ನಿರ್ಬಂಧದ ನಡುವೆಯೂ ಕೂಡ ಹಲವು ಟ್ರ್ಯಾಕ್ಟರ್‍ಗಳೊಂದಿಗೆ ರೈತರು ನಗರ ಪ್ರವೇಶಿಸಿ ಪರೇಡ್ ನಡೆಸಿದರು.

ಹೊಸಕೋಟೆ, ಚಿಕ್ಕಬಳ್ಳಾಪುರ, ಕೋಲಾರ, ಆನೇಕಲ್, ದೊಡ್ಡಬಳ್ಳಾಪುರ, ದೇವನಹಳ್ಳಿ, ಮೈಸೂರು, ಕನಕಪುರ, ಮಂಡ್ಯ, ಕೆ.ಆರ್.ಪುರ ಮುಂತಾದ ಕಡೆ ರೈತರು ಟ್ರ್ಯಾಕ್ಟರ್ ಮೂಲಕ ಆಗಮಿಸಿ ರಸ್ತೆ ತಡೆ ನಡೆಸಿದ್ದರಿಂದ ಸುಗಮ ಸಂಚಾರಕ್ಕೆ ಅಡಚಣೆಯಾಯಿತು.  ತುಮಕೂರು ರಸ್ತೆ, ನೈಸ್ ರೋಡ್ ಜಂಕ್ಷನ್ ಪರೇಡ್ ನೇತೃತ್ವ ವಹಿಸಿದ್ದ ಹಸಿರುಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಈ ಸಂದರ್ಭದಲ್ಲಿ ಮಾತನಾಡಿ, ಕೃಷಿಕರಿಗೆ ಮಾರಕವಾಗಿರುವ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಬೇಕೆಂದು ಕಳೆದ ಎರಡು ತಿಂಗಳಿನಿಂದ ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಅದಕ್ಕೆ ಬೆಂಬಲವಾಗಿ ಇಂದು ನಾವು ಟ್ರ್ಯಾಕ್ಟರ ಪರೇಡ್ ಮಾಡುತ್ತಿದ್ದೇವೆ. ದೆಹಲಿಯಲ್ಲಿ ಟ್ರ್ಯಾಕ್ಟರ್ ಪೆರೇಡ್ ಮಾಡಲು ಪೊಲೀಸರು ಅನುಮತಿ ನೀಡಿದ್ದಾರೆ. ಆದರೆ ಇಲ್ಲಿ ಅನುಮತಿ ನೀಡಲು ನಿರಾಕರಿಸಿದ್ದಾರೆ. ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ.

ಮುಖ್ಯಮಂತ್ರಿಗಳು ನಾವು ರೈತರ ಪರವಾಗಿದ್ದೇವೆ. ಪ್ರತಿಭಟನೆಯನ್ನು ಹತ್ತಿಕ್ಕುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಪೊಲೀಸರ ಮೂಲಕ ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕುತ್ತಿದ್ದಾರೆ. ಪ್ರತಿಭಟನೆ ನಿರ್ಬಂಧ ಮಾಡಿದಷ್ಟು ಪ್ರತಿರೋಧ ಹೆಚ್ಚಾಗುತ್ತದೆ ಎಂದು ಹೇಳಿದರು.  ಇದು ನಮ್ಮ ಬದುಕಿನ ಹೋರಾಟ. ನಮ್ಮ ಬದುಕನ್ನು ನಾಶ ಮಾಡುವಂತಹ ಮಸೂದೆಗಳನ್ನು ಸರ್ಕಾರಗಳು ಜಾರಿಗೊಳಿಸಿವೆ. ಅವರು ಅಧಿಕಾರಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ನಾವು ನಮ್ಮ ಬದುಕಿಗಾಗಿ ಹೋರಾಟ ಮಾಡುತ್ತಿದ್ದೇವೆ. ಅನ್ನ ನೀಡಿದ ರೈತನಿಗೆ ದ್ರೋಹ ಮಾಡಬೇಡಿ. ಕೃಷಿ ಕಾಯ್ದೆಗಳನ್ನು ಹಿಂಪಡೆದುಕೊಳ್ಳಿ ಎಂದರು.

ಗಣತಂತ್ರ ವ್ಯವಸ್ಥೆಯಲ್ಲಿ ನಮಗೆ ನಂಬಿಕೆಯಿದೆ. ಅದಕ್ಕಾಗಿ ನಾವು ಗಣರಾಜ್ಯೋತ್ಸವಕ್ಕೆ ಅಡ್ಡಿಪಡಿಸಿಲ್ಲ. ಆ ಕಾರ್ಯಕ್ರಮ ಮುಗಿದ ನಂತರ ಇಲ್ಲಿ ಧ್ವಜಾರೋಹಣ ಮಾಡಿ ನಾವು ಜನಗಣ ಪೆÀರೇಡ್ ಮಾಡುವ ಮೂಲಕ ನಮ್ಮ ಸಮಸ್ಯೆಗಳ ಸಂದೇಶವನ್ನು ಜನರಿಗೆ ತಿಳಿಸುತ್ತಿದ್ದೇವೆ ಎಂದರು.  ರೈತ ಸಂಘದ ಮುಖಂಡರಾದ ಬಡಗಲಪುರ ನಾಗೇಂದ್ರ, ಕುರುಬೂರು ಶಾಂತಕುಮಾರ್, ಚಾಮರಸ ಮಾಲಿಪಾಟೀಲ್ ಮುಂತಾದವರು ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕೃಷಿ ವಿರೋಧಿ ಧೋರಣೆಗಳನ್ನು ಖಂಡಿಸಿದರು.

ಕೇಂದ್ರ, ರಾಜ್ಯ ಸರ್ಕಾರಗಳು ತಮ್ಮ ನಿರ್ಧಾರಗಳನ್ನು ಬದಲಾಯಿಸುವವರೆಗೆ ನಾವು ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು.  ದಲಿತ ಸಂಘರ್ಷ ಸಮಿತಿ, ಕರ್ನಾಟಕ ಪ್ರಾಂತ ರೈತ ಸಂಘ, ಆಲ್ ಇಂಡಿಯಾ ಡೆಮೊಕ್ರಟಿಕ್ ವುಮೆನ್ಸ್ ಅಸೋಸಿಯೇಷನ್, ಎಐಟಿಯುಸಿ, ಕರ್ನಾಟಕ ಜನಶಕ್ತಿ, ಆಲ್ ಇಂಡಿಯೂ ಡೆಮೊಕ್ರಟಿಕ್ ಸ್ಟೂಡೆಂಟ್ ಅಸೋಸಿಯೇಷನ್ ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು.

ನಗರದ ಆರು ಭಾಗಗಳಿಂದ ಪರೇಡ್ ಮೂಲಕ ಫ್ರೀಡಂಪಾರ್ಕ್‍ಗೆ ಆಗಮಿಸಿದ ರೈತರು ನಂತರ ಸ್ವಾತಂತ್ರ್ಯ ಉದ್ಯಾನವನದಲ್ಲಿ ಏರ್ಪಡಿಸಿದ್ದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು, ಕೇಂದ್ರ ಸರ್ಕಾರ ಕೂಡಲೇ ಕೃಷಿ ಮಸೂದೆಗಳನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.

Facebook Comments