ಗಣರಾಜ್ಯೋತ್ಸವದಂದು ಬೆಂಗಳೂರಲ್ಲಿ ದೆಹಲಿ ಮಾದರಿಯ ಬೃಹತ್ ಟ್ರ್ಯಾಕ್ಟರ್ ರ‍್ಯಾಲಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.24-ಕೃಷಿ ಕಾಯ್ದೆಗಳನ್ನು ವಿರೋಸಿ ದೆಹಲಿಯಲ್ಲಿ ನಡೆಸುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಿ ಜ.26ರಂದು ರಾಜ್ಯದಲ್ಲಿ ರೈತ ಸಂಘಟನೆಗಳು ಬೃಹತ್ ಟ್ರ್ಯಾಕ್ಟರ್ ರ್ಯಾಲಿ ಹಮ್ಮಿಕೊಂಡಿವೆ. ಬೆಂಗಳೂರು ನಗರದಲ್ಲಿ ಸಾವಿರಾರು ಟ್ರ್ಯಾಕ್ಟರ್‍ಗಳ ರ್ಯಾಲಿ ನಡೆಸುವ ಮೂಲಕ ದೆಹಲಿ ರೈತ ಚಳುವಳಿಗೆ ಬೆಂಬಲ ನೀಡಲಾಗುವುದು ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ವೀರಸಂಗಯ್ಯ ಹೇಳಿದರು.

ರಾಜ್ಯ ರೈತ ಸಂಘ, ಹಸಿರುಸೇನೆ, ಕಬ್ಬು ಬೆಳೆಗಾರರ ಸಂಘ, ಪ್ರಾಂತರೈತ ಸಂಘ, ಐಕ್ಯ ಹೋರಾಟ ಸಮಿತಿ ಸೇರಿದಂತೆ 4 ರೈತ ಹೋರಾಟ ಸಮಿತಿಗಳು ದಲಿತ, ಕಾರ್ಮಿಕ, ಮಹಿಳಾ, ಜನಪರ ಸಂಘಟನೆಗಳು ಸೇರಿದಂತೆ 20ಕ್ಕೂ ಹೆಚ್ಚು ಸಂಘಟನೆಗಳ 20 ಸಾವಿರಕ್ಕೂ ಹೆಚ್ಚು ಜನ ಈ ಟ್ರ್ಯಾಕ್ಟರ್ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

ನೆಲಮಂಗಲ, ಕನಕಪುರ, ಯಲಹಂಕ, ಮೈಸೂರು, ಹೊಸೂರಿನ ಐದು ಹೆದ್ದಾರಿಗಳಿಂದ ಟ್ರ್ಯಾಕ್ಟರ್‍ಗಳಲ್ಲಿ ರೈತರು ರಾಜಧಾನಿಗೆ ಆಗಮಿಸಲಿದ್ದಾರೆ. ಗಣರಾಜ್ಯೋತ್ಸವ ದಿನದಂದು ಈ ಪ್ರತಿಭಟನೆಯನ್ನು ನಾವು ಹಮ್ಮಿಕೊಂಡಿದ್ದೇವೆ.

ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಯಾವುದೇ ರೀತಿ ಅಡ್ಡಿಪಡಿಸುವುದಿಲ್ಲ. ಮಧ್ಯಾಹ್ನ 1 ಗಂಟೆಯ ನಂತರ ನಾವು ಪ್ರತಿಭಟನಾ ರ್ಯಾಲಿಯನ್ನು ಪ್ರಾರಂಭ ಮಾಡುತ್ತೇವೆ. ಕಲ್ಲು ತೂರಾಟ, ಬೆಂಕಿ ಹಚ್ಚುವ ಯಾವುದೇ ಕೆಲಸವನ್ನು ಮಾಡುವುದಿಲ್ಲ. ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತೇವೆ. ನಮ್ಮ ಪ್ರತಿಭಟನೆಗೆ ರಾಜ್ಯದ ಎಲ್ಲ ರೈತರು ಕೃಷಿ ಕಾಯ್ದೆ ವಿರೋಸುವವರು ಬೆಂಬಲ ನೀಡಿದ್ದಾರೆ ಎಂದು ತಿಳಿಸಿದರು.

ಕಳೆದ 60 ದಿನಗಳಿಂದ ದೆಹಲಿಯಲ್ಲಿ ಕೃಷಿ ಕಾಯ್ದೆಗಳನ್ನು ವಿರೋಸಿ ಲಕ್ಷಾಂತರ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಅವರು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿ ಟ್ರಾಕ್ಟರ್ ರ್ಯಾಲಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಆ ಪ್ರತಿಭಟನೆಗೆ ಬೆಂಬಲಿಸಿ ಟ್ರಾಕ್ಟರ್ ರ್ಯಾಲಿ ನಡೆಸುತ್ತಿದ್ದೇವೆ.

ರ್ಯಾಲಿಗೆ ಪೊಲೀಸರ ಅನುಮತಿಗೆ ಮನವಿ ನೀಡಿದ್ದೇವೆ. ಅವರು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ಎಂದು ಹೇಳಿದ್ದಾರೆ. ಆದರೆ ನಾವು ಪ್ರತಿಭಟನೆ ನಡೆಸಲು ಎಲ್ಲ ಸಿದ್ದತೆ ಮಾಡಿಕೊಂಡಿದ್ದೇವೆ. ಶಾಂತಿಯುತ ಪ್ರತಿಭಟನೆಗೆ ಅವಕಾಶ ನೀಡಿ ಎಂದು ಒತ್ತಾಯಿಸಿದ್ದೇವೆಂದು ತಿಳಿಸಿದರು.

ರೈತರಿಗೆ ಮಾರಕವಾದ ಕಾಯ್ದೆಗಳನ್ನು ಸರ್ಕಾರ ವಾಪಸ್ ಪಡೆಯಬೇಕು. ಇಷ್ಟೊಂದು ದೇಶಾದ್ಯಂತ ರೈತರು ಪ್ರತಿಭಟನೆ ನಡೆಸಿದರೂ ಸರ್ಕಾರ ಯಾರ ಒತ್ತಡಕ್ಕೆ ಮಣಿದು ಕಾಯ್ದೆಗಳನ್ನು ಜಾರಿಗೆ ತರುತ್ತಿದೆ. ಯಾರ ಹಿತಾಸಕ್ತಿಗೆ ಮಣಿಯುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ ಎಂದರು.

Facebook Comments

Sri Raghav

Admin