ರೈತರ ಬೃಹತ್ ಟ್ರ್ಯಾಕ್ಟರ್ ರ‍್ಯಾಲಿ: ನಾವು ಮಧ್ಯ ಪ್ರವೇಶ ಮಾಡುವುದಿಲ್ಲ ಎಂದ ಸುಪ್ರೀಂ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜ.18- ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ರೈತ ಸಂಘಟನೆಗಳು ನಡೆಸಲು ಉದ್ದೇಶಿಸಿರುವ ಟ್ರ್ಯಾಕ್ಟರ್ ರ‍್ಯಾಲಿಗೆ ಅವಕಾಶ ನೀಡಬೇಕೆ, ಬೇಡವೇ ಎಂಬ ಕುರಿತಂತೆ ದೆಹಲಿ ಪೊಲೀಸರು ನಿರ್ಧಾರ ತೆಗೆದುಕೊಳ್ಳಬೇಕು. ಇದರಲ್ಲಿ ತಾನು ಮಧ್ಯ ಪ್ರವೇಶ ಮಾಡುವುದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಕೇಂದ್ರ ಸರ್ಕಾರ ರೂಪಿಸಿರುವ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಪಂಜಾಬ್ ಹಾಗೂ ಹರಿಯಾಣ ರೈತರು ಕಳೆದ 53 ದಿನಗಳಿಂದ ದೆಹಲಿಯಲ್ಲಿ ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆಯ ಮುಂದುವರೆದ ಭಾಗವಾಗಿ ಜ.26ರಂದು ಗಣರಾಜ್ಯೋತ್ಸವದ ದಿನ ದೆಹಲಿಯಲ್ಲಿ ಸುಮಾರು ಒಂದೂವರೆ ಲಕ್ಷ ಜನ ಸಮಾವೇಶಗೊಂಡು ಬೃಹತ್ ಟ್ರ್ಯಾಕ್ಟರ್ ರ್ಯಾಲಿ ನಡೆಸಲು ಉದ್ದೇಶಿಸಲಾಗಿದೆ.

ಈ ರ‍್ಯಾಲಿಗೆ ತಡೆ ನೀಡಬೇಕೆಂದು ದೆಹಲಿ ಪೊಲೀಸರ ಮುಖಾಂತರ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‍ಗೆ ಮನವಿ ಮಾಡಿತ್ತು. ಸುಪ್ರೀಂಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಎ.ಎಸ್.ಬೊಬ್ಡೆ, ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರರಾವ್, ವಿನೀತ್ ಶರಣ್ ಅವರುಗಳನ್ನೊಳಗೊಂಡ ವಿಭಾಗೀಯ ಪೀಠ ಟ್ರ್ಯಾಕ್ಟರ್ ರ್ಯಾಲಿಗೆ ತಡೆನೀಡಲು ನಿರಾಕರಿಸಿದೆ.
ದೆಹಲಿಗೆ ಯಾರು ಬರಬೇಕು, ಎಲ್ಲಿಯವರೆಗೆ ಬರಬೇಕು, ಎಷ್ಟು ಮಂದಿ ಬರಬೇಕು ಎಂಬೆಲ್ಲಾ ವಿಷಯಗಳನ್ನು ನಿರ್ಧರಿಸುವುದು ಪೊಲೀಸರ ಕೆಲಸ. ಕಾನೂನು ಸುವ್ಯವಸ್ಥೆಯ ವಿಷಯದಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡುವುದಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಇದೊಂದು ವಿಶೇಷ ಪ್ರಕರಣವಾಗಿದೆ. ಹಾಗಾಗಿ ಟ್ರ್ಯಾಕ್ಟರ್ ರ್ಯಾಲಿ ನಡೆಸದಂತೆ ರೈತ ಸಂಘಟನೆಗಳಿಗೆ ಸೂಚನೆ ನೀಡಿ ಎಂದು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಮನವಿ ಮಾಡಿದ್ದರು. ಪೊಲೀಸರು ಯಾವೆಲ್ಲ ಅಧಿಕಾರಗಳನ್ನು ಹೊಂದಿದ್ದಾರೆ ಎಂದು ನ್ಯಾಯಾಲಯವೇ ಹೇಳಬೇಕೆಂದು ಏಕೆ ಬಯಸುತ್ತೀರಿ ? ಕಾನೂನು ಸುವ್ಯವಸ್ಥೆ ರಕ್ಷಣೆಗೆ ಸಂಬಂಧಪಟ್ಟಂತೆ ದೆಹಲಿ ಪೊಲೀಸ್ ಕಾಯ್ದೆಯಲ್ಲಿ ಇರುವ ಅಂಶಗಳನ್ನು ನೀವೇ ಪಾಲನೆ ಮಾಡಿ ಎಂದು ನ್ಯಾಯಾಧೀಶರು ಸೂಚನೆ ನೀಡಿದ್ದಾರೆ.

ನ್ಯಾಯಾಲಯದ ಇತಿಮಿತಿಯಲ್ಲಿ ವಿಷಯವನ್ನು ಇತ್ಯರ್ಥ ಪಡಿಸುವ ಸಾಧ್ಯತೆ ಇದೆ. ಆದರೆ, ದೆಹಲಿ ಪೊಲೀಸರು ತಮ್ಮ ಜವಾಬ್ದಾರಿಯನ್ನು ತಾವು ನಿಭಾಯಿಸಲಿ ಇದರಲ್ಲಿ ನ್ಯಾಯಾಲಯ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ. ಮುಂದಿನ ವಿಚಾರಣೆಯನ್ನು ಬುಧವಾರ ಕೈಗೆತ್ತಿಕೊಳ್ಳುತ್ತೇವೆ ಎಂದು ಕಲಾಪವನ್ನು ಮುಂದೂಡಿದ್ದಾರೆ. ಈ ಮೂಲಕ ಟ್ರ್ಯಾಕ್ಟರ್ ರ್ಯಾಲಿಗೆ ತಡೆ ನೀಡಬೇಕೆಂದು ದೆಹಲಿ ಪೊಲೀಸರು ಸಲ್ಲಿಸಿದ್ದ ಮನವಿಗೆ ಮೊದಲ ಹಂತದ ವಿಚಾರಣೆಯಲ್ಲಿ ಯಶಸ್ಸು ಸಿಕ್ಕಿಲ್ಲ. ಮತ್ತೊಂದೆಡೆ ಟ್ರ್ಯಾಕ್ಟರ್ ರ್ಯಾಲಿಗಾಗಿ ರೈತರು ಭರ್ಜರಿ ಸಿದ್ಧತೆಗಳನ್ನು ಕೈಗೊಂಡಿದ್ದಾರೆ. ಪಂಜಾಬ್ ಹಾಗೂ ಹರಿಯಾಣ ರಾಜ್ಯಗಳಲ್ಲಿ ಅಣಕು ಟ್ರ್ಯಾಕ್ಟರ್ ರ್ಯಾಲಿ ನಡೆಸಿ ತಯಾರಿಗಳನ್ನು ಮಾಡಿಕೊಳ್ಳಲಾಗುತ್ತಿದೆ.

ಕೇಂದ್ರ ಸರ್ಕಾರ ಮೂರು ವಿವಾದಿತ ಕೃಷಿ ಕಾನೂನನ್ನು ಹಿಂಪಡೆಯದೇ ಇದ್ದರೆ ನಾವು ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ. ಮೋದಿ ಸರ್ಕಾರದ ಅವಧಿ ಮುಕ್ತಾಯಗೊಳ್ಳುವ 2024ರ ಮೇ ವರೆಗೂ ನಾವು ದೆಹಲಿಯಲ್ಲೇ ಇದ್ದು ಪ್ರತಿಭಟನೆ ಮುಂದುವರೆಸುತ್ತೇವೆ ಎಂದು ಭಾರತೀಯ ಕಿಸಾನ್ ಯೂನಿಯನ್‍ನ ಮುಖ್ಯಸ್ಥ ಟೈಕೈಟ್ ತಿಳಿಸಿದ್ದಾರೆ.

ಈ ನಡುವೆ ಟ್ರ್ಯಾಕ್ಟರ್ ರ್ಯಾಲಿಗೆ ಸೇರುವ ಜನರ ಸಂಖ್ಯೆಯನ್ನು 25ಸಾವಿರಕ್ಕೆ ಸೀಮಿತಗೊಳಿಸಲು ಪ್ರಯತ್ನಿಸುತ್ತಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಕೊರೊನಾ ಸೋಂಕಿನ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು. ಹೆಚ್ಚು ಜನ ಸೇರುವುದನ್ನು ತಡೆಯಲು ನಮ್ಮ ಪ್ರಯತ್ನಗಳನ್ನು ನಾವು ಮಾಡುತ್ತೇವೆಂದು ಪೊಲೀಸರು ಹೇಳಿದ್ದಾರೆ.

Facebook Comments