ಪೌರತ್ವ ಕಾಯ್ದೆ ವಿರೋಧಿಸಿ ಮುಸ್ಲಿಂ ಸಂಘಟನೆಗಳ ಸಮಾವೇಶ, ಬೆಂಗಳೂರಿಗರಿಗೆ ಟ್ರಾಫಿಕ್ ಜಾಮ್ ಕಿರಿಕಿರಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.23- ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ವಿವಿಧ ಮುಸ್ಲಿಂ ಸಂಘಟನೆಗಳು ಇಂದು ಸೌಹಾರ್ದ ಸಭೆ ನಡೆಸಿದ್ದರಿಂದಾಗಿ ನಗರದೆಲ್ಲೆಡೆ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡು ಸಾರ್ವಜನಿಕರು ಪರದಾಡುವಂತಾಯಿತು. ನಗರದ ಶಿವಾಜಿನಗರ, ಪುಲಕೇಶಿನಗರ, ಚಾಮರಾಜಪೇಟೆ ಸೇರಿ ದಂತೆ ವಿವಿಧೆಡೆಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಸಮಾವೇಶ ಸ್ಥಳಕ್ಕೆ ನಗರದ ವಿವಿಧ ಬಡಾವಣೆಗಳಿಂದ ಬೈಕ್ ರ್ಯಾಲಿಗಳಲ್ಲಿ ನೂರಾರು ಜನ ಆಗಮಿಸಿದ್ದರು. ಇದರಿಂದಾಗಿ ಬೆಂಗಳೂರಿನಾದ್ಯಂತ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಎಲ್ಲೆಡೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸಿಗ್ನಲ್‍ಗಳಲ್ಲಿ ಪ್ರತಿಭಟನಾಕಾರರಿಗೆ ದಾರಿ ಬಿಟ್ಟುಕೊಡಲಾಗುತ್ತಿತ್ತು. ನೂರಾರು ಮಂದಿ ರ್ಯಾಲಿ ನಡೆಸುತ್ತಿದ್ದರಿಂದ ಬದಲಿ ರಸ್ತೆಗಳಲ್ಲೂ ಕೂಡ ವಾಹನಗಳು ಸಂಚರಿಸಿ ಸಂಚಾರ ದಟ್ಟಣೆ ಹೆಚ್ಚಾಗಿತ್ತು.

ನಗರದ ವಿಮಾನ ನಿಲ್ದಾಣ ರಸ್ತೆ, ನೃಪತುಂಗ ರಸ್ತೆ, ವಿಜಯನಗರ ಮುಖ್ಯರಸ್ತೆ, ಮಾಗಡಿರಸ್ತೆ, ಮೈಸೂರು ರಸ್ತೆ, ತುಮಕೂರು ರಸ್ತೆ, ಹಲಸೂರು ಮುಖ್ಯರಸ್ತೆ ಸೇರಿದಂತೆ ಬಹುತೇಕ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ಮಧ್ಯಾಹ್ನವಾದರೂ ವಾಹನಗಳು ನಿಧಾನಗತಿಯಲ್ಲಿ ಸಂಚರಿಸುತ್ತಿದ್ದವು, ಕೆಲವೆಡೆ ಸಂಚಾರವೇ ಸ್ಥಗಿತಗೊಂಡಿತ್ತು. ಬೆಳಗ್ಗೆ 9 ಗಂಟೆಯಿಂದಲೇ ರ್ಯಾಲಿಗಳು ಆರಂಭವಾಗಿದ್ದರಿಂದ ಕಚೇರಿಗೆ ನಿಗದಿತ ವೇಳೆಗೆ ತೆರಳಲಾಗದೆ ನೌಕರರು ಪರದಾಡುವಂತಾಯಿತು.

ಕೆಲವು ಕಡೆ ಆ್ಯಂಬುಲೆನ್ಸ್‍ಗಳು ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡಿದ್ದು, ಪ್ರತಿಭಟನಾಕಾರರೇ ಮುಂದಾಗಿ ಆ್ಯಂಬುಲೆನ್ಸ್‍ಗೆ ದಾರಿ ಮಾಡಿಕೊಟ್ಟ ಘಟನೆಯೂ ನಡೆದಿದೆ.
ಒಂದೆಡೆ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದರೆ, ಮತ್ತೊಂದೆಡೆ ಸಂಚಾರ ವಿಭಾಗದ ಪೊಲೀಸರು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಕಷ್ಟಪಡುತ್ತಿದ್ದರು.

Facebook Comments