ಸಂಚಾರಿ ನಿಯಮ ಉಲ್ಲಂಘಿಸುವ ಬೆಂಗಳೂರಿಗರೇ ಇನ್ಮುಂದೆ ಹುಷಾರ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.4-ಸಂಚಾರ ನಿಯಮ ಉಲ್ಲಂಘನೆಗಳ ಅಪರಾಧಗಳ ಕುರಿತು ಇನ್ನು ಮುಂದೆ ವಾಹನ ಮಾಲೀಕರಿಗೆ ಎಸ್‍ಎಂಎಸ್ ಮೂಲಕ ಮಾಹಿತಿ ನೀಡುವ ವಿನೂತನ ಹಾಗೂ ಜನಪರ ವ್ಯವಸ್ಥೆಯನ್ನು ಬೆಂಗಳೂರು ನಗರ ಸಂಚಾರಿ ಪೊಲೀಸರು ಜಾರಿಗೊಳಿಸಲು ಮುಂದಾಗಿದ್ದಾರೆ. ನೂತನ ವ್ಯವಸ್ಥೆ ಬಗ್ಗೆ ಅಧ್ಯಯನ ನಡೆಸಲಾಗಿದ್ದು, ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ತಿಳಿಸಿದ್ದಾರೆ.

ಪ್ರಸ್ತುತ ಲಭ್ಯವಿರುವ ವ್ಯವಸ್ಥೆಯಲ್ಲಿ ಸಂಚಾರ ವಿಭಾಗದ ಪೊಲೀಸ್ ಕಾನ್‍ಸ್ಟೆಬಲ್‍ಗಳು ಮತ್ತು ಹೆಡ್‍ಕಾನ್‍ಸ್ಟೆಬಲ್‍ಗಳು ವೈಯಲೇಷನ್ ಪುಸ್ತಕ ವನ್ನುಬಳಕೆ ಮಾಡುತ್ತಿದ್ದರು.ತಮ್ಮ ಜಂಕ್ಷನ್‍ಗಳಲ್ಲಿ ನಿಯಮ ಉಲ್ಲಂಘನೆ ಮಾಡುವ ವಾಹನಗಳು ಕಂಡುಬಂದರೆ ಅದರ ನೋಂದಣಿ ಸಂಖ್ಯೆ, ಸಮಯ, ಸ್ಥಳ ಇತರೆ ವಿವರಗಳನ್ನು ಎಫ್‍ಟಿವಿಆರ್‍ಗಳಲ್ಲಿ ಭರ್ತಿ ಮಾಡಲಾಗುತ್ತಿತ್ತು.

ಸಾಕ್ಷಿ ಆಧಾರಿತವಾಗಿ ಪ್ರಕರಣವನ್ನು ದಾಖಲಿಸಲು ಡಿಜಿಟಲ್ ಎಫ್‍ಟಿವಿಆರ್ ಉಪಕರಣಗಳನ್ನು ಸಿಬ್ಬಂದಿಗಳಿಗೆ ನೀಡಲಾಗಿತ್ತು. ಪೊಲೀಸರು ಫೋಟೊ ತೆಗೆದು ಐಎಂವಿ ಕಲಂ 133ರಡಿ ಸಂಚಾರಿ ನಿಯಮ ಉಲ್ಲಂಘನಾ ನೋಟಿಸ್‍ಗಳನ್ನು ಮುದ್ರಿಸಿ ಅಂಚೆ ಮೂಲಕ ವಾಹನ ಮಾಲೀಕರಿಗೆ ಕಳುಹಿಸಲಾಗುತ್ತಿತ್ತು.

ಪ್ರತಿ ದಿನ ಈ ರೀತಿ 20 ಸಾವಿರ ಸಂಪರ್ಕ ರಹಿತ ವ್ಯವಸ್ಥೆಯಲ್ಲಿ ಸಂಚಾರಿ ನಿಯಮ ಉಲ್ಲಂಘನೆ ನೋಟಿಸ್‍ಗಳನ್ನು ಹೊರಡಿಸಲಾಗುತ್ತಿತ್ತು.
ನೋಟಿಸ್‍ಗಳನ್ನು ತಯಾರಿಸಲು, ಮುದ್ರಿಸಲು ಮತ್ತು ಅವುಗಳನ್ನು ರವಾನಿಸಲು ಪೊಲೀಸರು ಅಂಚೆ ಇಲಾಖೆಯ ಸಿಬ್ಬಂದಿಗಳ ಶ್ರಮ ವ್ಯಯವಾಗುತಿತ್ತು.

ಅಂಚೆ ವೆಚ್ಚ, ಮುದ್ರಣ, ಕಾಗದ ಸೇರಿ ಪ್ರತಿ ನೋಟಿಸ್‍ಗೆ 4.50 ರೂ. ವೆಚ್ಚ ತಗುಲುತ್ತಿದೆ. ಜೊತೆಗೆ ಮಾನವ ಸಂಪನ್ಮೂಲ ಕೂಡ ಬಳಕೆಯಾಗುತ್ತಿದೆ.
ಬಹುತೇಕ ಪ್ರಕರಣಗಳಲ್ಲಿ ಮಾಲೀಕರು ವಿಳಾಸ ಬದಲಾಸಿದರೆ ನೋಟಿಸ್‍ಗಳು ವಾಪಸ್ ಬಂದು ಅದಕ್ಕೆ ತಗುಲಿದ ಖರ್ಚು ಮತ್ತು ಸಿಬ್ಬಂದಿಗಳ ಶ್ರಮ ಅಪವ್ಯಯವಾಗುತಿತ್ತು ಎಂದು ರವಿಕಾಂತೇ ಗೌಡ ತಿಳಿಸಿದ್ದಾರೆ.

ಸಾರಿಗೆ ಇಲಾಖೆ ವಾಹನಗಳ ನೋಂದಣಿ ಜತೆಗೆ ಸಂಬಂತ ವಾಹನಗ¼ ಮಾಲೀಕರ ಮೊಬೈಲ್‍ಗಳನ್ನು ಸಂಗ್ರಹಿಸುತ್ತಿದೆ. ಈ ಮಾಹಿತಿಯನ್ನು ಸಾರಿಗೆ ಇಲಾಖೆ ಬೆಂಗಳೂರು ಪೊಲೀಸರ ಜೊತೆ ಹಂಚಿಕೊಳ್ಳುತ್ತದೆ. ಇನ್ನು ಮುಂದೆ ಯಾವುದೇ ಸಂಚಾರ ನಿಯಮ ಉಲ್ಲಂಘನೆ ಕಂಡುಬಂದರೆ ಅದರ ಮಾಲೀಕರಿಗೆ ನೋಟಿಸ್ ಸಂಖ್ಯೆ, ವಾಹನಗಳ ನೋಂದಣಿ ಸಂಖ್ಯೆ, ಸಂಚಾರ ನಿಯಮ ಉಲ್ಲಂಘನೆ ಸ್ವರೂಪ, ದಿನಾಂಕ, ಸಮಯ ಮತ್ತು ದಂಡದ ಮೊತ್ತವನ್ನು ಒಳಗೊಂಡ ಎಸ್‍ಎಂಎಸ್‍ನ್ನು ನೋಂದಾಯಿತ ಮೊಬೈಲ್ ಸಂಖ್ಯೆಗೆ ತಕ್ಷಣವೇ ರವಾನಿಸಲಾಗುತ್ತದೆ.

ದಂಡ ಪಾವತಿಗೆ ಏಳು ದಿನಗಳ ಕಾಲಾವಕಾಶ ನೀಡಲಾಗುತ್ತಿದ್ದು, ದಂಡ ಪಾವತಿಯ ಲಿಂಕ್‍ಗಳನ್ನು ಎಸ್‍ಎಂಎಸ್ ಒಳಗೊಂಡಿರುತ್ತದೆ. ಸಂದೇಶ ಕಳುಹಿಸಲು 20 ಪೈಸೆ ವೆಚ್ಚ ತಗುಲತ್ತದೆ ಎಂದು ಅವರು ತಿಳಿಸಿದ್ದಾರೆ.

ತಕ್ಷಣವೇ ಎಸ್‍ಎಂಎಸ್ ತಲುಪುವುದರಿಂದ ವಾಹನ ಮಾಲೀಕರು ಎಚ್ಚೆತ್ತುಕೊಂಡು ನಿಯಮ ಉಲ್ಲಂಘನೆಯನ್ನು ನಿಯಂತ್ರಿಸಲಿದ್ದಾರೆ. ಬೇರೆಯವರು ವಾಹನ ಚಲಾಯಿಸುತ್ತಿದ್ದಾಗ ಸಂಚಾರ ನಿಯಮ ಉಲ್ಲಂಘನೆಯಾಗಿದ್ದರೆ ಅದರ ಮಾಲೀಕರಿಗೆ ಸಂದೇಶ ಹೋಗಿ ತಪ್ಪುಗಳನ್ನು ಸರಿಪಡಿಸಲ ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಇದರಿಂದ ಅಪಘಾತಗಳ ಪ್ರಮಾಣ ತಗಲುವ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ.

Facebook Comments