ಜಿಲ್ಲಾ ಕೇಂದ್ರಗಳಲ್ಲೂ ಬಿ ಟ್ರ್ಯಾಕ್ ವ್ಯವಸ್ಥೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.9- ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯನ್ನು ನಿವಾರಿಸಲು ಜಾರಿಯಲ್ಲಿರುವ ಜಿಲ್ಲಾ ಬಿ ಟ್ರ್ಯಾಕ್ ವ್ಯವಸ್ಥೆಯನ್ನು ಇನ್ನು ಮುಂದೆ ಜಿಲ್ಲಾ ಕೇಂದ್ರಗಳು ಮತ್ತು ಪ್ರಮುಖ ವಾಣಿಜ್ಯ ಕೇಂದ್ರಗಳಿಗೂ ವಿಸ್ತರಣೆ ಮಾಡಲಾಗುವುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ನಿನ್ನೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಚಾರ ದಟ್ಟಣೆ ಕವಲ ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ಇದು 2ನೇ ಹಂತದ ನಗರ ಮತ್ತು ವಾಣಿಜ್ಯ ಕೇಂದ್ರಗಳಲ್ಲೂ ಇದೆ.

ಹಾಗಾಗಿ ಬೆಂಗಳೂರಿನ ಮಾದರಿಯಲ್ಲಿರುವ ಬಿಟ್ರ್ಯಾಕ್ ವ್ಯವಸ್ಥೆಯನ್ನು ಜಿಲ್ಲಾ ಕೇಂದ್ರಗಳು ಮತ್ತು ಪ್ರಮುಖ ವಾಣಿಜ್ಯ ಕೇಂದ್ರಗಳಿಗೂ ವಿಸ್ತರಣೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.  ಯಾವ ಯಾವ ಜಿಲ್ಲೆಗಳು ಮತ್ತು ವಾಣಿಜ್ಯ ಕೇಂದ್ರಗಳಲ್ಲಿ ಬಿ ಟ್ರ್ಯಾಕ್ ಅಳವಡಿಸಬಹುದು ಎಂಬುದರ ಅಧ್ಯಯನ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅವರು ವರದಿ ನೀಡಿದ ಬಳಿಕ ಹಂತ ಹಂತವಾಗಿ ಬಿ ಟ್ರ್ಯಾಕ್ ಅಳವಡಿಸಲಾಗುವುದು ಎಂದು ಹೇಳಿದರು.

ನಿನ್ನೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಬೆಂಗಳೂರು ನಗರ ವೀಕ್ಷಣೆ ವೇಳೆ ಹಲವಾರು ಸಮಸ್ಯೆಗಳನ್ನು ಪರಿಹರಿಸಲು ಚರ್ಚೆ ನಡೆಸಲಾಗಿದೆ. ಮುಖ್ಯವಾಗಿ ನಗರದಲ್ಲಿರುವ 12 ಅತಿ ಹೆಚ್ಚು ಸಂಚಾರ ದಟ್ಟಣೆ ರಸ್ತೆಗಳಲ್ಲಿ ಯಾವ ರೀತಿ ನಿಯಂತ್ರ ಮಾಡಬೇಕೆಂಬ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ. ಹೊಸ ಸಿಸಿ ಕ್ಯಾಮೆರಾ ಅಳವಡಿಕೆ, ರಸ್ತೆಗಳ ಆಧುನೀಕರಣ,

ಸಂಚಾರ ದಟ್ಟಣೆ ನಿವಾರಣೆಗೆ ಜನ ಜಾಗೃತಿ ಮೂಡಿಸುವುದು ಸೇರಿದಂತೆ ಹಲವು ರೀತಿಯ ಸಲಹೆಗಳು ಬಂದಿವೆ ಎಂದು ಹೇಳಿದರು. 12 ರಸ್ತೆಗಳಲ್ಲಿ ಸಂಚಾರ ದಟ್ಟಣೆ ನಿವಾರಣೆಯಾದರೆ ಶೇ.50ರಷ್ಟು ಸಂಚಾರ ಸಮಸ್ಯೆ ಕಡಿಮೆ ಆಗುತ್ತದೆ ಈ ಸಮಸ್ಯೆಯನ್ನು ಪರಿಹರಿಸಲು ಬಿಬಿಎಂಪಿ, ಬಿಡಬ್ಲುಎಸ್‍ಎಸ್‍ಬಿ, ಮೆಟ್ರೋ, ನಗರ ಪೆÇಲೀಸರೊಂದಿಗೆ ಸಮನ್ವಯ ಸಾಧಿಸಲು ಸೂಚಿಸಲಾಗಿದೆ ಎಂದು ಹೇಳಿದರು.

ಪೊಲೀಸರು ವಶಪಡಿಸಿಕೊಂಡಿರುವ ವಾಹನಗಳನ್ನು ಠಾಣೆಗಳ ಮುಂದೆ ನಿಲ್ಲಿಸುವುದರಿಂದ ಪಾರ್ಕಿಂಗ್ ಸಮಸ್ಯೆ ಉಂಟಾಗುತ್ತಿದೆ. ಇದಕ್ಕಾಗಿ ಚೆನ್ನಿಗಾನಹಳ್ಳಿ ಬಳಿ ಬಿಬಿಎಂಪಿ ವತಿಯಿಂದ 10 ಎಕರೆ ಜಮೀನು ಖರೀದಿಸಲಾಗಿದೆ.

ಈಗಾಗಲೇ ಮೇಯರ್ ಅವರು 5 ಕೋಟಿ ಹಣವನ್ನು ಕೊಟ್ಟಿದ್ದಾರೆ. 30-40 ವರ್ಷಗಳಿಂದ ವಶಪಡಿಸಿಕೊಂಡಿರುವ ವಾಹನಗಳು ಠಾಣೆ ಮುಂದೆ ಇರುವುದರಿಂದ ಹಲವು ಸಮಸ್ಯೆಗಳು ಉಂಟಾಗುತ್ತಿದೆ.ಇನ್ನು ಮುಂದೆ ಪೊಲೀಸರು ವಶಪಡಿಸಿಕೊಂಡಿರುವ ಕ್ರ್ಯಾಪ್‍ವಾಹನಗಳನ್ನು ಚೆನ್ನಗಾನಹಳ್ಳಿಗೆ ಸ್ಥಳಾಂತರಿಸಲಾಗುವುದು. ಇದರಿಂದ ಹಲವು ಸಮಸ್ಯೆಗಳು ಪರಿಹಾರವಾಗುತ್ತದೆ ಎಂದು ಬಸವರಾಜ್ ಬೊಮ್ಮಾಯಿ ತಿಳಿಸಿದರು.

Facebook Comments