ಇಂದಿನಿಂದ ರೈಲುಗಳ ಸಂಚಾರ ಆರಂಭ, ಇಲ್ಲಿದೆ ಪ್ರಯಾಣಿಕರು ಗಮನಿಸಲೇಬೇಕಾದ ಮಾಹಿತಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.1- ಕಳೆದ ಎರಡು ತಿಂಗಳಿನಿಂದ ಸಾಮಾನ್ಯ ಸಂಚಾರ ನಿಲ್ಲಿಸಿದ್ದ ರೈಲುಗಳು ಇಂದಿನಿಂದ ಸೇವೆ ಆರಂಭಿಸಿವೆ. ಶ್ರಮಿಕ್ ರೈಲುಗಳ ಜೊತೆಗೆ ರಾಜ್ಯದ ಹುಬ್ಬಳ್ಳಿ, ಶಿವಮೊಗ್ಗ, ಬೆಳಗಾವಿ, ಕಾರವಾರ ಸೇರಿದಂತೆ ಇತರೆಡೆಗೆ ಸುಮಾರು ಎರಡು ಸಾವಿರ ರೈಲುಗಳು ಸಂಚಾರ ಆರಂಭಿಸಲಿದೆ ಎಂದು ನೈರುತ್ಯ ರೈಲ್ವೆ ಅಕಾರಿಗಳು ತಿಳಿಸಿದ್ದಾರೆ.

ಇದರಲ್ಲಿ ಗೋವಾ, ನಿಜಾಮುದ್ದೀನ್ ಸೇರಿದಂತೆ ನೆರೆ ರಾಜ್ಯಗಳಿಗೆ ರೈಲುಗಳು ಓಡಲಿವೆ. ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹಿರಿಯ ಅಕಾರಿಗಳು ಈ ಸಂಜೆಗೆ ತಿಳಿಸಿದ್ದಾರೆ.

ಮಾಸ್ಕ್ ಕಡ್ಡಾಯ, ಸೇವಾ ಸೇತು ಆ್ಯಪ್ ಹೊಂದಿರುವುದು ಸೇರಿದಂತೆ ಸಾಮಾಜಿಕ ಅಂತರ ಮತ್ತು ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಪ್ರಯಾಣಿಕರ ತುರ್ತು ಸ್ಪಂದನೆಗಾಗಿ ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ.

ಇದಕ್ಕೆ ರೈಲ್ವೆಯ ಇಲಾಖೆಯ ಪೊಲೀಸರು ಹಾಗೂ ಸಿಬ್ಬಂದಿ ವರ್ಗವರು ನೆರವು ನೀಡಲಿದೆ. ಶ್ರಮಿಕ್ ವಿಶೇಷ ರೈಲಿನಲ್ಲಿ ತೆರಳುವವರಿಗೆ ಊಟ, ನೀರು, ಹಾಗೂ ಇತರೆ ಆಹಾರ ವಸ್ತುಗಳನ್ನು ನೀಡಲಾಗುತ್ತಿದೆ. ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆ ಕೂಡ ಇದಕ್ಕೆ ಕೈ ಜೋಡಿಸಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಯಶವಂತಪುರ ರೈಲು ನಿಲ್ದಾಣ, ಮೈಸೂರಿನ ಅಶೋಕಪುರ ಹಾಗೂ ಕೇಂದ್ರ ನಿಲ್ದಾಣ, ಹುಬ್ಬಳ್ಳಿಯ ಕೇಂದ್ರ ರೈಲ್ವೆ ನಿಲ್ದಾಣಗಳಿಗೆ ಪ್ರವೇಶಿಸುವ ಪ್ರತಿಯೊಬ್ಬರನ್ನು ತಪಾಸಣೆ ಮಾಡಿ ಒಳಗೆ ಬಿಡಲಾಗುತ್ತದೆ.

ಕೇಂದ್ರ ಸರ್ಕಾರ ಜೂ.30ರವರೆಗೆ ಲಾಕ್‍ಡೌನ್ ಮುಂದುವರೆಸಿ ಬಹುತೇಕ ಸೇವೆಗಳ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಇದರಂತೆ ಆಯಾ ರಾಜ್ಯ ಸರ್ಕಾರಗಳು ಕೂಡ ಕೆಲವು ಮಾರ್ಗಸೂಚಿಗಳನ್ನು ಸೂಚಿಸಿದ್ದು, ನೈರುತ್ಯ ರೈಲ್ವೆ ರಾಜ್ಯದ ನಿಯಮದ ಅನುಸಾರ ಕರ್ತವ್ಯ ನಿರ್ವಹಿಸಲಿದೆ ಎಂದು ತಿಳಿಸಲಾಗಿದೆ.

Facebook Comments

Sri Raghav

Admin