ರೈಲು ನಿಲ್ದಾಣದಲ್ಲಿ ಮಮತೆಯ ತೊಟ್ಟಿಲು

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ, ಡಿ.18- ಸಾಮಾಜಿಕ ಸಮಸ್ಯೆಗೆ ಸಿಲುಕಿ, ಹೆತ್ತ ಮಕ್ಕಳನ್ನು ಬಿಟ್ಟು ಹೋಗುವ ತಾಯಂದಿರಿಗೆ ಮಮತೆಯ ತೊಟ್ಟಿಲು ಎಂಬ ವಿನೂತನ ಯೋಜನೆಯನ್ನು ಇಲ್ಲಿನ ರೈಲ್ವೆ ಇಲಾಖೆ , ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಸ್ವಾಮಿ ವಿವೇಕಾನಂದ ಪ್ರತಿಷ್ಠಾನದ ಸಹಯೋಗದಲ್ಲಿ ಜಾರಿಗೊಳಿಸಲಾಗಿದೆ.

ಇಂದು ಈ ಯೋಜನೆಗೆ ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಚಾಲನೆ ನೀಡಿದರು. ಹೆತ್ತ ಕಂದಮ್ಮಗಳನ್ನು ಬಿಟ್ಟು ಹೋಗುವ ತಾಯಂದಿರು ಎಲ್ಲೆಂದರಲ್ಲಿ ಬಿಟ್ಟು ಹೋಗುವ ಬದಲು ಇಲ್ಲಿ ಅಳವಡಿಸಿರುವ ಮಮತೆಯ ತೊಟ್ಟಿಲಲ್ಲಿ ಹಾಕಿ ಬಟನ್ ಒತ್ತಿದರೆ ಅದು ಸ್ಟೇಷನ್ ಮಾಸ್ಟರ್ ಗಮನಕ್ಕೆ ಬರುತ್ತದೆ. ಆ ಮಗುವಿಗೆ ಒಂದು ರಕ್ಷಣೆ ಸಿಗುತ್ತದೆ ಮತ್ತು ಸ್ವಾಮಿವಿವೇಕಾನಂದ ಪ್ರತಿಷ್ಠಾನ ಈ ಮಗುವಿನ ರಕ್ಷಣೆ ಮಾಡುತ್ತದೆ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಯಾವುದೋ ಕಾರಣಕ್ಕೆ ಸಾಮಾಜಿಕ ಸಮಸ್ಯೆ ಮತ್ತು ಅನಿವಾರ್ಯತೆ ಸಿಲುಕಿ ಮಕ್ಕಳನ್ನು ಬಿಟ್ಟು ಹೋಗುವ ತಾಯಂದಿರು ಈ ಮಮತೆಯ ತೊಟ್ಟಿಲಲ್ಲಿ ಮಗು ಹಾಕಿದರೆ ಸರ್ಕಾರ ಹಾಗೂ ವಿವೇಕಾನಂದ ಪ್ರತಿಷ್ಠಾನ ಮಗುವಿನ ಜವಾಬ್ದಾರಿ ಹೊರಲಿದೆ ಎಂದರು.

ರೈಲ್ವೆ ಜನರಲ್ ಮ್ಯಾನೇಜರ್ ಎ.ಕೆ.ಸಿಂಗ್, ಡಿಆರ್‍ಎಂ ಅರವಿಂದ ಮಾಲಖೇಡೆ, ರಾಜ್ಯ ಸಭಾ ಸದಸ್ಯ ಡಾ.ಪ್ರಭಾಕರ ಕೋರೆ, ಅನಿಲ ಬೆನಕೆ, ಮಹಂತೇಶ್ ಕವಟಗಿ ಮಠ, ಅಣ್ಣಾ ಸಾಹೇಬ್ ಜೊಲ್ಲೆ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Facebook Comments