ಮೆಜೆಸ್ಟಿಕ್‌ನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ರೈಲು ಸಂಚಾರ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.4-ರಾಜಧಾನಿ ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ ಪರ್ಯಾಯ ಎಂದೇ ಹೇಳಲಾಗುತ್ತಿರುವ ಬೆಂಗಳೂರು-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಉಪನಗರ ರೈಲು ಸಂಚಾರ ಇಂದಿನಿಂದ ಅಧಿಕೃತವಾಗಿ ಆರಂಭವಾಯಿತು. ಬೆಳಗ್ಗೆ 4.45ಕ್ಕೆ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ದೇವನಹಳ್ಳಿಗೆ ಹೊರಟ ಪ್ರಪ್ರಥಮ ಡೆಮೋ ರೈಲು ಸೇವೆಗೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿ.ಸಿ.ಮೋಹನ್, ಡಿಆರ್‍ಎಂಒ ಅಶೋಕ್ ಶರ್ಮ ಹಾಗೂ ರೈಲ್ವೆ ಅಧಿಕಾರಿಗಳು ಖುದ್ದು ರೈಲಿನಲ್ಲಿ ಪ್ರಯಾಣಿಸುವ ಮೂಲಕ ಚಾಲನೆ ನೀಡಿದರು.

ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ನಿಲ್ದಾಣದಲ್ಲಿ ವಿಮಾನಗಳ ಸಂಚಾರದ ಸಮಯದ ಡಿಸ್ಪ್ಲೇ ಮಾಡಲಾಗಿದೆ. ದೇವನಹಳ್ಳಿ ರೈಲು ನಿಲ್ದಾಣದಿಂದ ಕೇವಲ 15 ನಿಮಿಷಗಳಲ್ಲಿ ಬಸ್ ವಿಮಾನ ನಿಲ್ದಾಣ ತಲುಪಲಿದೆ. ಇತ್ತ ಯಲಹಂಕದಿಂದಲೂ ವಿಮಾನ ನಿಲ್ದಾಣಕ್ಕೆ ಡೆಮು ರೈಲು ಸೇವೆ ಆರಂಭವಾಗಿದೆ. ಬೆಂಗಳೂರು ಕೆಎಸ್‍ಆರ್, ಯಶವಂತಪುರ, ಯಲಹಂಕ ರೈಲ್ವೆ ನಿಲ್ದಾಣದಿಂದ ಒಟ್ಟು ಐದು ರೈಲುಗಳ ಸಂಚಾರಕ್ಕೆ ಚಾಲನೆ ನೀಡಲಾಯಿತು.

ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರಿಗೆ 10 ರೂ. ನಿಗದಿಪಡಿಸಲಾಗಿದ್ದು, ದೇವನಹಳ್ಳಿಯಿಂದ 15 ನಿಮಿಷದಲ್ಲಿ ವಿಮಾನ ನಿಲ್ದಾಣವನ್ನು ತಲುಪಬಹುದು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣಿಕರಿಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ರೈಲ್ವೆ ನಿಲ್ದಾಣದಿಂದ ನೇರವಾಗಿ ವಿಮಾನದ ಟರ್ಮಿನಲ್ ಕಡೆ ಬಸ್ ಸಂಚಾರ ಆಗಲಿದೆ.

ಒಟ್ಟು 5 ರೈಲುಗಳಿದ್ದು, ದಿನಕ್ಕೆ 10 ಟ್ರಿಪ್ ಇರಲಿದೆ. ಭಾನುವಾರ ಹೊರತುಪಡಿಸಿ ವಾರದ ಉಳಿದ ಎಲ್ಲ ದಿನ ಈ ರೈಲುಗಳು ಸಂಚರಿಸಲಿವೆ. ಸಾಮಾನ್ಯ ರೈಲು ದರ 10 ರೂ. ಆಗಿದ್ದು, ಎಕ್ಸ್‍ಪ್ರೆಸ್ ರೈಲು ದರ 30 ರೂ.ಗಳನ್ನು ನಿಗದಪಡಿಸಲಾಗಿದೆ.  ಕೋವಿಡ್-19ಹಿನ್ನೆಲೆಯಲ್ಲಿ ರೈಲಿನಲ್ಲೂ ಕೂಡ ಸಾಮಾಜಿಕ ಅಂತರಕ್ಕೆ ಆದ್ಯತೆ ನೀಡಲಾಗಿದ್ದು, ಸೀಟುಗಳಲ್ಲಿ ಕೆಂಪು ಬಣ್ಣದಿಂದ ಗೆರೆ ಎಳೆಯಲಾಗಿದೆ.

ರೈಲ್ವೆ ಸೀಟುಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕೆಂಪು ಬಣ್ಣದಿಂದ ಗೆರೆ ಎಳೆಯಲಾಗಿತ್ತು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಹಾಲ್ಟ್ ಸ್ಟೇಷನ್ ನಲ್ಲಿ ರೈಲುಗಳ ವೇಳಾಪಟ್ಟಿ, ಪ್ರಯಾಣಿಕರ ಆಸನ ವ್ಯವಸ್ಥೆ, ಟಿಕೆಟ್ ಕೌಂಟರ್ ನಿಂದ ಹಿಡಿದು ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.  ವಿಮಾನಗಳ ದಟ್ಟಣೆ ಅವಧಿಗೆ ಅನುಗುಣವಾಗಿ ಈ ರೈಲುಗಳ ವೇಳಾಪಟ್ಟಿಯನ್ನು ಸಿದ್ದಪಡಿಸಲಾಗಿದೆ.ವಿಮಾನಗಳು ಹೆಚ್ಚು ಸಂಚರಿಸುವ ವೇಳೆ ಉಪನಗರ ರೈಲುಗಳು ಕಾರ್ಯಚರಣೆ ಮಾಡಲಿವೆ.

ಈ ಸಂಬಂಧ ಟ್ವೀಟ್ ಮಾಡಿರುವ ರೈಲ್ವೆ ಸಚಿವ ಪಿಯೂಶ್ ಗೋಯಲ್, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಹಾಲ್ಟ್ ಸ್ಟೇಷನ್ ರೈಲು ನಿಲ್ದಾಣ ಪ್ರಯಾಣಿಕರ ಸೇವೆಗೆ ಇಂದಿನಿಂದ ಮುಕ್ತವಾಗಿದೆ. ಇದರಿಂದ ಲಕ್ಷಾಂತರ ಜನರಿಗೆ ಅನುಕೂಲವಾಗಲಿದ್ದು, ಜನ ದಟ್ಟಣೆಯನ್ನು ಪರಿಣಾಮಕಾರಿಯಾಗಿ ತಗ್ಗಿಸುವಲ್ಲಿ ಸಹಕಾರಿಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ಅಂದಹಾಗೆ ದೇವನಹಳ್ಳಿಯಿಂದ ಹಾಲ್ಟ್ ಸ್ಟೇಷನ್ಗೆ 3, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ 2, ಬಂಗಾರಪೇಟೆಯಿಂದ 2, ಯಲಹಂಕದಿಂದ 1, ಯಶವಂತಪುರದಿಂದ 1, ಬೆಂಗಳೂರು ಕಂಟೋನ್ಮೆಂಟ್ನಿಂದ 1 ರೈಲು ಹಾಲ್ಟ್ ಸ್ಟೇಷನ್‍ಗೆ ಸಂಚರಿಸಲಿವೆ. ಆರಂಭಿಕವಾಗಿ 10 ರೈಲುಗಳು ಈ ಮಾರ್ಗದಲ್ಲಿ ಸಂಚರಿಸಲಿವೆ. ಕೊರೋನಾ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆಯನ್ನು ಗಮನಿಸಿಕೊಂಡು ರೈಲುಗಳ ಸಂಖ್ಯೆಯನ್ನು ಹೆಚ್ಚಿಸುವ ಯೋಜನೆಯನ್ನು ರೈಲ್ವೆ ಇಲಾಖೆ ಹೊಂದಿದೆ.

ವಿಮಾನಗಳ ಸಮಯವನ್ನು ಗಮನದಲ್ಲಿಟ್ಟುಕೊಂಡು ರೈಲಿನ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಹೆಚ್ಚು ವಿಮಾನಗಳು ಸಂಚರಿಸುವ ಅವಧಿಗೂ ಮೊದಲೇ ಪ್ರಯಾಣಿಕರು ವಿಮಾನ ನಿಲ್ದಾಣ ತಲುಪಲು ಅನುಕೂಲವಾಗುವಂತೆ ರೈಲು ವ್ಯವಸ್ಥೆ ಮಾಡಲಾಗಿದೆ. ಮೆಜೆಸ್ಟಿಕ್‍ನಿಂದ ಏರ್ ಪೋರ್ಟ್  ಗೆ ದಿನಕ್ಕೆ ಮೂರು ಜೋಡಿ ರೈಲುಗಳು ಸಂಚರಿಸಲಿವೆ.

ಮೆಜೆಸ್ಟಿಕ್ನಲ್ಲಿರುವ ರೈಲ್ವೆ ನಿಲ್ದಾಣದಿಂದ ಹಾಲ್ಟ್ ಸ್ಟೇಷನ್‍ಗೆ 50 ನಿಮಿಷಗಳು ಬೇಕಾಗುತ್ತವೆ. ಮುಂದೆ ಈ ಅವಧಿಯನ್ನು ಕಡಿಮೆಗೊಳಿಸಲು ಸ್ಟಾಪ್‍ಗಳ ಸಂಖ್ಯೆಯನ್ನು ಕಡಿತಗೊಳಿಸಲಾಗುವುದು ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Facebook Comments