ತೃತೀಯ ಲಿಂಗಿಗಳಿಗೆ ದೇಶದ ಪ್ರಥಮಿ ವಿಶ್ವವಿದ್ಯಾಲಯ ಸ್ಥಾಪನೆ

ಈ ಸುದ್ದಿಯನ್ನು ಶೇರ್ ಮಾಡಿ

ಗೋರಖ್‍ಪುರ, ಡಿ.26- ಪಾಶ್ಚಿಮಾತ್ಯ ದೇಶಗಳಲ್ಲಿ ತೃತೀಯ ಲಿಂಗಿಗಳಿಗೆ (ಟ್ರಾನ್ಸ್ ಜಂಡರ್) ಎಲ್ಲ ಕ್ಷೇತ್ರಗಳಲ್ಲಿ ಲಭಿಸುತ್ತಿರುವ ಮಾನ್ಯತೆ ಈಗ ಭಾರತದಲ್ಲೂ ದೊರೆಯುತ್ತಿದೆ. ಇದಕ್ಕೆ ಸ್ಪಷ್ಟ ನಿದರ್ಶನ ಇಲ್ಲಿದೆ.  ಉತ್ತರ ಪ್ರದೇಶದ ಕುಶಿನಗರ ಜಿಲ್ಲಾಯಲ್ಲಿ ತೃತೀಯ ಲಿಂಗಿಗಳಿಗಾಗಿ ದೇಶದ ಮೊದಲ ವಿಶ್ವವಿದ್ಯಾಲಯ ಆರಂಭವಾಗಲಿದೆ. ಒಂದನೆ ತರಗತಿಯಿಂದ ಸ್ನಾತಕೋತ್ತರ ಪದವಿವರೆಗೂ ವ್ಯಾಸಂಗ ಮಾಡಲು ಇಲ್ಲಿ ಅವಕಾಶವಿದೆ. ಅಲ್ಲದೆ, ಸಂಶೋಧನೆ, ಪಿಹೆಚ್‍ಡಿ ಪದವಿ ಕೂಡ ಮಾಡಬಹುದಾಗಿದೆ.

ಕುಶಿನಗರದ ಪಾಜಿಲ್ ನಗರ ಬ್ಲಾಕ್‍ನಲ್ಲಿ ಅಖಿಲ ಭಾರತೀಯ ಕಿನ್ನಾರ್ ಶಿಕ್ಷ ಸೇವಾ ಟ್ರಸ್ಟ್ ನಿಂದ (ಅಖಿಲ ಭಾರತ ತೃತೀಯ ಲಿಂಗಿಗಳ ಶಿಕ್ಷಣ ಸೇವಾ ಟ್ರಸ್ಟ್ ) ಈ ವಿಶ್ವವಿದ್ಯಾಲಯ ಆರಂಭಿಸಲಿದೆ. ತೃತೀಯ ಲಿಂಗಿಗಳು ಶಿಕ್ಷಣ ಪಡೆಯಲು ಸ್ಥಾಪನೆಯಾಗುತ್ತಿರುವ ದೇಶದ ಮೊದಲ ವಿಶ್ವವಿದ್ಯಾಲಯ ಇದಾಗಿದ್ದು, ಬರುವ ಜನವರಿ 15ರಿಂದ ಈ ಸಮುದಾಯದ ಇಬ್ಬರು ತೃತೀಯ ಲಿಂಗಿಗಳಿಗೆ ಪ್ರವೇಶ ನೀಡಲಾಗುತ್ತಿದೆ.

ಫೆಬ್ರವರಿ ಮತ್ತು ಮಾರ್ಚ್‍ನಲ್ಲಿ ತರಗತಿಗಳು ಆರಂಭವಾಗಲಿವೆ ಎಂದು ಟ್ರಸ್ಟ್ ಅಧ್ಯಕ್ಷ ಡಾ.ಕೃಷ್ಣ ಮೋಹನ್ ಮಿಶ್ರಾ ತಿಳಿಸಿದ್ದಾರೆ. ಈ ವಿವಿಯಲ್ಲಿ ತೃತೀಯ ಲಿಂಗಿಗಳು ಒಂದನೆ ತರಗತಿಯಿಂದ ಪಿಜಿಯವರೆಗೂ ವ್ಯಾಸಂಗ ಮಾಡಬಹುದಾಗಿದೆ. ಸಂಶೋಧನೆ ಪಿಎಚ್‍ಡಿ ಕೂಡ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.

ಸಮಾಜದಲ್ಲಿ ಶಿಕ್ಷಣ ಪಡೆದು ಗೌರವಯುತ ಜೀವನ ನಡೆಸಲು ಅವಕಾಶ ಕಲ್ಪಿಸುತ್ತಿರುವುದಕ್ಕೆ ಸಂತೋಷವಾಗುತ್ತಿರುವುದಾಗಿ ಈ ಸಮುದಾಯದ ಸದಸ್ಯರಲ್ಲಿ ಒಬ್ಬರಾದ ಗುಡ್ಡಿ ಕಿನ್ನಾರ್ ಹೇಳಿದ್ದಾರೆ. ದೇಶದ ಎಲ್ಲ ರಾಜ್ಯಗಳ ವಿವಿಧ ಚುನಾವಣೆಗಳಲ್ಲಿ ಮತ ಚಲಾಯಿಸಲು ಈ ವರ್ಗದವರಿಗೆ ಈಗಾಗಲೇ ಅವಕಾಶ ನೀಡಲಾಗಿದೆ.

Facebook Comments