ಜ.8 ಮತ್ತು 9ರಂದು ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಸಂಚಾರ ಇರಲ್ಲ..!

ಈ ಸುದ್ದಿಯನ್ನು ಶೇರ್ ಮಾಡಿ

KSRTC-and-BMTC
ಬೆಂಗಳೂರು,ಜ.6-ರಸ್ತೆ ಸುರಕ್ಷತಾ ತಿದ್ದುಪಡಿ ಮಸೂದೆ ವಿರೋಧಿಸಿ ಸಾರಿಗೆ ಇಲಾಖೆ ಕಾರ್ಮಿಕ ಸಂಘಟನೆಗಳು ಜ.8 ಮತ್ತು 9ರಂದು ಎರಡು ದಿನ ಕೇಂದ್ರ ಸರ್ಕಾರದ ವಿರುದ್ಧ ಭಾರತ್ ಬಂದ್‍ಗೆ ಕರೆ ಕೊಟ್ಟಿದ್ದು, ಸಾರಿಗೆ ವ್ಯವಸ್ಥೆ ಅಸ್ತವ್ಯಸ್ಥಗೊಳ್ಳುವ ಸಾಧ್ಯತೆ ಇದೆ.

ಎಐಟಿಯುಸಿ, ಸಿಐಟಿಯು, ಐಎನ್‍ಟಿಯುಸಿ, ಎಲ್‍ಪಿಎಫ್ ಕಾರ್ಮಿಕ ಸಂಘಟನೆಗಳು ಬಂದ್‍ಗೆ ಕರೆ ಕೊಟ್ಟಿದ್ದು, 12 ಬೇಡಿಕೆಗಳನ್ನು ಮುಂದಿಟ್ಟು ಎರಡು ದಿನ ಬೀದಿಗಿಳಿಯಲಿವೆ. ಈ ಹಿನ್ನೆಲೆಯಲ್ಲಿ ಬಿಎಂಟಿಸಿ ಹಾಗೂ ಕೆಎಸ್‍ಆರ್‍ಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮದ ಬಸ್‍ಗಳು ಸ್ತಬ್ಧವಾಗುವ ಸಾಧ್ಯತೆ ಇದೆ.

ಜ.8ರಂದು ಬೆಳಗ್ಗೆ 6 ಗಂಟೆಯಿಂದ 9ರ ಸಂಜೆ ಐದು ಗಂಟೆಯವರೆಗೆ ಬಂದ್ ನಡೆಯಲಿದ್ದು, ಈಗಾಗಲೇ ಕೇಂದ್ರ ಸರ್ಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ರಾಜ್ಯದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರವೂ ಬೆಂಬಲ ಕೊಟ್ಟಿದೆ.ಮೋಟಾರು ವಾಹನ ತಿದ್ದುಪಡಿ ಮಸೂದೆ-2017ರನ್ನು ಹಿಂಪಡೆಯಲು, ಸಾರಿಗೆ ಉದ್ದಿಮೆಯನ್ನು ರಕ್ಷಿಸಲು ಮತ್ತು ಅಸಂಘಟಿತ ಸಾರಿಗೆ ಕಾರ್ಮಿಕರಿಗೆ ಸಾಮಾಜಿಕ ಸುರಕ್ಷಾ ಕಾಯ್ದೆಯನ್ನು ಜಾರಿಗೊಳಿಸಲು ಬಂದ್‍ಗೆ ಕರೆ ನೀಡಲಾಗಿದೆ.

ಎರಡು ದಿನಗಳ ಕಾಲ ಬಿಎಂಟಿಸಿ, ಕೆಎಸ್‍ಆರ್‍ಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮದ ಬಸ್ ಸೇವೆ ವ್ಯತ್ಯಯವಾಗಲಿದೆ. ಅಷ್ಟೇ ಅಲ್ಲದೇ ಆಟೋ ಸಂಘಟನೆಯಿಂದ ಬೆಂಬಲ ಇರುವುದರಿಂದ ಆಟೋ ಕೂಡ ಸಿಗುವುದಿಲ್ಲ. ಇತ್ತ ಓಲಾ ಮತ್ತು ಊಬರ್ ಕ್ಯಾಬ್‍ಗಳು ಸಿಗುವುದಿಲ್ಲ.

ಮುಷ್ಕರದಲ್ಲಿ ಬ್ಯಾಂಕ್ ನೌಕರರು ಕೂಡ ಪಾಲ್ಗೊಳ್ಳಲಿದ್ದು, ಬ್ಯಾಂಕ್ ಸೇವೆಯಲ್ಲೂ ವ್ಯತ್ಯಯವಾಗಲಿದೆ. ಎಪಿಎಂಸಿ ಲಾರಿ ಸಿಬ್ಬಂದಿಗಳು ಮುಷ್ಕರಕ್ಕೆ ಬೆಂಬಲ ನೀಡಿದ್ದು ಎಪಿಎಂಸಿ ಮಾರುಕಟ್ಟೆಗಳು ಸ್ಥಬ್ಧವಾಗಲಿವೆ. ಮೆಟ್ರೋ ಸಂಚಾರ ಎಂದಿನಂತಿದ್ದು, ರೈಲುಗಳ ಸೇವೆಯೂ ಲಭ್ಯವಿದೆ. ಇನ್ನು ಹೊಟೇಲ್ ಮಾಲೀಕರ ಸಂಘ, ಚಿತ್ರೋದ್ಯಮ ಬಂದ್‍ಗೆ ನೈತಿಕ ಬೆಂಬಲ ನೀಡಿದೆ. ಪರಿಸ್ಥಿತಿಯನ್ನು ನೋಡಿಕೊಂಡು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಶಾಲಾ ಕಾಲೇಜುಗಳಿಗೆ ರಜೆ ಘೊಷಣೆ ಮಾಡಲಿದ್ದಾರೆ.

Facebook Comments

Sri Raghav

Admin