ಸಾರಿಗೆ ನೌಕರರ ಮುಷ್ಕರದಿಂದ ಆಗುವ ನಷ್ಟವೆಷ್ಟು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.7- ಜನಸಾಮಾನ್ಯರ ಜೀವನಾಡಿ ಎಂದೇ ಬಿಂಬಿತವಾಗುವ ಸಾರಿಗೆ ಬಸ್‍ಗಳ ಮುಷ್ಕರದಿಂದ ಕೇವಲ ಜನರಿಗೆ ತೊಂದರೆಯಾಗುವುದಿಲ್ಲ, ಸರ್ಕಾರದ ಬೊಕ್ಕಸಕ್ಕೂ ದೊಡ್ಡ ಪೆಟ್ಟು ಬೀಳಲಿದೆ..! ಇತ್ತೀಚಿನ ಕೋವಿಡ್ ಸಂಕಷ್ಟ ಹಾಗೂ ಪ್ರತಿಭಟನೆ ಬಿಸಿಯಿಂದ ಸಾರಿಗೆ ಇಲಾಖೆಗೆ ಸರಿಸುಮಾರು 16 ಸಾವಿರ ಕೋಟಿ ರೂ.ಗೂ ಹೆಚ್ಚು ನಷ್ಟವಾಗಿದೆ.

ಇಡೀ ದೇಶದಲ್ಲೇ ಉತ್ತಮ ಸೇವೆ ಒದಗಿಸುವ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡಿರುವ ಮತ್ತು ಸುಸಜ್ಜಿತ ಬಸ್‍ಗಳನ್ನು ಹೊಂದಿರುವ ಕೀರ್ತಿ ಪಡೆದಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಷ್ಟದ ಕೂಪಕ್ಕೆ ಬಿದ್ದು ಒದ್ದಾಡುತ್ತಿರುವ ಸಂದರ್ಭದಲ್ಲೇ ಮುಷ್ಕರದ ಬಿಸಿ ತಟ್ಟಿದ್ದು, ಮುಂದೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಬಹುದು.

ಸಾರಿಗೆ ಸಿಬ್ಬಂದಿಗಳಿಗೆ ತಿಂಗಳಿಗೆ 400 ಕೋಟಿ ರೂ. ಕೇವಲ ವೇತನಕ್ಕಾಗಿ ಹೋದರೆ ಇನ್ನು ಡೀಸೆಲ್ ಹಾಗೂ ನಿರ್ವಹಣೆಗಾಗಿ 300 ರಿಂದ 400 ಕೋಟಿ ಬೇಕಾಗುತ್ತದೆ. ಇದೆಲ್ಲದರ ನಡುವೆ ಪ್ರಸ್ತುತ ಮುಷ್ಕರ ನಡೆಸುತ್ತಿರುವುದು ಸರ್ಕಾರಕ್ಕೆ ಹೊಸ ತಲೆನೋವಾಗಿ ಪರಿಣಮಿಸಿದೆ. ಆರ್ಥಿಕ ಇಲಾಖೆ ಇದರ ಬಗ್ಗೆ ಪರಿಶೀಲಿಸಿ ನೋಡಿದಾಗ 6ನೆ ವೇತನ ಆಯೋಗ ಜಾರಿಯಾದರೆ ವಾರ್ಷಿಕ 4 ಸಾವಿರ ಕೋಟಿ ಹೆಚ್ಚುವರಿ ಹೊರೆ ಬೀಳುತ್ತದೆ.

ಈಗಾಗಲೇ ಕೋವಿಡ್ ಸಂದರ್ಭದಲ್ಲಿ ಬಸ್ ಸಂಚಾರ ಇಲ್ಲದಿದ್ದರೂ ಸಹ ನೌಕರರಿಗೆ ಸುಮಾರು 2100 ಕೋಟಿ ರೂ.ಗಳನ್ನು ಸರ್ಕಾರ ಬಿಡುಗಡೆ ಮಾಡಿ ಅವರ ಅಲ್ಪಮಟ್ಟಿನ ಸಂಕಷ್ಟಕ್ಕೆ ನೆರವಾಗಿದೆ. ಈಗ ಮತ್ತೆ ಮುಷ್ಕರ ಆರಂಭಿಸಿರುವುದರಿಂದ ಪ್ರತಿದಿನ ವಿವಿಧ ಆದಾಯ, ಎಲ್ಲ ಸೇರಿ ಸುಮಾರು 10 ರಿಂದ 20ಕೋಟಿಗೂ ಹೆಚ್ಚು ನಷ್ಟವಾಗುತ್ತಿದೆ. ಈಗಾಗಲೇ ಸಾಲದ ಹೊರೆಯಲ್ಲಿರುವ ಕೆಎಸ್‍ಆರ್‍ಟಿಸಿಗೆ ಇದು ದೊಡ್ಡ ಪೆಟ್ಟು ನೀಡಲಿದೆ.

ಬಸ್‍ಗಳ ಓಡಾಟದ ಸಂದರ್ಭದಲ್ಲೇ ಪ್ರತಿದಿನ 4 ಸಾವಿರ ಕೋಟಿ ನಷ್ಟವನ್ನು ಸಾರಿಗೆ ಇಲಾಖೆ ಅನುಭವಿಸುತ್ತಿದೆ ಎಂದು ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರು ಸ್ಫೋಟಕ ಮಾಹಿತಿ ನೀಡಿದ್ದಾರೆ. ಆದರೆ, ಈಗ ಸಂಪೂರ್ಣ ಸೇವೆಯೇ ನಿಂತುಹೋದರೆ ನಷ್ಟದ ಪ್ರಮಾಣ ದುಪ್ಪಟ್ಟಾದರೂ ಅಚ್ಚರಿ ಪಡಬೇಕಿಲ್ಲ. ಈಗಲೂ ಸಹ ಬಸ್‍ಗಳಲ್ಲಿ ಜನರ ಓಡಾಟ ಕಡಿಮೆ ಇದೆ. ಪರೀಕ್ಷೆಗಳು ನಡೆಯುತ್ತಿವೆ. ಯುಗಾದಿ ಹಬ್ಬ ಹತ್ತಿರವಿದೆ. ಹೀಗಿರುವಾಗ ಮುಷ್ಕರ ನಡೆಸಿದಾಗ ಆಗುವ ಸಮಸ್ಯೆಗಳಿಗೆ ಹೊಣೆ ಯಾರು?

ಸರ್ಕಾರ ಈಗಾಗಲೇ ಶೇ.8ರಷ್ಟು ವೇತನ ಹೆಚ್ಚಳಕ್ಕೆ ಒಪ್ಪಿಗೆ ಸೂಚಿಸಿದೆ. ಆದರೆ ಇದಕ್ಕೆ ಸಾರಿಗೆ ನೌಕರರು ಒಪ್ಪುತ್ತಿಲ್ಲ. ಈಗ ಪ್ರಮುಖವಾಗಿ ಎದ್ದಿರುವ 6ನೆ ವೇತನ ಆಯೋಗದ ಶಿಫಾರಸಿಗೆ ಸರ್ಕಾರ ಒಪ್ಪುತ್ತಿಲ್ಲ, ನೌಕರರು ಬಗ್ಗುತ್ತಿಲ್ಲ. ಹೀಗಿರುವಾಗ ಮಧ್ಯದಲ್ಲಿ ಸಾರ್ವಜನಿಕರು ಸಮಸ್ಯೆಯನ್ನು ಎದುರಿಸಬೇಕಾಗಿದೆ.

ಸೇವಾ ಕ್ಷೇತ್ರದಲ್ಲಿ ಆದಾಯ ನಿರೀಕ್ಷಿಸಬಾರದು. ಆರ್ಥಿಕ ಶಿಸ್ತು ಅಗತ್ಯವಾಗಿರುತ್ತದೆ ಎಂಬುದನ್ನು ಮನಗಾಣಬೇಕಿದೆ. ಸೇವೆಯನ್ನು ಉಚಿತವಾಗಿ ನೀಡಲು ಆಗುವುದಿಲ್ಲ. ಅದು ಅಪಾಯ ಕೂಡ ಎಂಬುದನ್ನು ಇತಿಹಾಸದಿಂದ ತಿಳಿಯಬಹುದು.

Facebook Comments