ಸವದಿ ಸೂಚನೆ ಲೆಕ್ಕಕ್ಕಿಲ್ಲ : ಖಾಸಗಿ ವಾಹನ ಚಾಲಕರ ದಿಕ್ಕು ತಪ್ಪಿಸುತ್ತಿರುವ ಸಾರಿಗೆ ಇಲಾಖೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 23- ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರ ಸೂಚನೆಯನ್ನು ಲೆಕ್ಕಿಸದೆ ಸಾರಿಗೆ ಇಲಾಖೆ ಆಟೋ, ಟ್ಯಾಕ್ಸಿ ಚಾಲಕರಿಗೆ ಸೌಲಭ್ಯ ತಲುಪದಂತೆ ಅಡೆ ತಡೆ ಉಂಟು ಮಾಡುತ್ತಿದೆ.

ಕೊರೊನಾ ಸಂದರ್ಭದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗಲು ಮುಖ್ಯಮಂತ್ರಿ ಯಡಿಯೂರಪ್ಪ 1610 ಕೋಟಿ ರೂ.ಗಳ ಪ್ಯಾಕೇಜï ಘೋಷಣೆ ಮಾಡಿದ್ದಾರೆ. ಅದರಲ್ಲಿ ಚಾಲಕರಿಗೆ ಮಾಸಿಕ ಐದು ಸಾವಿರ ರೂ.ನೀಡುವುದು ಸೇರಿದೆ.

ಐದು ಸಾವಿರ ರೂ. ಪಡೆಯಲು ಚಾಲಕರು ಸೇವಾಸಿಂಧು ಆ್ಯಪ್‍ನಲ್ಲಿ ನೋಂದಾಯಿಸಿಕೊಳ್ಳಬೇಕು. ಈ ನೋಂದಾವಣೆಗೆ ನಾನಾ ರೀತಿಯ ಷರತ್ತುಗಳನ್ನು ವಿಧಿಸಲಾಗಿತ್ತು.

ಚಾಲಕರು ತಮ್ಮ ಚಾಲನ ಪರವಾನಗಿಯ ಸಂಖ್ಯೆ, ಆಧಾರ್ ಸಂಖ್ಯೆ, ಬ್ಯಾಂಕ್ ಸಂಖ್ಯೆಯ ಜೊತೆಗೆ, ವಾಹನದ ಎಫ್‍ಸಿ ಸಂಖ್ಯೆ, ಚಾರ್ಸಿ ಸಂಖ್ಯೆ ಸೇರಿ ನಾನಾ ರೀತಿಯ ಮಾಹಿತಿ ಕೇಳಲಾಗಿತ್ತು. ಇದರಿಂದ ವಾಹನಗಳ ಮಾಲೀಕರಿಗೆ ಮಾತ್ರ ಅನುಕೂಲವಾಗುತ್ತಿತ್ತು.

ಇದನ್ನು ಚಾಲಕರ ಸಂಘಗಳು ವಿರೋಧಿಸಿದವು. ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡುರಾವ್ ನೇತೃತ್ವದಲ್ಲಿ ಸಾರಿಗೆ ಸಚಿವರನ್ನು ಭೇಟಿ ಮಾಡಿ ಚರ್ಚೆ ಮಾಡಲಾಗಿತ್ತು. ಸಭೆ ವೇಳೆ ಚಾಲಕರ ಚಾಲನಾ ಪರವಾನಗಿಯ ಬ್ಯಾಡ್ಜ್ ಸಂಖ್ಯೆ, ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಮಾಹಿತಿ ಮಾತ್ರ ಪಡೆದು ಆರ್ಥಿಕ ನೆರವು ನೀಡಬೇಕು ಎಂದು ಸೂಚಿಸಲಾಗಿತ್ತು. ಸಭೆಯಲ್ಲಿದ್ದ ಸಾರಿಗೆ ಇಲಾಖೆ ಅಧಿಕಾರಿಗಳು ಅದಕ್ಕೆ ಒಪ್ಪಿಕೊಂಡಿದ್ದರು.

ನಿನ್ನೆ ಸಂಜೆಯಿಂದ ಸೇವಾ ಸಿಂಧು ಆ್ಯಪ್‍ನಲ್ಲಿ ನೋಂದಣಿ ಆರಂಭಗೊಂಡಿದೆ. ಆದರೆ, ಮತ್ತದೆ ಹಳೆಯ ಮಾಹಿತಿಗಳನ್ನು ಕೇಳಲಾಗಿದೆ. ವಾಹನದ ಚಾರ್ಸಿ ಸಂಖ್ಯೆ ಮತ್ತು ಎಫ್‍ಸಿ ಸಂಖ್ಯೆ ನಮೂದಿಸಬೇಕಿದೆ. ಇಲ್ಲವಾದರೆ ನೋಂದಣಿ ಪೂರ್ತಿಯಾಗುತ್ತಿಲ್ಲ. ಈ ನಡುವೆ ಸೇವಾ ಸಿಂಧು ಆ್ಯಪ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ಆರೋಪಗಳಿವೆ.

ಖುದ್ದು ಸಚಿವರೇ ಸೂಚನೆ ನೀಡಿದ್ದರೂ ಅದನ್ನು ಲೆಕ್ಕಿಸದೆ ತಾವು ನಡೆದಿದ್ದೆ ದಾರಿ ಎಂಬಂತೆ ವರ್ತಿಸುತ್ತಿರುವ ಸಾರಿಗೆ ಆಯುಕ್ತರನ್ನು ವರ್ಗಾವಣೆ ಮಾಡುವಂತೆ ರಾಷ್ಟ್ರೀಯ ಚಾಲಕರ ಒಕ್ಕೂಟದ ಅಧ್ಯಕ್ಷ ಗಂಡಸಿ ಸದಾನಂದಸ್ವಾಮಿ ಒತ್ತಾಯಿಸಿದ್ದಾರೆ.

Facebook Comments

Sri Raghav

Admin