“ಮಾತುಕತೆ ಪ್ರಶ್ನೆಯೇ ಇಲ್ಲ, ಬಸ್ ಸಂಚಾರ ನಿಲ್ಲಿಸಿದರೆ ಎಸ್ಮಾ ಜಾರಿ’ : ಸರ್ಕಾರ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.6- ಯಾವುದೇ ಕಾರಣಕ್ಕೂ ಸಾರಿಗೆ ನೌಕರರ ಜೊತೆ ಮಾತುಕತೆ ಅಥವಾ ಸಂಧಾನ ನಡೆಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿರುವ ರಾಜ್ಯ ಸರ್ಕಾರ, ಪ್ರತಿಭಟನೆ, ಮುಷ್ಕರ ನಡೆಸುವವರ ಮೇಲೆ ಅಗತ್ಯ ಸೇವಾ ನಿರ್ವಹಣಾ ಕಾಯ್ದೆ(ಎಸ್ಮಾ) ಸೇರಿದಂತೆ ಅದಕ್ಕಿಂತಲೂ ಕಠಿಣ ಕಾನೂನಿನ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದೆ. ಸಾರಿಗೆ ನೌಕರರು ನಾಳೆ ನಡೆಸಲು ಉದ್ದೇಶಿಸಿರುವ ಮುಷ್ಕರವನ್ನು ಕೈಬಿಡಬೇಕು.

ಸಾರ್ವಜನಿಕರಿಗೆ ತೊಂದರೆ ಕೊಡುವುದು ಅಥವಾ ಸರ್ಕಾರಿ ವಾಹನಗಳನ್ನು ಹಾನಿ ಮಾಡುವುದು ಕಂಡುಬಂದಲ್ಲಿ ಅಂಥವರ ಮೇಲೆ ಎಸ್ಮಾ, ವಿಪತ್ತು ನಿರ್ವಹಣಾ ಕಾಯ್ದೆ ಸೇರಿದಂತೆ ಅದಕ್ಕಿಂತಲೂ ಗಂಭೀರವಾದ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ನೌಕರರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ, ವ್ಯವಸ್ಥಾಪಕ ನಿರ್ದೇಶಕಿ ಶಿಖಾ, ಕೆಎಸ್‍ಆರ್‍ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್, ಕೆಎಸ್‍ಆರ್‍ಟಿಸಿ ಆಯುಕ್ತ ಶಿವಕುಮಾರ್, ವಾಯುವ್ಯ,ಈಶಾನ್ಯ ಸೇರಿದಂತೆ 4 ನಿಗಮಗಳ ವ್ಯವಸ್ಥಾಪಕ ನಿರ್ದೇಶಕರ ಜೊತೆ ಸಭೆ ನಡೆಸಿದರು.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಯಾವುದೇ ಕಾರಣಕ್ಕೂ ಈಗಿನ ಪರಿಸ್ಥಿತಿಯಲ್ಲಿ ಸಾರಿಗೆ ನೌಕರರಿಗೆ 6ನೇ ವೇತನ ಆಯೋಗದಂತೆ ವೇತನ ಪರಿಷ್ಕರಣೆ ಮಾಡಲು ಸಾಧ್ಯವೇ ಇಲ್ಲ. ನೌಕರರು ಕೂಡಲೇ ಪ್ರತಿಭಟನೆಯನ್ನು ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಸಿದರು. ಅನಧಿಕೃತವಾಗಿ ಗೈರು ಹಾಜರಾದರೆ ಅವರಿಗೆ ವೇತನದಲ್ಲಿ ಕಡಿತಗೊಳ್ಳುತ್ತದೆ ಎಂದರು.

ನಾವು ಸಾರಿಗೆ ನೌಕರರ ಒಕ್ಕೂಟದ ಮುಖಂಡರ ಜೊತೆಯಾಗಲಿ ಅಥವಾ ಇನ್ಯಾರ ಜೊತೆಯೂ ಮಾತುಕತೆ ನಡೆಸುವುದಿಲ್ಲ. ಸಂಧಾನದ ಮಾತು ಮುಗಿದ ಅಧ್ಯಾಯ. ಯಾರಾದರೂ ಸಾರ್ವಜನಿಕರಿಗೆ ಅನಗತ್ಯವಾಗಿ ತೊಂದರೆ ಕೊಟ್ಟರೆ ಇಲ್ಲವೇ ಸರ್ಕಾರಿ ವಾಹನಗಳನ್ನು ಹಾನಿಗೊಳಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳಲು ಸಂಬಂಧಪಟ್ಟವರಿಗೆ ಸೂಚಿಸಿರುವುದಾಗಿ ಹೇಳಿದರು.

ಸಾರಿಗೆ ನೌಕರರ ವೇತನವನ್ನು ಶೇ.8ರಷ್ಟು ಹೆಚ್ಚಳ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಇದಕ್ಕೆ ಅನುಮತಿಯನ್ನು ಕೊಡಬೇಕೆಂದು ನಿನ್ನೆಯಷ್ಟೇ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದೇವೆ. ಅವರು ಅನುಮತಿ ಕೊಟ್ಟರೆ ವೇತನ ಪರಿಷ್ಕರಣೆಯಾಗಲಿದೆ. ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ನಾವು ಯಾವುದೇ ಭರವಸೆಯನ್ನು ಕೊಡಲು ಆಗುವುದಿಲ್ಲ. ಇದನ್ನು ನೌಕರರು ಅರ್ಥ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.

ರಾಜ್ಯದಲ್ಲಿ ಕೋವಿಡ್‍ನಿಂದಾಗಿ ಸಾರಿಗೆ ನಷ್ಟದಲ್ಲಿದ್ದರೂ ಒಂದೇ ಒಂದು ತಿಂಗಳು ವಿಳಂಬವಾಗದಂತೆ ವೇತನ ಕೊಟ್ಟಿದ್ದೇವೆ. ಪ್ರತಿದಿನ 60 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದರು. ಈಗ 30 ಲಕ್ಷಕ್ಕೆ ಇಳಿಕೆಯಾಗಿದೆ. ನಮಗೆ ಪ್ರತಿದಿನ 4 ಕೋಟಿ ನಷ್ಟವಾಗುತ್ತಿದೆ. ಇದು ನೌಕರರಿಗೆ ಅರ್ಥವಾಗುವುದಿಲ್ಲವೇ ಎಂದು ಪ್ರಶ್ನಿಸಿದರು. ಸಾರಿಗೆ ನೌಕರರಿಗೆ ಜೂನ್ ತಿಂಗಳವರೆಗೂ ವೇತನವನ್ನು ನೀಡಲು ಸರ್ಕಾರ ಆದೇಶ ಹೊರಡಿಸಿದೆ.

ಇಲಾಖೆ ನಷ್ಟದಲ್ಲಿದ್ದರೂ ನೌಕರರ ಹಿತ ಕಾಪಾಡಬೇಕೆಂಬ ಕಾರಣಕ್ಕಾಗಿ ನಾವು ಈ ಕ್ರಮ ಕೈಗೊಂಡಿದ್ದೇವೆ. ಆದರೆ ಪದೇ ಪದೇ ಪ್ರತಿಭಟನೆ ನಡೆಸುವುದು ಎಷ್ಟರ ಮಟ್ಟಿಗೆ ಸರಿ? ಈ ಬಾರಿ ನಾವು ಅವರ ಜೊತೆ ಮಾತುಕತೆ ನಡೆಸುವುದಿಲ್ಲ. ಮುಷ್ಕರ ನಡೆಸಿದರೆ ಏನು ಕ್ರಮ ತೆಗೆದುಕೊಳ್ಳಬೇಕೆಂಬುದು ನಮಗೂ ಗೊತ್ತು. ಈಗಾಗಲೇ ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದಾರೆ ಎಂದರು.

ಪ್ರಸ್ತುತ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಲೇ ಇವೆ. ಕೋವಿಡ್ ಮಾರ್ಗಸೂಚಿ ಪ್ರಕಾರ ಗುಂಪುಗೂಡುವಂತಿಲ್ಲ. ಇಂಥ ಸಂದರ್ಭದಲ್ಲಿ ನೌಕರರು ಮುಷ್ಕರ ನಡೆಸುವುದು ಸರಿಯಲ್ಲ. ಸರ್ಕಾರ ನಿಮ್ಮ ಹಿತವನ್ನು ಕಾಪಾಡಲು ಬದ್ಧವಿದೆ. ಎಲ್ಲದಕ್ಕೂ ಪ್ರತಿಭಟನೆಯೇ ಅಂತಿಮವಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ನೌಕರರು ಮುಂದಿಟ್ಟಿದ್ದ 9 ಬೇಡಿಕೆಗಳಲ್ಲಿ 8 ಬೇಡಿಕೆಗಳನ್ನು ನಾವು ಈಡೇರಿಸಿದ್ದೇವೆ. ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕೆಂಬ ಬೇಡಿಕೆ ಈಡೇರಿಸಲು ಹಾಗೂ 6ನೇ ವೇತನ ಆಯೋಗದ ಶಿಫಾರಸ್ಸನ್ನು ಅವರಿಗೆ ಅಳವಡಿಸಲು ಸಾಧ್ಯವೇ ಇಲ್ಲ. ಶೇ.8ರಷ್ಟು ವೇತನ ಹೆಚ್ಚಳ ಮಾಡಲು ನಾವು ಬದ್ಧರಾಗಿದ್ದೇವೆ ಎಂದರು.

Facebook Comments