ಯಾರ ಜೊತೆ ಬೇಕಾದರೂ ಮಾತುಕತೆಗೆ ಸಿದ್ದ: ಸಿಎಂ ಬಿಎಸ್‍ವೈ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.7-ತಕ್ಷಣವೇ ಸಾರಿಗೆ ನೌಕರರು ತಮ್ಮ ಮುಷ್ಕರವನ್ನು ಕೈಬಿಟ್ಟು ಸರ್ಕಾರದ ಜೊತೆಗೆ ಮಾತುಕತೆ ನಡೆಸಬೇಕು. ಇಲ್ಲದಿದ್ದರೆ ಎಸ್ಮಾ ಜಾರಿ ಮಾಡುವ ಬಗ್ಗೆ ಚಿಂತನೆ ನಡೆಸಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಎಚ್ಚರಿಕೆ ಕೊಟ್ಟಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮ್ಮ ಬೇಡಿಕೆಗಳು ಏನೇ ಇದ್ದರೂ ನಮ್ಮ ಜೊತೆ ಮಾತುಕತೆಗೆ ಬನ್ನಿ. ಹಾಗೊಂದು ವೇಳೆ ನಿಮಗೆ ಬರಲು ಆಗದಿದ್ದರೆ ನಾನೇ ಬರುತ್ತೇನೆ. ಯಾರ ಜೊತೆಬೇಕಾದರೂ ಮಾತುಕತೆ ನಡೆಸಲು ಸಿದ್ದ ಎಂದು ಹೇಳಿದರು.

ಮುಷ್ಕರ ನಡೆಸುವುದರಿಂದ ಯಾವ ಸಮಸ್ಯೆ ಪರಿಹಾರ ಆಗುವುದಿಲ್ಲ. ನಿಮ್ಮ ಸಮಸ್ಯೆಗಳೇನಿದ್ದರೂ ಮೊದಲು ಕರ್ತವ್ಯಕ್ಕೆ ಹಾಜರಾಗಿ. ಇಲ್ಲದಿದ್ದರೆ ಎಸ್ಮಾ ಜಾರಿ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕಾಗುತ್ತದೆ ಎಂದು ಗುಡುಗಿದರು. ನಾವು ಈಗಲೂ ಕೂಡ ಸಂಘಟನೆಗಳ ಮುಖಂಡರ ಜೊತೆ ಮಾತುಕತೆ ನಡೆಸಲು ಸಿದ್ದರಿದ್ದೇವೆ. ಇದರಲ್ಲಿ ನಮಗೇನೂ ಪ್ರತಿಷ್ಟೆ ಇಲ್ಲ. ಆದರೆ ಸಾರ್ವಜನಿಕರಿಗೆ ತೊಂದರೆ ಕೊಟ್ಟು ಪ್ರತಿಭಟನೆ ನಡೆಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ನಿಮ್ಮ 9 ಬೇಡಿಕೆಗಳಲ್ಲಿ 8 ಬೇಡಿಕೆಗಳನ್ನು ಸರ್ಕಾರ ಈಡೇರಿಸಿದೆ. ಕೆಲವು ಕಾರಣಗಳಿಂದ 9ನೇ ಬೇಡಿಕೆಯನ್ನು ಈಡೇರಿಸಲು ಆಗುವುದಿಲ್ಲ. ಅದು ಯಾವ ಕಾರಣಕ್ಕಾಗಿ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕು ಎಂದರು. ಪ್ರಸ್ತುತ ಮಕ್ಕಳ ಪರೀಕ್ಷೆಗಳು ನಡೆಯುತ್ತಿವೆ. ಅವರಿಗೆ ತೊಂದರೆ ಕೊಡುವುದು ಸರಿಯಲ್ಲ. ಅವರ ಭವಿಷ್ಯವನ್ನು ಗಮನಿಸಿ ಮುಷ್ಕರವನ್ನು ಕೈಬಿಡಿ. ಹಠಮಾರಿತನದಿಂದ ಯಾವ ಸಮಸ್ಯೆಯೂ ಇತ್ಯರ್ಥವಾಗುವುದಿಲ್ಲ. ಸರ್ಕಾರ ನಿಮ್ಮ ಹಿತವನ್ನು ಕಾಪಾಡಲು ಬದ್ದವಿದೆ ಎಂದು ಹೇಳಿದರು.

ಪರಿಸ್ಥಿತಿಯ ಲಾಭ ಮಾಡಿಕೊಳ್ಳಲು ಖಾಸಗಿಯವರು ಹೆಚ್ಚಿನ ಹಣ ವಸೂಲಿ ಮಾಡಿ ಪ್ರಯಾಣಿಕರಿಗೆ ತೊಂದರೆ ಕೊಡಬಾರದು ಎಂದು ಇದೇ ಸಂದರ್ಭದಲ್ಲಿ ಸಿಎಂ ಮನವಿ ಮಾಡಿದರು.

Facebook Comments