ಏಪ್ರಿಲ್ 7ರಿಂದ ಮತ್ತೆ ಸಾರಿಗೆ ನೌಕರರ ಮುಷ್ಕರ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.1- ಸರ್ಕಾರದ ಯಾವುದೇ ಭರವಸೆಗಳಿಗೂ ಜಗ್ಗದೆ ಸಾರಿಗೆ ನೌಕರರು ಏಪ್ರಿಲ್ 7ರಿಂದ ಮುಷ್ಕರ ನಡೆಸಲು ಮುಂದಾಗಿದ್ದು, ಇಂದಿನಿಂದ ಏ.6ರವರೆಗೆ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

ಇಂದು ಸಂಸ್ಥೆಯ ಎಲ್ಲಾ ನೌಕರರು ಕಪ್ಪು ಪಟ್ಟಿ ಧರಿಸಿಕೊಂಡು ಕರ್ತವ್ಯ ನಿರ್ವಹಿಸುವ ಮೂಲಕ ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು. 9 ಬೇಡಿಕೆಗಳ ಈಡೇರಿಕೆಗಾಗಿ ಕಳೆದ ಡಿಸೆಂಬರ್‍ನಲ್ಲಿ ನಾಲ್ಕು ದಿನಗಳ ಕಾಲ ಬಸ್‍ಗಳ ಸಂಚಾರವನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ್ದೆವು. ಅದು ಏಕಾಏಕಿ ಯಾವುದೇ ಪೂರ್ವ ಸಿದ್ದತೆ ಇಲ್ಲದೆ ಮಾಡಿದ ಪ್ರತಿಭಟನೆಯಾಗಿತ್ತು.

ಸರ್ಕಾರ ನಮ್ಮ ಬೇಡಿಕೆಗಳ ಈಡೇರಿಕೆಗೆ ಮೂರು ತಿಂಗಳ ಕಾಲಾವಕಾಶ ಕೇಳಿತ್ತು. ಸರ್ಕಾರ ನೀಡಿದ ಗಡುವು ಮುಗಿದಿದೆ. ಈಗ ನಾವು ಎಲ್ಲಾ ಪೂರ್ವ ಸಿದ್ದತೆಗಳೊಂದಿಗೆ ಪ್ರತಿಭಟನೆ ನಡೆಸುತ್ತಿದ್ದೇವೆ. ಹಂತ ಹಂತವಾಗಿ ವಿವಿಧ ರೀತಿಯಲ್ಲಿ ಸರ್ಕಾರವನ್ನು ಜಾಗೃತಿಗೊಳಿಸುವ ಕೆಲಸಕ್ಕೆ ಮುಂದಾಗಿದ್ದೇವೆ ಎಂದು ಕರ್ನಾಟಕ ರಾಜ್ಯ ಸಾರಿಗೆ ನೌಕರರ ಒಕ್ಕೂಟದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.

ನಾಳೆ ಸಾರ್ವಜನಿಕ ಪ್ರದೇಶಗಳಲ್ಲಿ ಸಾರಿಗೆ ನೌಕರರು ಕಾಫಿ, ಟೀ ಮತ್ತು ಬಜ್ಜಿ , ಬೋಂಡಗಳನ್ನು ತಯಾರಿಸಿ ಮಾರಾಟ ಮಾಡಲಿದ್ದಾರೆ. ಏ.3ರಂದು ನೌಕರರು , ಕುಟುಂಬದ ಸದಸ್ಯರು ನಗರದ ಮುಖ್ಯ ವೃತ್ತಗಳಲ್ಲಿ ಮಾನವ ಸರಪಳಿ ನಿರ್ಮಿಸಿ ಭಿತ್ತಿಪತ್ರ ಪ್ರದರ್ಶಿಸಿ ಪ್ರತಿಭಟನೆ ನಡೆಸಲಿದ್ದಾರೆ.

ಏ.4ರಂದು ಸಾರ್ವಜನಿಕರಿಗೆ ಕರಪತ್ರ ಹಂಚುವುದು, ಫೇಸ್‍ಬುಕ್ ಟ್ವಿಟರ್‍ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ಮುಖ್ಯಮಂತ್ರಿ, ಪ್ರಧಾನಮಂತ್ರಿ, ಸಾರಿಗೆ ಸಚಿವರಿಗೆ ಬೇಡಿಕೆಗಳ ಈಡೇರಿಕೆಗೆ ಮನವಿ ಸಲ್ಲಿಸಲಾಗುವುದು.

ಏ.5ರಂದು ಧರಣಿ ಸತ್ಯಾಗ್ರಹ, 6ರಂದು ನೌಕರರ ಕುಟುಂಬ ಸದಸ್ಯರೊಂದಿಗೆ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ. ಸರ್ಕಾರ ನಮ್ಮ ಬೇಡಿಕೆಗಳಿಗೆ ಮಣಿಯದಿದ್ದರೆ 7ರಿಂದ ಬಸ್ ಸಂಚಾರ ಸ್ಥಗಿತಗೊಳಿಸಿ ಮುಷ್ಕರ ನಡೆಸುತ್ತೇವೆ ಎಂದು ಹೇಳಿದರು.

ಸರ್ಕಾರ ನಮ್ಮ ಎಂಟು ಬೇಡಿಕೆಗಳನ್ನು ಈಡೇರಿಸುವುದಾಗಿ ಹೇಳಿದೆ. 6ನೇ ವೇತನ ಆಯೋಗದ ಶಿಫಾರಸ್ಸನ್ನು ಜಾರಿಗೊಳಿಸುವ ಕುರಿತು ಯಾವುದೇ ಕ್ರಮ ವಹಿಸಿಲ್ಲ. ಆರೋಗ್ಯ ವಿಮೆ ಬೇಡಿಕೆಯಲ್ಲಿ ಅಲ್ಪಸ್ವಲ್ಪ ಬದಲಾವಣೆ ಮಾಡಲಾಗಿದೆ. ಅಂತರ್ ನಿಗಮಗಳ ವರ್ಗಾವಣೆ ಪದ್ದತಿಯನ್ನು ವೈಜ್ಞಾನಿಕವಾಗಿ ಮಾಡಬೇಕೆಂದು ಕೇಳಲಾಗಿತ್ತು. ಆದರೆ ಅದಕ್ಕೆ ಹಲವು ಷರತ್ತುಗಳನ್ನು ವಿಸಲಾಗಿದೆ.

ನೌಕರರ ಮೇಲೆ ನಡೆಯುತ್ತಿರುವ ಮೇಲಧಿಕಾರಿಗಳ ಕಿರುಕುಳ ತಪ್ಪಿಲ್ಲ. ಮಹಿಳೆಯರಿಗೆ ಪಾಳಿ ಮೇಲೆ ಕೆಲಸ ಹಂಚಿಕೆ ಮಾಡಲಾಗುತ್ತಿದೆ. ಎನ್‍ಐಎಸ್‍ಸಿ ಪದ್ಧತಿಯಲ್ಲಿ ನೌಕರರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಹಳೆಯ ಸುತ್ತೋಲೆಯನ್ನೇ ಬದಲಾವಣೆ ಮಾಡಲಾಗಿದೆ. ಇದನ್ನು ಸಂಪೂರ್ಣ ರದ್ದು ಮಾಡಬೇಕು.

ಸರ್ಕಾರ ಈಡೇರಿಸಿದೆ ಎಂದು ಹೇಳಿರುವ ಭರವಸೆಗಳು ಸಂಪೂರ್ಣ ನೂನ್ಯತೆಯಿಂದ ಕೂಡಿವೆ. ಅವುಗಳನ್ನು ಸರಿಪಡಿಸಿ ನಮ್ಮ ಬೇಡಿಕೆ ಈಡೇರಿಸಬೇಕೆಂಬುದು ನಮ್ಮ ಆಗ್ರಹವಾಗಿದೆ. ಅದಕ್ಕೆ ನಾವು ಮುಷ್ಕರಕ್ಕೆ ಮುಂದಾಗಿದ್ದೇವೆ ಎಂದು ತಿಳಿಸಿದರು.

Facebook Comments

Sri Raghav

Admin