ಮತ್ತೊಮ್ಮೆ ಮುಷ್ಕರಕ್ಕೆ ಸಾರಿಗೆ ನೌಕರರ ಕೂಟ ಸಜ್ಜು, ರೂಪುರೇಷೆ ತಯಾರಿಗೆ ದಿನಾಂಕ ನಿಗದಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.24- ಮತ್ತೊಮ್ಮೆ ಮುಷ್ಕರಕ್ಕೆ ಸಾರಿಗೆ ನೌಕರರ ಕೂಟ ಸಜ್ಜಾಗಿದೆ. ರಾಜ್ಯ ಸಂಪೂರ್ಣ ಅನ್‍ಲಾಕ್ ಆದ ಬೆನ್ನಲ್ಲೇ ಮುಷ್ಕರ ನಡೆಸಲು ಸಾರಿಗೆ ನೌಕರರು ತೀರ್ಮಾನಿಸಿದ್ದಾರೆ. ಕಳೆದ ಮುಷ್ಕರಕ್ಕಿಂತ ಈ ಬಾರಿಯ ಪ್ರತಿಭಟನೆ ತೀವ್ರವಾಗಲಿದೆ. ಈ ಬಾರಿ ಸಾರಿಗೆ ನೌಕರರ ಕುಟುಂಬಸ್ಥರು ಕೂಡ ಪ್ರತಿಭಟನೆಗೆ ಇಳಿಯಲಿದ್ದಾರೆ. ಸಾರಿಗೆ ನೌಕರರು ಹೆಂಡತಿ ಮಕ್ಕಳೊಂದಿಗೆ ಬೀದಿಗಿಳಿದು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ರಾಜ್ಯಾದ್ಯಂತ ನಾಲ್ಕು ನಿಗಮಗಳಿಂದ 1.30 ಲಕ್ಷ ಸಾರಿಗೆ ನೌಕರರಿದ್ದಾರೆ. ನೌಕರರ ಕುಟುಂಬಸ್ಥರು ಒಟ್ಟಾಗಿ ಸೇರಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಈ ಬಗ್ಗೆ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿಕೆ ನೀಡಿದ್ದು, ಕಳೆದ ಡಿಸೆಂಬರ್‍ನಲ್ಲಿ 15 ದಿನ ಬಸ್ ಬಂದ್ ಮಾಡಿ ಮುಷ್ಕರ ಮಾಡಿದ್ದೆವು. ಆ ವೇಳೆ ಸರ್ಕಾರ ಲಿಖಿತ ರೂಪದಲ್ಲಿ ಕೊಟ್ಟಿದ್ದ ಮಾತು ಮುರಿದಿದೆ.

ಹಾಗಾಗಿ ಕೊಟ್ಟ ಮಾತಿನಂತೆ, ಆರನೇ ವೇತನ ಆಯೋಗ ಜಾರಿ ಮಾಡಲೇಬೇಕು. ಮುಷ್ಕರದಲ್ಲಿ ಭಾಗಿಯಾಗಿದ್ದವರನ್ನು ವರ್ಗಾವಣೆ, ಅಮಾನತು, ಸಸ್ಪೆಂಡ್ ಮಾಡಲಾಗಿದೆ. ಅವರನ್ನು ಇನ್ನೂ ಕೆಲಸಕ್ಕೆ ತೆಗೆದುಕೊಂಡಿಲ್ಲ. ಅವರಿಗೂ ಕೂಡಲೇ ಕೆಲಸಕ್ಕೆ ಹಾಜರಾಗುವಂತೆ ನೀಡಬೇಕು.ಕಳೆದ ಎರಡು ತಿಂಗಳಿನಿಂದ ನೌಕರರಿಗೆ 800 -1000 ರೂ. ಸಂಬಳ ನೀಡಿದ್ದಾರೆ. ಕೂಡಲೇ ಬಾಕಿ ಸಂಬಳ ಬಿಡುಗಡೆ ಮಾಡಬೇಕು. ಈ ಸಂಬಳದಲ್ಲಿ ನೌಕರರು ಜೀವನ ನಡೆಸೋದು ಹೇಗೆ? ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.

ಪ್ರತಿಭಟನೆ ಸಂಬಂಧ ಕಾರ್ಯಕಾರಣಿ ಸಭೆ ನಡೆಸಲಾಗುವುದು. ಜುಲೈ 1 ರಂದು ನಡೆಯುವ ಸಭೆಯಲ್ಲಿ ಮುಷ್ಕರದ ರೂಪುರೇಷೆ ತಯಾರಿಸಿ ದಿನಾಂಕ ನಿಗದಿ ಮಾಡುತ್ತೇವೆ ಎಂದು ಎಚ್ಚರಿಕೆಯ ಸಂದೇಶ ಸಾರಿದ್ದಾರೆ.

Facebook Comments