ಹಲವರಿಗೆ ಕಂಟಕವಾಗಿರುವ ಪ್ರಯಾಣ ಭತ್ಯೆ ಹಗರಣ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಜ.14- ಪ್ರಯಾಣ ಭತ್ಯೆ ಹಗರಣದಲ್ಲಿ ದೂರು ಕೊಟ್ಟವರೇ ಆರೋಪಿ ಸ್ಥಾನದಲ್ಲಿರುವ ಅನುಮಾನಗಳು ಕೇಳಿ ಬಂದಿದ್ದು, ಜಿಲ್ಲಾ ಪೊಲೀಸ್ ಇಲಾಖೆಯ ವರ್ಚಸ್ಸಿಗೆ ಧಕ್ಕೆಯುಂಟು ಮಾಡಿದೆ. ಹೊರ ರಾಜ್ಯ ಮತ್ತು ಜಿಲ್ಲೆಗಳಲ್ಲಿ ಭದ್ರತಾ ಕಾರ್ಯಕ್ಕೆ ನಿಯೋಜನೆಗೊಂಡ ಪೊಲೀಸ್ ಸಿಬ್ಬಂದಿಗಳು ಹಾಗೂ ಅಧಿಕಾರಿಗಳ ಪ್ರಯಾಣ ಹಾಗೂ ಇತರೆ ಭತ್ಯೆಗಳನ್ನು ದುರುಪಯೋಗ ಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕಿ ಯಶಸ್ವಿನಿ ಅವರನ್ನು ಕ್ರೈಂ ಬ್ರಾಂಚ್ ಬಂಧಿಸಿ ವಿಚಾರಣೆ ನಡೆಸುತ್ತಿದೆ.

ಈ ವೇಳೆ ಹಣ ತಿಂದವಳು ನಾನೊಬ್ಬಳೆ ಅಲ್ಲ. ನಾನು ಪ್ರಥಮ ದರ್ಜೆ ಸಹಾಯಕಿ ಮಾತ್ರ. ಬಿಲ್ ಮಾಡಿ ಅದನ್ನು ನನಗಿಂತ ಮೇಲಿನ ಅಧಿಕಾರಿಗಳಾದ ಸೆಕ್ಷನ್ ಸೂಪರಿಂಟೆಂಡೆಂಟ್ ಆರಾಧ್ಯ ಅವರಿಗೆ ಕಳುಹಿಸುತ್ತೇನೆ, ಅವರ ಸಹಿ ಆದ ಬಳಿಕ ಸಹಾಯಕ ಆಡಳಿತ ಅಧಿಕಾರಿ ಕೃಷ್ಣಪ್ಪ ಅವರ ಬಳಿ ಕಡತ ಹೋಗುತ್ತದೆ. ಮೇಲಿನ ಅಧಿಕಾರಿಗಳ ನಿರ್ದೇಶನದ ಮೇರೆಗೆ ನಾನು ನಡೆದುಕೊಂಡಿದ್ದೇನೆ. ಆದರೆ ಇದರಲ್ಲಿ ಉದ್ದೇಶ ಪೂರ್ವಕವಾಗಿ ನನ್ನನ್ನು ಬಲಿಪಶು ಮಾಡಲಾಗುತ್ತಿದೆ ಎಂದು ತನಿಖಾಧಿಕಾರಿಗಳ ಮುಂದೆ ಅವಲತ್ತುಕೊಂಡಿದ್ದಾರೆ ಎನ್ನಲಾಗಿದೆ.

ಹಗರಣ ನಡೆದಿದೆ ಎಂದು ಕೃಷ್ಣಪ್ಪ ಅವರೇ ಹೊಸಬಡಾವಣೆ ಪೊಲೀಸ್‍ಠಾಣೆಗೆ ದೂರು ನೀಡಿದ್ದರು. ಒಂದು ವರ್ಷದ ಬಳಿಕ ಸುರುವಾಗಿರುವ ತನಿಖೆಯಲ್ಲಿ ಯಶಸ್ವಿ ಅವರನ್ನು ಬಂಧಿಸಲಾಗಿದೆ. ಮೇಲಿನ ಅಧಿಕಾರಿಗಳಾದ ಆರಾಧ್ಯ ಮತ್ತು ಕೃಷ್ಣಪ್ಪ ಅವರು ಭಾಧ್ಯಸ್ಥರೆಂದು ಯಶಸ್ವಿನಿ ಹೇಳಿಕೆ ನೀಡಿರುವುದರಿಂದ ಈಗ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಕೋನವಂಶಿಕೃಷ್ಣ ಅವರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಯಶಸ್ವಿನಿ ಅವರ ಬಂಧನಕ್ಕೆ ಸೀಮಿತವಾಗಿ ಪ್ರಕರಣದ ತನಿಖೆ ಅಂತ್ಯಗೊಳ್ಳುತ್ತದೋ ಅಥವಾ ಮುಂದುವರೆಯುತ್ತದೆಯೋ ಎಂಬ ಕುತೂಹಲ ಹೆಚ್ಚಾಗಿದೆ.

ಈ ನಡುವೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಪೊಲೀಸ್ ಇಲಾಖೆಯ ಎಡಿಜಿಪಿ ಆರ್.ಹಿತೇಂದ್ರ ಅವರು, ಹಗರಣದ ಬಗ್ಗೆ ತೀವ್ರ ಅಸಮದಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಜಿಲ್ಲಾಪೊಲೀಸ್ ಕಚೇರಿಯಲ್ಲಿ 20 ವರ್ಷಗಳಿಂದ ನೆಲೆಯೂರಿರುವ ಅಧಿಕಾರಿಗಳನ್ನು ಯಾಕೆ ಬದಲಾವಣೆ ಮಾಡಿಲ್ಲ ಎಂಬ ಅಸಮಾದಾನವನ್ನು ಹಿತೇಂದ್ರ ಹೊರ ಹಾಕಿದ್ದಾರೆ ಎಂದು ಹೇಳಲಾಗಿದೆ.

ಕೆಳಹಂತದ ಅಧಿಕಾರಿಗಳು ತಯಾರಿಸಿದ ಬಿಲ್‍ಗಳಿಗೆ ಸಹಿ ಹಾಕಿದ ಕಾರಣಕ್ಕೆ ಎಸ್‍ಪಿ ಅವರು ಮುಜುಗರಕ್ಕೆ ಒಳಗಾಗಿದ್ದಾರೆ. ನ್ಯಾಯಾಲಯದ ನಿರ್ದೇಶನದ ಮೇರೆಗೆ ನಡೆಯುತ್ತಿರುವ ತನಿಖೆ ಹಲವರಿಗೆ ಪ್ರಾಣ ಕಂಠಕವಾಗಿದೆ.  ಪ್ರಯಾಣ ಭತ್ಯೆಯ ಬಿಲ್ ಮಾಡಿದ ಯಶಸ್ವಿನಿ ಮತ್ತವರ ತಂಡ ಉದ್ದೇಶ ಪೂರ್ವಕವಾಗಿ ಕೆಲವರ ಖಾತೆಗಳಿಗೆ ನಿಗದಿತ ಭತ್ಯೆಗಿಂತ ಹೆಚ್ಚಿನ ಹಣವನ್ನು ಹಾಕಿ ಬಿಡುವುದು.

ಬಳಿಕ ಆಕಸ್ಮಿಕವಾಗಿ ನಿಮ್ಮ ಖಾತೆಗೆ ಹೆಚ್ಚಿನ ಹಣ ಬಂದಿದೆ ಅದನ್ನು ಡ್ರಾ ಮಾಡಿ ವಾಪಾಸ್ ತಂದುಕೊಡಿ ಎಂದು ಹೇಳಿ ಹಣ ತರಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ. ಕೆಲವರು ಹಣ ವಾಪಾಸ್ ತಂದುಕೊಡುತ್ತಿದ್ದರು. ಪದೇ ಪದೇ ಈ ರೀತಿ ತಪ್ಪುಗಳು ಹೇಗಾಗುತ್ತವೆ ಎಂಬ ಅನುಮಾನಗೊಂಡ ಕೆಲವು ವಿರೋಧ ವ್ಯಕ್ತ ಪಡಿಸಿದಾಗ ಗಲಾಟೆಯಾಗಿ ಹಗರಣ ಬೆಳಕಿಗೆ ಬಂದಿದೆ. ಈಗ ತನಿಖೆ ಆರಂಭವಾಗಿರು ವುದರಿಂದ ಬಹಳಷ್ಟು ಮಂದಿ ಕೈ ಕೈ ಹಿಸುಕಿಕೊಳ್ಳುತ್ತಿದ್ದು, ಯಾವಾಗ ಕುತ್ತಿಗೆಗೆ ಬರಲಿದೆಯೋ ಎಂಬ ಆತಂಕದಲ್ಲಿ ದಿನ ದೂಡುತ್ತಿದ್ದಾರೆ.

Facebook Comments