ಇನ್ಮುಂದೆ ಕೊರೋನಾ ಪೀಡಿತರಿಗೆ ಮನೆಯಲ್ಲೇ ಚಿಕಿತ್ಸೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.10- ನಗರದಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳುತ್ತಿರುವುದರಿಂದ ಉಂಟಾಗುವ ಐಸೊಲೇಷನ್ ವಾರ್ಡ್‍ಗಳ ಅಭಾವದಿಂದ ತಪ್ಪಿಸಿಕೊಳ್ಳಲು ಸೋಂಕಿತರ ಮನೆಯಲ್ಲೇ ಚಿಕಿತ್ಸೆ ನೀಡುವ ಹೊಸ ಪ್ಲಾನ್‍ಅನ್ನು ಬಿಬಿಎಂಪಿ ಸಿದ್ಧಪಡಿಸಿದೆ. ಲಾಕ್‍ಡೌನ್ ತೆರವಿನ ನಂತರ ನಗರದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇರುವುದು ತಲೆನೋವು ತರಿಸಿದೆ.

ಸೋಂಕು ಕಾಣಿಸಿಕೊಂಡವರಿಗೆ ಐಸೊಲೇಷನ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರ ಸಂಖ್ಯೆ ಇದೇ ರೀತಿ ಏರಿಕೆಯಾಗುತ್ತಿದ್ದರೆ ಐಸೊಲೇಷನ್ ವಾರ್ಡ್‍ಗಳ ಅಭಾವ ಸೃಷ್ಟಿಯಾಗಲಿದೆ. ಇತ್ತೀಚೆಗೆ ಯಾವುದೇ ರೋಗ ಲಕ್ಷಣ ಕಾಣಿಸಿಕೊಳ್ಳದ ವ್ಯಕ್ತಿಗಳಲ್ಲೂ ಕೊರೊನಾ ಸೋಂಕು ಪತ್ತೆಯಾಗುತ್ತಿರುವುದರಿಂದ ಶಂಕಿತರನ್ನು ಅವರ ಮನೆಯಲ್ಲೇ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡುವ ಪ್ಲಾನ್‍ ಅನ್ನು ಬಿಬಿಎಂಪಿ ತಯಾರಿಸಿದೆ.

ಯಾವುದೇ ವ್ಯಕ್ತಿಗೆ ಸೋಂಕಿನ ಲಕ್ಷಣಗಳು ಕಂಡುಬಂದರೆ ಅವರ ಮನೆಯಲ್ಲೇ ಕುಟುಂಬಸ್ಥರಿಂದ ಅಂತರ ಕಾಯ್ದುಕೊಂಡು ಪ್ರತ್ಯೇಕ ಕೋಣೆಯಲ್ಲಿರಿಸಿ ಅಲ್ಲೇ ಔಷಧೋಪಚಾರ ನಡೆಸುವ ಮೂಲಕ ಐಸೊಲೇಷನ್ ವಾರ್ಡ್‍ಗಳ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗಿದೆ.

ವೃದ್ಧರು, ಮಕ್ಕಳು ಮತ್ತು ಗರ್ಭಿಣಿಯರು ಹಾಗೂ ಇತರ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಸೋಂಕು ಕಾಣಿಸಿಕೊಂಡರೆ ಮಾತ್ರ ಅಂತಹವರನ್ನು ನಿಗದಿತ ಆಸ್ಪತ್ರೆಯ ಐಸೊಲೇಷನ್ ವಾರ್ಡ್‍ಗೆ ಶಿಫ್ಟ್ ಮಾಡಿ ಚಿಕಿತ್ಸೆ ಕೊಡಿಸಲಾಗುವುದು.

ಮಧ್ಯ ವಯಸ್ಕರಿಗೆ ಸೋಂಕಿನ ಲಕ್ಷಣ ಕಾಣಿಸಿಕೊಂಡರೆ ಅವರ ಇಡೀ ಮನೆಯನ್ನು ಕಂಟೈನ್ಮೆಂಟ್ ಮಾಡಿ ಮನೆ ಬಳಿ ಪೊಲೀಸ್ ಇಲ್ಲವೆ ಬಿಬಿಎಂಪಿ ಸಿಬ್ಬಂದಿಯನ್ನು ನೇಮಕ ಮಾಡಲಾಗುವುದು.  ಸೋಂಕಿತನ ಕುಟುಂಬದವರು ಮನೆಯಿಂದ ಹೊರಬರದಂತೆ ಎಚ್ಚರಿಕೆ ವಹಿಸಲಾಗುವುದು.

ನಿತ್ಯ ವೈದ್ಯರ ತಂಡ ಸೋಂಕಿತ ಹಾಗೂ ಆತನ ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ನಿಗಾ ವಹಿಸಿ ಸೋಂಕು ಹರಡದಂತೆ ಎಚ್ಚರಿಕೆ ವಹಿಸುವರು. ಒಂದು ವೇಳೆ ಮನೆ ಚಿಕ್ಕದಾಗಿದ್ದರೆ ಇಲ್ಲವೆ ಕೊಳಚೆ ಪ್ರದೇಶದಲ್ಲಿ ವಾಸವಾಗಿದ್ದು, ಅಂತಹ ಸ್ಥಳದಲ್ಲಿ ಐಸೊಲೇಷನ್ ವ್ಯವಸ್ಥೆ ಕಲ್ಪಿಸಲು ಅಸಾಧ್ಯವಾದರೆ ಮಾತ್ರ ಅಂತಹವರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲಾಗುವುದು.

Facebook Comments