ಮಾರಕಾಸ್ತ್ರದಿಂದ ಕೊಚ್ಚಿ ದಂಪತಿ ಹಾಗೂ ಮಗಳ ಕೊಲೆ

ಈ ಸುದ್ದಿಯನ್ನು ಶೇರ್ ಮಾಡಿ

ಔರಂಗಾಬಾದ್, ನ.28 -ಮಾರಕಾಸ್ತ್ರದಿಂದ ದಂಪತಿ ಹಾಗೂ ಮಗಳನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಔರಂಗಾಬಾದ್‍ನಲ್ಲಿ ನಡೆದಿದೆ. ರಾಜು ನಿವಾರೆ (35) , ಪತ್ನಿ ಅಶ್ವಿನಿ ನಿವಾರೆ (30) ಮತ್ತು ಸಯಾಲಿ (10) ಕೊಲೆಯಾದ ದುರ್ದೈವಿಗಳು. ಘಟನೆಯಲ್ಲಿ ದಂಪತಿಯ 6 ವರ್ಷದ ಪುತ್ರ ಸೋಹಂ ತೀವ್ರವಾಗಿ ಗಾಯಗೊಂಡಿದ್ದು , ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.

ಪೈತ್ವಾನ್ ಸಿಟಿಯಿಂದ ನಾಲ್ಕು ಕಿ.ಮೀ ದೂರದಲ್ಲಿರುವ ಓಲ್ಡ್ ಕಾಸನ್ ಗ್ರಾಮದಲ್ಲಿ ಈ ಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದುಷ್ಕರ್ಮಿಗಳು ಇಂದು ಮುಂಜಾನೆ ಮನೆಗೆ ನುಗ್ಗಿ ಮನೆಯಲ್ಲಿದ್ದವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಪರಾರಿಯಾಗಿದ್ದಾರೆ.

ಮನೆಯಲ್ಲಿ ಯಾವುದೇ ವಸ್ತು ಕಳ್ಳತನವಾಗದಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು , ಕೌಟುಂಬಿಕ ವೈಷಮ್ಯದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರಬಹುದು ಎಂದು ಶಂಕಿಸಿರುವ ಪೈತ್ವಾನ್ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Facebook Comments