ಕಾರಿಗೆ ಮರಳು ತುಂಬಿದ ಟ್ರಕ್ ಡಿಕ್ಕಿ : 8 ಮಂದಿ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

ಲಕ್ನೋ, ಡಿ.2-ಮದುವೆ ಸಮಾರಂಭ ಮುಗಿಸಿ ಹಿಂತಿರುಗುತ್ತಿದ್ದ ಕಾರಿಗೆ ಮರಳು ತುಂಬಿದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ 8 ಮಂದಿ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿ ನಡೆದಿದೆ. ದೇವಿಗಂಜ್‍ನಲ್ಲಿ ತಮ್ಮ ಸಂಬಂಧಿಕರ ಮದುವೆ ಸಮಾರಂಭ ಮುಗಿಸಿ ಶಹಜಾದ್‍ಪುರಕ್ಕೆ ಹಿಂತಿರುಗುತ್ತಿದ್ದಾಗ ಕಾಡಾಧಾಮ್ ಪ್ರದೇಶದಲ್ಲಿ ಟ್ರಕ್ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.

ಟ್ರಕ್ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನಲ್ಲಿದ್ದವರ ದೇಹಗಳು ಅಪ್ಪಚ್ಚಿಯಾಗಿದ್ದು, ಗ್ಯಾಸ್ ಕಟರ್ ಬಳಸಿ ದೇಹಗಳನ್ನು ಹೊರತೆಗೆಯಬೇಕಾಯಿತು ಎಂದು ಎಸ್ಪಿ ಅಭಿನಂದನ್ ತಿಳಿಸಿದ್ದಾರೆ. ಕಾರಿನಲ್ಲಿದ ಇಬ್ಬರು ಯುವತಿಯರು ಕಿಟಕಿ ಗಾಜು ಹೊಡೆದು ಹೊರಬರುವಲ್ಲ ಯಶಸ್ವಿಯಾಗಿದ್ದು ಅವರು ಪ್ರಾಣಾಪಯದಿಂದ ಪಾರಾಗಿದ್ದಾರೆ.

ಅಪಘಾತಕ್ಕೆ ಕಾರಣನಾದ ಟ್ರಕ್ ಚಾಲಕ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸಾಂತ್ವನ ಹೇಳಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸತ್ತವರ ಕುಟುಂಬಕ್ಕೆ ಆಗತ್ಯ ನೆರವು ನೀಡುವಂತೆ ಸ್ಥಳೀಯ ಆಡಳಿತಕ್ಕೆ ಸೂಚನೆ ನೀಡಿದ್ದಾರೆ.

Facebook Comments