ವಲಸೆ ಬರುವವರಿಗೆ ಅಮೆರಿಕ ನಿರ್ಬಂಧ, ಲಕ್ಷಾಂತರ ಭಾರತೀಯರಿಗೆ ಸಂಕಷ್ಟ..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಏ.21- ಕಿಲ್ಲರ್ ಕೊರೊನಾ ದಾಳಿಯಿಂದಾಗಿ ಅಪಾರ ಸಾವು-ನೋವು ಮತ್ತು ಸೋಂಕು ಪ್ರಕರಣಗಳ ವ್ಯಾಪಕ ಹೆಚ್ಚಳದಿಂದಾಗಿ ಅಮೆರಿಕಾಗೆ ವಲಸೆ ಬರುವ ಹೊರ ದೇಶದವರಿಗೆ ತಾತ್ಕಾಲಿಕ ನಿರ್ಬಂಧ ವಿಧಿಸುವ ಆದೇಶಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧರಿಸಿದ್ದಾರೆ.

ಇದರಿಂದಾಗಿ ಉದ್ಯೋಗ, ವ್ಯಾಸಂಗ ಮತ್ತಿತರ ಉದ್ದೇಶಗಳಿಗಾಗಿ ಅಮೆರಿಕಕ್ಕೆ ತೆರಳಬೇಕಿದ್ದ ಲಕ್ಷಾಂತರ ಭಾರತೀಯರ ಭವಿಷ್ಯ ಅತಂತ್ರವಾಗಿದೆ. ಅಲ್ಲದೆ, ಅಮೆರಿಕದಲ್ಲಿರುವ ಅಸಂಖ್ಯಾತ ಭಾರತೀಯರೂ ಕೂಡ ಇದರಿಂದ ಭಾರೀ ಸಂಕಷ್ಟಕ್ಕೆ ಗುರಿಯಾಗಲಿದ್ದಾರೆ.

ಕೊರೊನಾ ಹಾವಳಿಯಿಂದಾಗಿ ಲಕ್ಷಾಂತರ ಅಮೆರಿಕನ್ನರು ಉದ್ಯೋಗ ಕಳೆದುಕೊಂಡಿದ್ದು ತೀವ್ರ ಬಿಕ್ಕಟ್ಟಿಗೆ ಸಿಲುಕಿದ್ದಾರೆ. ಅವರ ಹಿತಾಸಕ್ತಿ ರಕ್ಷಣೆಗಾಗಿ ಅನ್ಯ ದೇಶಗಳ ವಲಸಿಗರಿಗೆ ನಿರ್ಬಂಧ ಹೇರಲು ಮುಂದಾಗಿದ್ದಾರೆ. ಜೊತೆಗೆ ಉದ್ಯೋಗದಲ್ಲಿ ಅಮೆರಿಕನ್ನರಿಗೆ ಅದ್ಯತೆ ನೀಡಲು ಟ್ರಂಪ್ ಆಡಳಿತ ನಿರ್ಧರಿಸಿರುವುದರಿಂದ ಅಲ್ಲಿರುವ ಭಾರತೀಯರ ಉದ್ಯೋಗಿಗಳ ನೌಕರರಿಗೂ ದೊಡ್ಡಮಟ್ಟದಲ್ಲಿ ಸಂಚಕಾರ ಬಂದೊದಗಿಲಿದೆ.

ಅಮೆರಿಕದ ಬಹುತೇಕ ಎಲ್ಲ 50 ರಾಜ್ಯಗಳಲ್ಲಿ ಭಾರತೀಯರು ಮತ್ತು ಭಾರತೀಯ ಮೂಲದ ಅಮೆರಿಕನ್ನರು ಉದ್ಯೋಗದಲ್ಲಿದ್ದಾರೆ. ಸರ್ಕಾರೇತರ ಮತ್ತು ಇತರ ಖಾಸಗಿ ಸಂಸ್ಥೆಗಳಲ್ಲಿ ಸ್ಥಳೀಯ ಅಮೆರಿಕನ್ನರಿಗೆ ಉದ್ಯೋಗ ನೀಡಬೇಕೆಂಬ ನಿಯಮ ಸದ್ಯದಲ್ಲೇ ಜÁರಿಗೆ ಬರಲಿದ್ದು, ಭಾರತೀಯರು ಉದ್ಯೋಗ ಕಳೆದುಕೊಳ್ಳಲಿದ್ದು, ಅವರ ಭವಿಷ್ಯ ಡೋಲಾಯಮಾನವಾಗಲಿದೆ.

ಜತೆಗೆ ವಿದ್ಯಾಭ್ಯಾಸ, ಉದ್ಯೋಗ, ಸ್ವಯಂ ಉದ್ಯೋಗ, ವಾಣಿಜ್ಯೋದ್ಯಮ ಮತ್ತಿತರ ಉದ್ದೇಶಗಳಿಗಾಗಿ ಸದ್ಯದಲ್ಲೇ ಅಮೆರಿಕಾಗೆ ತೆರಳು ಸಿದ್ಧತೆ ನಡೆಸುತ್ತಿದ್ದ ಅನೇಕ ಭಾರತೀಯರಿಗೆ ಟ್ರಂಪ್ ಅಡಳಿತದ ವಲಸೆ ನಿರ್ಬಂಧ ಕಾನೂನು ಭಾರೀ ಆತಂಕ ಸೃಷ್ಟಿಸಿದೆ.

ಈ ಕುರಿತ ಕಾರ್ಯಕಾರಿ ಆದೇಶಕ್ಕೆ ಡೊನಾಲ್ಡ್ ಟ್ರಂಪ್ ಸಹಿ ಹಾಕಲಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅಮೆರಿಕ ಅಧ್ಯಕ್ಷರು, ಅಗೋಚರ ವೈರಿಯಿಂದ ದಾಳಿ ಹಿನ್ನಲೆಯಲ್ಲಿ, ಅಮೆರಿಕದ ನಮ್ಮ ಮಹಾಜನತೆ ಉದ್ಯೋಗಗಳನ್ನು ರಕ್ಷಿಸಬೇಕಾದ ಅಗತ್ಯವಿರುವುದರಿಂದ ಅಮೆರಿಕಕ್ಕೆ ಹೊರಗಿನಿಂದ ವಲಸೆ ಬರುವುದನ್ನು ತಾತ್ಕಾಲಿಕವಾಗಿ ರದ್ದುಗೊಳಿಸುವ ಎಕ್ಸಿಕ್ಯೂಟಿವ್ ಆರ್ಡರ್‍ಗೆ ನಾನು ಸಹಿ ಮಾಡಲಿದ್ದೇನೆ ಎಂದು ತಿಳಿಸಿದ್ದಾರೆ.
ಈ ಆದೇಶದಲ್ಲಿರುವ ನಿರ್ಬಂಧದ ಇತರ ಅಂಶಗಳು ಮತ್ತು ಇದು ಯಾವಾಗ ಜಾರಿಗೆ ಬರುತ್ತದೆ ಎಂಬ ಬಗ್ಗೆ ಸದ್ಯಕ್ಕೆ ಮಾಹಿತಿ ಲಭಿಸಿಲ್ಲ.

Facebook Comments

Sri Raghav

Admin