ಕಲ್ಲು ತೂರಿದರೆ ಗುಂಡೇಟು ಗ್ಯಾರಂಟಿ : ಕಾರವಾನ್ಗಳಿಗೆ ಟ್ರಂಪ್ ವಾರ್ನಿಂಗ್
ವಾಷಿಂಗ್ಟನ್, ನ.2- ಮೆಕ್ಸಿಕೋ ಸೇರಿದಂತೆ ಲ್ಯಾಟಿನ್ ಅಮರಿಕ ದೇಶಗಳು ಹಾಗೂ ಅಮೆರಿಕ ನಡುವೆ ವಲಸಿಗರ ವಿವಾದ ಭುಗಿಲೆದ್ದಿದೆ. ಮೆಕ್ಸಿಕೋ ಗಡಿ ಭಾಗದಲ್ಲಿ ನಾಲ್ಕು ದೇಶಗಳ ಕಾರವಾನ್ಗಳು(ಅಲೆಮಾರಿಗಳು) ಯೋಧರತ್ತ ಕಲ್ಲುಗಳನ್ನು ತೂರಿದರೆ ಸೇನೆ ಅನಿವಾರ್ಯವಾಗಿ ಗುಂಡು ಹಾರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಪ್ರಸ್ತುತ ಎಲ್ ಸಲ್ವಡೋರ್, ಹುಂಡರಸ್ ಮತ್ತು ಗ್ವಾಟೆಮಾಲ ದೇಶಗಳ ಸುಮಾರು 7,000 ಮಂದಿ ಮೆಕ್ಸಿಕೋ ಮೂಲಕ ಅಮರಿಕದತ್ತ ತೆರಳುತ್ತಿದ್ದಾರೆ. ದೇಶದೊಳಗೆ ವಲಸಿಗರು ಮತ್ತು ಅಲೆಮಾರಿಗಳು ಪ್ರವೇಶಿಸುವುದನ್ನು ತಡೆಗಟ್ಟಲು ಮೆಕ್ಸಿಕೋದ ವಾಯುವ್ಯ ಗಡಿಯಲ್ಲಿ ಅಮೆರಿಕ ಅಧ್ಯಕ್ಷರು 5,000 ಸೇನಾ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ.
ಇದೇ ವೇಳೆ ಕೆಲವು ಉದ್ರಿಕ್ತ ವಲಸಿಗರು ಯೋಧರತ್ತ ಕಲ್ಲುಗಳ ತೂರಾಟದ ಸುರಿಮಳೆಗರೆದಿರುವುದರಿಂದ ಆ ಭಾಗದಲ್ಲಿ ದ್ವೇಷಮಯ ವಾತಾವರಣ ಸೃಷ್ಟಿಯಾಗಿದೆ. ಯೋಧರತ್ತ ಕಲ್ಲುಗಳನ್ನು ತೂರಿದರೆ ಅನ್ಯಮಾರ್ಗವಿಲ್ಲದೇ ಮಿಲಿಟರಿ ಸಿಬ್ಬಂದಿ ಗುಂಡು ಹಾರಿಸಬೇಕಾಗುತ್ತದೆ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಅಕ್ರಮ ವಲಸಿಗರನ್ನು ಬಂಧಿಸಲಾಗುತ್ತದೆ ಹಾಗೂ ಅವರನ್ನು ಬಿಡುಗಡೆ ಮಾಡುವುದಲ್ಲ ಎಂದೂ ಸಹ ಅಮೆರಿಕ ಅಧ್ಯಕ್ಷರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.