ಕೊರೊನಾ ಜನಕ ಚೀನಾಗೆ ಮತ್ತೊಂದು ಶಾಕ್ ಕೊಡಲು ಟ್ರಂಪ್ ತಯಾರಿ..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಮೇ 1- ಕಿಲ್ಲರ್ ಕೊರೊನಾ ವೈರಸ್‍ನಿಂದ ಅಪಾರ ಸಾವು-ನೋವು ಮತ್ತು ಊಹೆಗೂ ನಿಲುಕದ ಆರ್ಥಿಕ ಸಂಕಷ್ಟದಿಂದ ನಲುಗುತ್ತಿರುವ ಅಮೆರಿಕ, ಚೀನಾ ವಿರುದ್ಧ ಪ್ರತೀಕಾರಕ್ಕೆ ಸಜ್ಜಾಗುತ್ತಿದೆ. ಈ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಸ್ಪಷ್ಟ ಮುನ್ಸೂಚನೆ ನೀಡಿದ್ದಾರೆ.

ಕೋವಿಡ್-19 ವೈರಸ್‍ನಿಂದ ಅಮೆರಿಕದಲ್ಲಿ ಆಗಿರುವ ಭಾರೀ ಹಾನಿಗಾಗಿ ಚೀನಾದಿಂದ ದೊಡ್ಡ ಮೊತ್ತದ ಪರಿಹಾರಕ್ಕಾಗಿ ಆಗ್ರಹಿಸಿ ತನಿಖೆಗೆ ಮುಂದಾಗಿರುವ ಟ್ರಂಪ್ ಈಗ ಕಮ್ಯೂನಿಸ್ಟ್ ದೇಶದ ವಿರುದ್ಧ ತೆರಿಗೆ ವಿಧಿಸಲು ಸಿದ್ಧರಾಗಿದ್ದಾರೆ.

ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಮೆರಿಕ ಅಧ್ಯಕ್ಷರು, ತಮ್ಮ ದೇಶದಲ್ಲಿ ಭಾರೀ ಸಾವು ಮತ್ತು ಸೋಂಕು ಹೆಚ್ಚಳ ಹಾಗೂ ಆರ್ಥಿಕ ಕುಂಠಿತಕ್ಕೆ ಕಾರಣವಾಗಿರುವ ಚೀನಾಗೆ ಶಿಕ್ಷೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಮೊದಲ ಹಂತವಾಗಿ ಕೆಂಪು ದೇಶದ ಮೇಲೆ ಭಾರೀ ತೆರಿಗೆ ವಿಧಿಸುವ ಮುನ್ಸೂಚನೆ ನೀಡಿದ್ದಾರೆ.

ಆದರೆ, ಶಿಕ್ಷೆ ರೂಪದಲ್ಲಿ ಅಮೆರಿಕದ ಸಾಲ ನೀಡಿಕೆಯನ್ನು ಕಡಿತಗೊಳಿಸುವ ಸಾಧ್ಯತೆಯನ್ನು ಟ್ರಂಪ್ ತಳ್ಳಿ ಹಾಕಿದ್ದಾರೆ. ಕೊರೊನಾ ವೈರಸ್ ಹರಡಲು ಚೀನಾದ ವುಹಾನ್ ನಗರದಲ್ಲಿರುವ ಪ್ರಯೋಗಾಲಯವೇ ಕಾರಣ ಎಂದು ಟ್ರಂಪ್ ಮತ್ತೊಮ್ಮೆ ಪುನರುಚ್ಚರಿಸಿದರು.

ಕೊರೊನಾ ವಿಷಯದಲ್ಲಿ ಸುಳ್ಳು ಹೇಳಿಕೆಗಳನ್ನು ನೀಡಿ ವಿಶ್ವದ ದಾರಿ ತಪ್ಪಿಸಿರುವ ಚೀನಾಗೆ ಬೆಂಬಲ ನೀಡುತ್ತಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ) ಆ ದೇಶದ ಸಾರ್ವಜನಿಕ ಸಂಪರ್ಕ ಏಜೆನ್ಸಿಯಂತೆ ವರ್ತಿಸುತ್ತಿದೆ ಎಂದು ಅವರು ಟೀಕಿಸಿದ್ದಾರೆ. ಇದಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆಗೆ ನಾಚಿಕೆಯಾಗಬೇಕು ಎಂದು ಛೇಡಿಸಿದ್ದಾರೆ.

ಕೊರೊನಾ ಕೇಂದ್ರ ಬಿಂದುವಾದ ಚೀನಾ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಅಮೆರಿಕ ಅಧ್ಯಕ್ಷರು ನಾನು ಮುಂದಿನ ಅಧ್ಯಕ್ಷ ಚುನಾವಣೆಯಲ್ಲಿ ಗೆಲ್ಲಬಾರದೆಂಬ ಉದ್ದೇಶದಿಂದ ಚೀನಾ ನಾನಾ ಕುತಂತ್ರ ನಡೆಸುತ್ತಿದೆ ಎಂದು ಆರೋಪಿಸಿದರು.

Facebook Comments

Sri Raghav

Admin