ಇಂದು ಇಮ್ರಾನ್, ನಾಳೆ ಮೋದಿ ಜತೆ ಟ್ರಂಪ್ ಭೇಟಿ

ಈ ಸುದ್ದಿಯನ್ನು ಶೇರ್ ಮಾಡಿ

ನ್ಯೂಯಾರ್ಕ್, ಸೆ.23-ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ಧತಿ ನಂತರ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಉಲ್ಭಣಗೊಂಡಿರುವ ಬಿಗುವಿನ ಪರಿಸ್ಥಿತಿ ನಡುವೆಯೇ ಅಮೆರಿಕದಲ್ಲಿ ಉಭಯ ದೇಶಗಳ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಮತ್ತು ಇಮ್ರಾನ್‍ಖಾನ್ ಅವರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತ್ಯೇಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.

ಮೋದಿ ಮತ್ತು ಖಾನ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡುವ ಟ್ರಂಪ್ ಕಾಶ್ಮೀರ ವಿಷಯದಲ್ಲಿ ಉಭಯ ದೇಶಗಳ ನಡುವೆ ತಲೆದೋರಿರುವ ಪ್ರಸ್ತುತ ಬಿಕ್ಕಟ್ಟನ್ನು ಶಮನಗೊಳಿಸುವ ನಿಟ್ಟಿನಲ್ಲಿ ಶ್ರಮಿಸಲಿದ್ದಾರೆ ಎಂದು ಶ್ವೇತ ಭವನದ ಉನ್ನತ ಮೂಲಗಳು ತಿಳಿಸಿವೆ.

ಆದರೆ ಮೋದಿ ಮತ್ತು ಇಮ್ರಾನ್ ನಡುವೆ ನೇರ ಪರಸ್ಪರ ಭೇಟಿ ಮತ್ತು ಮಾತುಕತೆ ಸಾಧ್ಯತೆಗಳಿಲ್ಲ.ಎರಡೂ ದೇಶಗಳ ನಡುವೆ ಉದ್ಭವಿಸಿರುವ ಉದ್ವಿಗ್ನ ಸ್ಥಿತಿಯನ್ನು ಶಮನಗೊಳಿಸುವ ನಿಟ್ಟಿನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮೋದಿ ಮತ್ತು ಇಮ್ರಾನ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಚರ್ಚಿಸಲಿದ್ದಾರೆ. ಸೆ.23ರ ಸೋಮವಾರ ಟ್ರಂಪ್ ಇಮ್ರಾನ್‍ಖಾನ್ ಅವರನ್ನು ಭೇಟಿ ಮಾಡುವರು. ಅದರ ಮರುದಿನ ಸೆ.24 ಮಂಗಳವಾರ ಭಾರತದ ಪ್ರಧಾನಿಯವರೊಂದಿಗೆ ಸಮಾಲೋಚನೆ ನಡೆಸುವರು ಎಂದು ಶ್ವೇತ ಭವನದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ನ್ಯೂಯಾರ್ಕ್‍ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ 74ನೆ ಸಾಮಾನ್ಯ ಅಧಿವೇಶನದ ಸಂದರ್ಭದಲ್ಲಿ ಪಾಲ್ಗೊಳ್ಳಲಿರುವ ಮೋದಿ ಮತ್ತು ಇಮ್ರಾನ್ ಅವರನ್ನು ಅಮೆರಿಕ ರಾಷ್ಟ್ರಾಧ್ಯಕ್ಷರು ಪ್ರತ್ಯೇಕವಾಗಿ ಭೇಟಿ ಮಾಡಿ ಸಮಾಲೋಚನೆ ನಡೆಸಲಿದ್ದಾರೆ.

ಮೋದಿ ಮತ್ತು ಇಮ್ರಾನ್ ಅವರೊಂದಿಗೆ ದ್ವಿಪಕ್ಷೀಯ ಬಾಂಧವ್ಯ ಬಲವರ್ಧನೆ ಸೇರಿದಂತೆ ಕಾಶ್ಮೀರ ವಿಷಯವೂ ಪ್ರಸ್ತಾಪವಾಗಲಿದೆ. ಉಭಯ ನಾಯಕರ ಮನವೊಲಿಸಿ ಉದ್ವಿಗ್ನತೆಯನ್ನು ಶಮನಗೊಳಿಸಲು ಮೋದಿ ಅಗತ್ಯವಾದ ಎಲ್ಲಾ ಪ್ರಯತ್ನಗಳನ್ನು ನಡೆಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Facebook Comments