ಪತ್ನಿ ಸಮೇತ ಟ್ರಂಪ್ ಭಾರತಕ್ಕೆ ಭೇಟಿ, ವೈಟ್‍ಹೌಸ್ ಪ್ರಕಟಣೆ

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಫೆ.11-ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೆ.24 ರಿಂದ ಎರಡು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದಾರೆ.  ಟ್ರಂಪ್ ಫೆ.24ರಂದು ನವದೆಹಲಿಗೆ ಭೇಟಿ ನೀಡಲಿದ್ದು, ಉಭಯ ರಾಷ್ಟ್ರಗಳ ಸಂಬಂಧ ವೃದ್ಧಿಸುವ ಹಲವಾರು ಯೋಜನೆಗಳಿಗೆ ಸಹಿ ಹಾಕಲಿದ್ದಾರೆ.

ಫೆ.24ರಂದು ಪತ್ನಿ ಮೆಲನಿಯಾ ಟ್ರಂಪ್ ಅವರೊಂದಿಗೆ ಭಾರತಕ್ಕೆ ಅಗಮಿಸಲಿರುವ ಟ್ರಂಪ್ ಅವರು ದೆಹಲಿ ಮತ್ತು ಅಹಮದಾಬಾದ್‍ಗೆ ಭೇಟಿ ನೀಡಲಿದ್ದಾರೆ ಎಂದು ವೈಟ್‍ಹೌಸ್ ಪತ್ರಿಕಾ ಕಾರ್ಯದರ್ಶಿ ಸ್ಟೇಫೈನ್ ಗ್ರೀಷಮ್ ತಿಳಿಸಿದ್ದಾರೆ.

ಟ್ರಂಪ್ ಅವರು ಭಾರತ ಪ್ರವಾಸ ಕೈಗೊಳ್ಳುವ ಕುರಿತಂತೆ ಈಗಾಗಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಸಿಕೊಂಡಿದ್ದ ಮಹಾತ್ಮ ಗಾಂಧಿ ಅವರ ಜೀವನ ಶೈಲಿ ಮೆಲನಿಯಾ ಟ್ರಂಪ್ ಅವರ ಮೇಲೆ ಪ್ರಭಾವ ಬೀರಿದ್ದು ಭಾರತ ಪ್ರವಾಸದ ವೇಳೆ ಅಹಮದಾಬಾದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್‍ಗೂ ಭೇಟಿ ನೀಡಲು ಇಚ್ಚಿಸಿದ್ದಾರೆ.

ಹಿಂದಿನ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಅವರು 2010 ಮತ್ತು 2015ರಂದು ಭಾರತ ಪ್ರವಾಸ ಕೈಗೊಂಡಿದ್ದರು. ಕಾಶ್ಮೀರ ವಿವಾದ ಕುರಿತಂತೆ ಮಧ್ಯಸ್ಥಿಕೆ ವಹಿಸಲು ತಾವು ಸಿದ್ದ ಎಂದು ಘೋಷಿಸಿದ್ದ ಟ್ರಂಪ್ ಅವರ ಹೇಳಿಕೆಗೆ ಮೋದಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಅಮೇರಿಕಾ ಅಧ್ಯಕ್ಷ ಚುನಾವಣೆಗೆ ಮತ್ತೊಮ್ಮೆ ಸ್ಪರ್ಧಿಸಿರುವ ಟ್ರಂಪ್ ಭಾರತ ಪ್ರವಾಸ ಕೈಗೊಳ್ಳುತ್ತಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ.

Facebook Comments