ಪ್ರಪ್ರಥಮ ಬಾರಿಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಭಾರತಕ್ಕೆ ಭೇಟಿ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ವಾಷಿಂಗ್ಟನ್, ಜ.14-ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೇ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಲಿದ್ದು, ಫೆ.24ರಂದು ನವದೆಹಲಿಗೆ ಆಗಮಿಸುವ ನಿರೀಕ್ಷೆ ಇದೆ.
ಆದರೆ ಅಮೆರಿಕ ಅಧ್ಯಕ್ಷರ ವಿರುದ್ಧದ ವಾಗ್ದಂಡನೆ ಪ್ರಕ್ರಿಯೆ ಹಿನ್ನೆಲೆಯಲ್ಲಿ ಅವರ ಭೇಟಿ ದಿನಾಂಕದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ ಎಂದು ಅತ್ಯುನ್ನತ ಮೂಲಗಳು ತಿಳಿಸಿವೆ.

ಕಳೆದ ವಾರ (ಜ.7) ಪ್ರಧಾನಿ ನರೇಂದ್ರ ಮೋದಿ ಮತ್ತು ಟ್ರಂಪ್ ನಡುವೆ ನಡೆದ ಮಹತ್ವದ ದೂರವಾಣಿ ಸಂಭಾಷಣೆ ವೇಳೆ ಪ್ರಧಾನಮಂತ್ರಿಯವರು ಅಮೆರಿಕ ರಾಷ್ಟ್ರಾಧ್ಯಕ್ಷರನ್ನು ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದ್ದರು. ಅಲ್ಲದೆ, ದೆಹಲಿಯ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸುವಂತೆ ಮನವಿ ಮಾಡಿದ್ದರು.

ಆದರೆ ಜನವರಿ ಕೊನೆ ವಾರದಲ್ಲಿ ಪೂರ್ವನಿಗದಿತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಭೇಟಿ ಸಾಧ್ಯವಾಗುವುದಿಲ್ಲ ಎಂದು ಸೌಜನ್ಯದಿಂದ ಪ್ರಧಾನಿಯವರಿಗೆ ತಿಳಿಸಿದ್ದರು. ಫೆಬ್ರವರಿ ಅಂತ್ಯದಲ್ಲಿ ತಮ್ಮ ಭಾರತ ಭೇಟಿ ಬಗ್ಗೆ ಅವರು ಇಂಗಿತ ವ್ಯಕ್ತಪಡಿಸಿದ್ದರು. ಇದು ಟ್ರಂಪ್ ಅವರ ಪ್ರಥಮ ಭಾರತ ಭೇಟಿಯಾಗಲಿದೆ. ಈ ಹಿಂದೆ ಬಿಲ್‍ಗೇಟ್ಸ್, ಜಾರ್ಜ್ ಡಬ್ಲ್ಯು ಬುಷ್ ಮತ್ತು ಬರಾಕ್ ಒಬಾಮಾ ಭಾರತಕ್ಕೆ ಭೇಟಿ ನೀಡಿದ್ದರು.

ಅಮೆರಿಕ ಮತ್ತು ಭಾರತದ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾಗುತ್ತಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಪರಸ್ಪರ ಸಹಕಾರ ವೃದ್ಧಿಯಾಗುತ್ತಿರುವ ಹಿನ್ನೆಲೆಯಲ್ಲಿ ಟ್ರಂಪ್ ಭಾರತ ಭೇಟಿ ಮತ್ತಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ. ಆದರೆ ಅಮೆರಿಕ ಅಧ್ಯಕ್ಷರ ಭೇಟಿ ದಿನಾಂಕ ಮತ್ತು ಕಾರ್ಯಕ್ರಮಗಳ ವಿವರ ಇನ್ನೂ ನಿಖರವಾಗಿಲ್ಲ.

Facebook Comments