ಮಿಲಿಟರಿ ಕರೆಸುತ್ತೇನೆ ಹುಷಾರ್ : ಹಿಂಸೆಗಿಳಿದ ಪ್ರತಿಭಟನಾಕಾರರಿಗೆ ಟ್ರಂಪ್ ವಾರ್ನಿಂಗ್..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಜೂ.2-ಪೊಲೀಸರ ದೌರ್ಜನ್ಯದಿಂದ ಕಪ್ಪು ವರ್ಣೀಯ ವ್ಯಕ್ತಿ ಜಾರ್ಜ್ ಫೋಯ್ಡ್ ಮೃತಪಟ್ಟ ನಂತರ ಅಮೆರಿಕದಲ್ಲಿ ಭುಗಿಲೆದ್ದಿರುವ ಕಪ್ಪು ವರ್ಣೀಯರ ಹಿಂಸಾತ್ಮಕ ಪ್ರತಿಭಟನೆಯಿಂದ ಸುಮಾರು 50 ರಾಜ್ಯಗಳ 150ಕ್ಕೂ ಹೆಚ್ಚು ನಗರಗಳು ಹೈರಾಣಾಗಿವೆ.

ಹಿಂಸಾಚಾರದಲ್ಲಿ 10ಕ್ಕೂ ಹೆಚ್ಚು ಮಂದಿ ಹತರಾಗಿದ್ದು, ಸಾರ್ವಜನಿಕರ ಆಸ್ತಿ-ಪಾಸ್ತಿಗಳು ಮತ್ತು ನೂರಾರು ವಾಹನಗಳು ಅಗ್ನಿಗಾಹುತಿಯಾಗಿವೆ. ಬೃಹತ್ ವಾಣಿಜ್ಯ ಸಂಕೀರ್ಣಗಳಲ್ಲಿ ಲೂಟಿ ಮುಂದುವರಿದಿದೆ. ಈ ಸಂಬಂಧ ಸಹಸ್ರಾರು ಜನರನ್ನು ಪೊಲೀಸರು ಬಂಧಿಸಿದ್ದು, ಸೂಕ್ಷ್ಮ ಸ್ಥಳಗಳಲ್ಲಿ ಕಫ್ರ್ಯೂ ವಿಧಿಸಲಾಗಿದೆ.

ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹಿಂಸೆಗಿಳಿದಿರುವ ಪ್ರತಿಭಟನಾಕಾರರನ್ನು ಹತ್ತಿಕ್ಕಲು ಸೇನೆ ನಿಯೋಜಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ವಾಷಿಂಗ್ಟನ್‍ನ ಶ್ವೇತಭವನದ ರೋಸ್ ಗಾರ್ಡನ್‍ನಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, ಪೊಲೀಸ್ ಕಸ್ಟಡಿಯಲ್ಲಿ ಜಾರ್ಜ್ ಫೋಯ್ಡ್ ಮೃತಪಟ್ಟಿರುವುದಕ್ಕೆ ಅಮೆರಿಕದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ ಎಂಬ ಸಂಗತಿಯನ್ನು ಒಪ್ಪಿಕೊಂಡರು. ಅಲ್ಲದೇ ಮೃತನ ಕುಟುಂಬಕ್ಕೆ ಸೂಕ್ತ ನ್ಯಾಯ ದೊರಕಿಸಿಕೊಡುವುದಾಗಿಯೂ ಭರವಸೆ ನೀಡಿದರು.

ಪೊಲೀಸ್ ವಶದಲ್ಲಿ ಜಾರ್ಜ್ ಮೃತಪಟ್ಟ ನಂತರ ಅಮೆರಿಕದ ಸುಮಾರು 50 ರಾಜ್ಯಗಳ 150ಕ್ಕೂ ಹೆಚ್ಚು ನಗರಗಳು ಅಕ್ಷರಶ: ರಣರಂಗವಾಗಿ ಹೊತ್ತಿ ಉರಿಯುತ್ತಿದೆ. ಇದರ ಬಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೂ ತಟ್ಟಿದೆ.

ಕಫ್ರ್ಯೂ ಉಲ್ಲಂಘಿಸಿ ವಾಷಿಂಗ್ಟನ್, ನ್ಯೂಯಾರ್ಕ್, ನ್ಯೂಜೆರ್ಸಿ, ಚಿಕಾಗೋ, ಸ್ಯಾನ್‍ಫ್ರಾನ್ಸಿಸ್ಕೋ, ಕ್ಯಾಲಿಫೋರ್ನಿಯಾ, ಡೆಟ್ರಾಯಿm, ಮಿಚಿಗನ್, ಮಿನ್ನಿಸೋಟಾ, ಸೇರಿದಂತೆ ಅನೇಕ ರಾಜ್ಯಗಳಲ್ಲಿ ಪ್ರತಿಭಟನಾಕಾರರು ಹಿಂಸಾಚಾರ ನಡೆಸಿದ್ದಾರೆ. ನಿನ್ನೆ ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ ಶ್ವೇತಭವನದ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಉದ್ರಿಕ ಕಪ್ಪು ವರ್ಣೀಯರನ್ನು ಚದುರಿಸಲು ಪೊಲೀಸರು ಆಶ್ರುವಾಯು ಪ್ರಯೋಗಿಸಿದರು.

ಈ ಸಂದರ್ಭದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಭುಗಿಲೆದ್ದ ಘರ್ಷಣೆಯಲ್ಲಿ ಅನೇಕರಿಗ ಗಾಯಗಳಾಗಿವೆ. ವೈಟ್‍ಹೌಸ್ ಮುಂದೆ ಹಿಂಸಾತ್ಮಕ ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮವಾಗಿ ಟ್ರಂಪ್ ಅವರನ್ನು ಭದ್ರತಾ ಪಡೆಗಳು ಶ್ವೇತಭವನದಲ್ಲಿರುವ ರಹಸ್ಯ ಭೂಗತ ಅಡಗುದಾಣಕ್ಕೆ (ಅಂಡರ್‍ಗ್ರೌಂಡ್ ಬಂಕರ್) ಕೆಲಕಾಲ ಅಲ್ಲಿ ಇರಿಸಿದ್ದರು. ಅಮೆರಿದಕ ಬಹುತೇಕ ಕಡೆಗಳಲ್ಲಿ ನಡೆದ ಹಿಂಸಾಚಾರ, ಹತ್ಯೆ, ಲೂಟಿ ಪ್ರಕರಣಗಳ ಸಂಬಂಧ ಸಾವಿರಾರು ಮಂದಿಯನ್ನು ಬಂಧಿಸಲಾಗಿದೆ.

ಕಪ್ಪು ವರ್ಣೀಯ ವ್ಯಕ್ತಿ ಜಾರ್ಜ್ ಫೋಯ್ಡ್ ಸಾವು ಖಂಡಿಸಿ ಅಮೆರಿಕದಲ್ಲಿ ಕಳೆದ ಆರು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಇಂದು ಕೂಡ ಮತ್ತಷ್ಟು ತೀವ್ರಗೊಂಡಿದ್ದು, ಲೂಟಿ, ಗಲಭೆ ಮತ್ತು ಹತ್ಯೆ ಘಟನೆಗಳು ಮುಂದುವರಿದಿವೆ. ಅನೇಕ ನಗರಗಳಲ್ಲಿ ಕಫ್ರ್ಯೂ ವಿಧಿಸಲಾಗಿದ್ದರೂ, ಸಾವಿರಾರು ಜನರು ಬೀದಿಗಿಳಿದು ದೊಡ್ಡ ಮಾಲ್‍ಗಳು ಮತ್ತು ವಾಣಿಜ್ಯ ಸಂಕೀರ್ಣಗಳ ಮೇಲೆ ದಾಳಿ ನಡೆಸಿ ಮನಸೋಇಚ್ಛೆ ಲೂಟಿ ಮಾಡುತ್ತಿದ್ದಾರೆ. ಇದನ್ನು ತಡೆಯಲು ಬಂದರನ್ನು ನಿರ್ದಯವಾಗಿ ಕೊಲ್ಲುತ್ತಿದ್ದಾರೆ.

ಹಲವೆಡೆ ಪೊಲೀಸರು ಮತ್ತು ಉದ್ರಿಕ್ತ ಗುಂಪಿನ ನಡುವೆ ನಡೆದ ಘರ್ಷಣೆಯಲ್ಲಿ ಅನೇಕರು ಗಾಯಗೊಂಡಿದ್ದಾರೆ. ಕೊರೊನಾ ಹಾವಳಿಯಿಂದ ಈಗಾಗಲೇ ಅಪಾರ ಸಾವು-ನೋವಿಗೆ ಕಾರಣವಾಗಿರುವ ಅಮೆರಿಕದಲ್ಲಿ ಪ್ರತಿಭಟನೆಕಾರರು ಸಾಮಾಜಿಕ ಅಂತರ ಕಾಯ್ಡುಕೊಳ್ಳದೇ ಹಿಂಸೆಗೆ ಇಳಿಸಿದ್ದು, ಸೋಂಕು ಪ್ರಕರಣಗಳು ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

ಅಮೆರಿಕದ ಮಿನ್ನೆಸೋಟಾ ನಗರದಲ್ಲಿ ಖೋಟಾ ನೋಟು ಚಲಾವಣೆ ಆರೋಪದ ಮೇಲೆ ಕಪ್ಪು ಜನಾಂಗದ ಜಾರ್ಜ್ ಫ್ಲೈಯ್ಡ್ ಎಂಬಾತನನ್ನು ಬಂಧಿಸಿದ ಪೊಲೀಸ್ ಅಧಿಕಾರಿ ಆತನ ಕುತ್ತಿಗೆಯನ್ನು ಮಂಡಿಗಳ ಮಧ್ಯೆ ಎಂಟು ನಿಮಿಷಗಳ ಕಾಲ ಅದುಮಿಟ್ಟರು. ಉಸಿರುಗಟ್ಟಿ ಜಾರ್ಜ್ ಮೃತಪಟ್ಟ ನಂತರ ಮಿನ್ಸಿಸೋಟಾದಲ್ಲಿ ಆರಂಭವಾದ ಕಪ್ಪು ಜನರ ಪ್ರತಿಭಟನೆ ಅಮೆರಿಕವನ್ನು ವ್ಯಾಪಿಸಿದೆ.

Facebook Comments