ಕನ್ನಡ ಭಾಷಾ ಬೆಳವಣಿಗೆಗೆ ಮಾಧ್ಯಮಗಳ ಕೊಡುಗೆ ಅನನ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.29- ಕನ್ನಡ ಭಾಷಾ ಬೆಳವಣಿಗೆಗೆ ಮಾಧ್ಯಮಗಳ ಕೊಡುಗೆ ಅನನ್ಯವಾದುದು. ನಾಗರಿಕರು ಪತ್ರಿಕೆಗಳನ್ನು ಓದಿ, ದೃಶ್ಯ ಮಾಧ್ಯಮಗಳ ವರದಿಗಳು ಸುದ್ದಿಗಳನ್ನು ನೋಡಿ-ಕೇಳಿ ಕನ್ನಡ ಭಾಷೆಯನ್ನು ಸುಧಾರಿಕೊಳ್ಳಬಹುದಾದ ನಿಟ್ಟಿನಲ್ಲಿ ಮಾಧ್ಯಮಗಳು ಗಮನಹರಿಸುವ ಅನಿವಾರ್ಯತೆ ಇರುವುದಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅಭಿಪ್ರಾಯಪಟ್ಟರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿ ಅಚ್ಚಳಿಯದೆ ಬೆಳಗಿರುವ ದಿವಂಗತ ಆರ್.ಕಲ್ಯಾಣಮ್ಮನವರ ಜನ್ಮದಿನದ ಅಂಗವಾಗಿ ಇಂದಿನಿಂದ ಮೂರು ದಿನಗಳ ಕಾಲ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿರುವ ಮಾಧ್ಯಮಗಳಲ್ಲಿ ಸರಿಗನ್ನಡ ಬಳಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಇಂದಿನ ಮಾಧ್ಯಮಗಳು ಅದರಲ್ಲೂ ವಿಶೇಷವಾಗಿ ದೃಶ್ಯ ಮಾಧ್ಯಮಗಳು ಬ್ರೇಕಿಂಗ್ ನ್ಯೂಸ್ ನೀಡುವ ಧಾವಂತ ದಲ್ಲಿ ಪದಬಳಕೆಯನ್ನು ತಪ್ಪಾಗಿ ಬಳಸುತ್ತಿರುವ ಮತ್ತು ತಪ್ಪಾಗಿ ಉಚ್ಛರಿಸುವ ಬಗ್ಗೆ ಸಾಮಾಜಿಕ ಜÁಲತಾಣಗಳಲ್ಲಿ ಅಸಮಾಧಾನ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಮಾಧ್ಯಮಗಳಲ್ಲಿ ಸರಿಗನ್ನಡ ಬಳಕೆಯನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.

ನಾಡಿನ ಮೂಲೆ ಮೂಲೆಗೂ ಸುದ್ದಿ ಬಿತ್ತರಿಸುವ ಮಾಧ್ಯಮಗಳ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕರ್ನಾಟಕದ ಜನ ಕನ್ನಡದ ಪತ್ರಿಕೆ, ಟಿವಿ ಮತ್ತು ರೇಡಿಯೋ ಮಾಧ್ಯಮಗಳನ್ನು ವಸ್ತುನಿಷ್ಠ ಮಾಹಿತಿಗಾಗಿ ಅವಲಂಬಿಸಿರುತ್ತಾರೆ. ಅಷ್ಟೇ ಮುಖ್ಯವಾಗಿ ತಮ್ಮ ಕನ್ನಡದ ಓದು, ಬರಹ ಕೌಶಲ್ಯವನ್ನು ಸುಧಾರಿಸಿಕೊಳ್ಳಲು ಕನ್ನಡಿಗರು ಮಾಧ್ಯಮಗಳನ್ನು ಅನುಸರಿಸುತ್ತಾರೆ. ಜನಮಾನ್ಯರು-ಭಾಷೆ- ಮಾಧ್ಯಮ ಪರಸ್ಪರ ಬೆಸುಗೆಯಾಗಿ, ಬದುಕಿನ ಕೊಂಡಿಯಾಗಿ ನಾಡನ್ನು ಸಮೃದ್ಧಗೊಳಿಸಬೇಕಿದೆ. ಅದಕ್ಕಾಗಿ ಮಾಧ್ಯಮಗಳ ಸಹಕಾರ ಬಹಳ ಮುಖ್ಯವಾಗಿದೆ ಎಂದು ಮನವಿ ಮಾಡಿದರು.

ರಾಜಧಾನಿಯಲ್ಲಿರುವ ಕನ್ನಡ ದೃಶ್ಯ ಮಾಧ್ಯಮ, ಮುದ್ರಣ ಮಾಧ್ಯಮ ಹಾಗೂ ಶ್ರವ್ಯ ಮಾಧ್ಯಮ ಗಳ ಮುಖ್ಯಸ್ಥರನ್ನು ಅವರ ಕಚೇರಿಯಲ್ಲಿಯೇ ಪ್ರಾಧಿಕಾರದ ಅಧ್ಯಕ್ಷರು, ನಾಮನಿರ್ದೇಶಿತ ಸದಸ್ಯರುಗಳು ಭೇಟಿ ಮಾಡಿ ಹಕ್ಕೊತ್ತಾಯ ಪತ್ರ ನೀಡಿ, ಕನ್ನಡ ಭಾಷೆಯನ್ನು ಸಶಕ್ತವನ್ನಾಗಿಸುವ ನಿಟ್ಟಿನಲ್ಲಿ ಶ್ರಮಿಸುವಂತೆ ಮನವಿ ಮಾಡಿದರು.

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿದ್ದು, ಮತ್ತಷ್ಟು ಸಮೃದ್ಧ, ವಿಸ್ತಾರಗೊಳಿಸಲು ಕನ್ನಡ ಕಾಯಕ ವರ್ಷಾಚರಣೆ ಸಂದರ್ಭದಲ್ಲಿ ಈಗಾಗಲೇ ಹಲವು ಅಭಿಯಾನಗಳನ್ನು ಹಮ್ಮಿಕೊಂಡಿದ್ದು, ಮುಂದುವರಿದ ಭಾಗವಾಗಿ ಇಂದು ಮಾಧ್ಯಮಗಳಲ್ಲಿ ಸರಿಗನ್ನಡ ಬಳಕೆ ಅಭಿಯಾನವನ್ನು ರಾಜ್ಯಾದ್ಯಂತ ನಡೆಸಲಾಯಿತು. ಅಭಿಯಾನದ ನೇತೃತ್ವವನ್ನು ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರಾದ ಡಾ.ಕಿಶೋರ್ (ದೃಶ್ಯ ಮಾಧ್ಯಮ), ಗುಬ್ಬಿಗೂಡು ರಮೇಶ್ (ಶ್ರವ್ಯ ಮಾಧ್ಯಮ) ಹಾಗೂ ಅಬ್ದುಲ್ ರೆಹಮಾನ್ ಪಾಷಾ (ಮುದ್ರಣ ಮಾಧ್ಯಮ) ಅವರು ವಹಿಸಿದ್ದರು.

ರಾಜಧಾನಿ ಬೆಂಗಳೂರಿನಲ್ಲಿ ನಡೆಯುವ ಅಭಿಯಾನಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್. ನಾಗಾಭರಣ ಅವರ ಜತೆಗೂಡಿ ಪ್ರಾಧಿಕಾರದ ರಾಜ್ಯ ಮಟ್ಟದ ನಾಮನಿರ್ದೇಶಿತ ಸದಸ್ಯರು, ಜಿಲ್ಲಾ ಜಾಗೃತಿ ಸಮಿತಿ ಸದಸ್ಯರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕನ್ನಡ ಜಾಗೃತಿ ಸಮಿತಿ ಸದಸ್ಯರು ಹಾಗೂ ಕನ್ನಡ ಕಾಯಕ ಪಡೆಯ ಸದಸ್ಯರು ತಮ್ಮ ವ್ಯಾಪ್ತಿಯಲ್ಲಿ ನಡೆದ ಅಭಿಯಾನದಲ್ಲಿ ಭಾಗವಹಿಸಿದ್ದರು.

ಈ ಸಂಜೆ ಪತ್ರಿಕಾ ಕಚೇರಿಗೆ ಭೇಟಿ ನೀಡಿದ ಪ್ರೊ.ಅಬ್ದುಲ್ ರೆಹಮಾನ ಪಾಷಾ ಅವರ ನೇತೃತ್ವದ ಪ್ರಾಧಿಕಾರದ ಕೆಲ ಸದಸ್ಯರು ಹಾಗೂ ಕನ್ನಡ ಅಭಿಮಾನಿಗಳು ಕನ್ನಡ ಭಾಷೆ ಬೆಳವಣಿಗೆಗೆ ಈ ಸಂಜೆ ಪತ್ರಿಕೆಯ ಸೇವೆಯನ್ನು ಪ್ರಶಂಸಿಸಿದರು.

Facebook Comments