40,000 ನೌಕರರ ವಜಾ ಖಂಡಿಸಿ ಪ್ರತಿಭಟನೆ ವೇಳೆ ಆತ್ಮಹತ್ಯೆಗೆ ಯತ್ನಿಸಿದ್ದ ಚಾಲಕ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಹೈದರಾಬಾದ್,ಅ.13- ನಲವತ್ತು ಸಾವಿರಕ್ಕೂ ಹೆಚ್ಚು ನೌಕರರನ್ನು ವಜಾಗೊಳಿಸಿರುವ ರಾಜ್ಯ ಸರ್ಕಾರ ಕ್ರಮವನ್ನು ಖಂಡಿಸಿ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮ(ಟಿಎಸ್‍ಆರ್‍ಟಿಸಿ)ದ ನೌಕರರು ನಡೆಸಿದ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ್ದ ಬಸ್ ಚಾಲಕ ಇಂದು ಮೃತಪಟ್ಟಿದ್ದಾರೆ.

ಶ್ರೀನಿವಾಸ ರೆಡ್ಡಿ ಮೃತಪಟ್ಟ ಬಸ್ ಚಾಲಕ. ಟಿಎಸ್‍ಆರ್‍ಟಿಸಿ ನೌಕರರ ವಿರುದ್ಧ ಸರ್ಕಾರ ತೆಗೆದುಕೊಂಡಿರುವ ಕ್ರಮಕ್ಕೆ ಶ್ರೀನಿವಾಸ್ ಬೇಸತ್ತಿದ್ದರು. ಇದೇ ಹತಾಶೆಯಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಕುಟುಂಬದವರು ದೂರಿದ್ದಾರೆ.

ನೌಕರರ ವಜಾ ಖಂಡಿಸಿ ತೆಲಂಗಾಣ ಸರ್ಕಾರದ ವಿರುದ್ಧ ಸುಮಾರು 48 ಸಾವಿರ ಟಿಎಸ್‍ಆರ್‍ಟಿಸಿ ನೌಕರರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಶ್ರೀನಿವಾಸ್ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಸುಟ್ಟು ಗಾಯಗಳಿಂದ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಹೈದರಾಬಾದ್‍ನ ಡಿಆರ್‍ಡಿಒ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶೇ.80ರಷ್ಟು ಸುಟ್ಟ ಗಾಯಗಳಾಗಿದ್ದ ಶ್ರೀನಿವಾಸ್ ಚಿಕಿತ್ಸೆ ಫಲಿಸದೆ ಇಂದು ಕೊನೆಯುಸಿರೆಳೆದಿದ್ದಾರೆ.

ಚಾಲಕ ಮೃತಪಟ್ಟಿರುವುದರಿಂದ ಗಲಭೆ ಉಂಟಾಗಬಹುದೆಂಬ ಹಿನ್ನೆಲೆಯಲ್ಲಿ ಆಸ್ಪತ್ರೆ ಆವರಣದಲ್ಲಿ ಪೊಲೀಸರು ಬಿಗಿಭದ್ರತೆ ಕೈಗೊಂಡಿದ್ದಾರೆ. ಟಿಎಸ್‍ಆರ್‍ಟಿಸಿಯ 40 ಸಾವಿರಕ್ಕೂ ಹೆಚ್ಚು ನೌಕರರನ್ನು ವಜಾಗೊಳಿಸಿರುವ ಸರ್ಕಾರ ಕ್ರಮವನ್ನು ಖಂಡಿಸಿ ಕಳೆದ ಅ.5ರಿಂದಲೂ ನೌಕರರು ನಡೆಸುತ್ತಿರುವ ಪ್ರತಿಭಟನೆ ಇಂದು 9ನೇ ದಿನಕ್ಕೆ ಕಾಲಿರಿಸಿದೆ.

ಆರ್‍ಟಿಸಿ 48 ಸಾವಿರ ನೌಕರರ ವಜಾ ಕುರಿತಂತೆ ಯಾವುದೇ ಮಾತುಕತೆ ನಡೆಸುವ ಪ್ರಶ್ನೆಯೇ ಇಲ್ಲ ಎಂದು ಈಗಾಗಲೇ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ತಿಳಿಸಿದ್ದಾರೆ. ಸರ್ಕಾರದೊಂದಿಗೆ ಟಿಎಸ್‍ಆರ್‍ಟಿಸಿ ವಿಲೀನಗೊಳಿಸಬೇಕೆಂಬ ಆಗ್ರಹವೂ ಸೇರಿದಂತೆ ಹತ್ತು ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನವರಾತ್ರಿ ಸಂದರ್ಭದಲ್ಲಿ ನೌಕರರು ಹಠಾತ್ ಮುಷ್ಕರ ನಡೆಸಿದ್ದರಿಂದ ಸಾರಿಗೆ ಸಂಸ್ಥೆಗೆ 1200 ಕೋಟಿ ರೂ.ನಷ್ಟವಾಗಿದೆ. ಇದು ಅಕ್ಷಮ್ಯ ಅಪರಾಧ ಎಂದು ಹೇಳಿಕೆ ನೀಡಿ ಸಿಎಂ ರಾವ್ 40 ಸಾವಿರ ನೌಕರರನ್ನು ವಜಾಗೊಳಿಸಿದ್ದರು.

Facebook Comments

Sri Raghav

Admin