ಕ್ಷಯ ರೋಗ ಮುಕ್ತ ಜಿಲ್ಲೆಗೆ ಕೈ ಜೋಡಿಸಿ
ಬೆಂಗಳೂರು,ಏ.6- ವಿಶ್ವ ಆರೋಗ್ಯ ಸಂಸ್ಥೆ ಕ್ಷಯರೋಗ ಮುಕ್ತ ಜಗತ್ತು ಆಗಬೇಕೆಂದು ಉದ್ದೇಶಿಸಿದ್ದು, 2025ರ ವೇಳೆಗೆ ಬೆಂಗಳೂರು ನಗರ ಜಿಲ್ಲೆಯನ್ನು ಕ್ಷಯ ಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲರೂ ಕೈ ಜೋಡಿಸಬೇಕೆಂದು ಬೆಂಗಳೂರು ನಗರ ಜಿಲ್ಲಾ ಕ್ಷಯ ರೋಗ ನಿರ್ಮೂಲನ ಅಧಿಕಾರಿ ಡಾ.ಎಸ್.ಎಸ್.ಮಹೇಶ್ಕುಮಾರ್ ತಿಳಿಸಿದರು. ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ಜಿಲ್ಲಾ ಪಂಚಾಯತ್ ಸದಸ್ಯರಿಗೆ ಕ್ಷಯ ರೋಗದ ಅರಿವು ಹಾಗೂ ಕೋವಿಡ್ ಸಂಬಂಧಿಸಿದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
2025ರ ವೇಳೆಗೆ ಕ್ಷಯ ರೋಗದಿಂದ ಯಾರೂ ತೊಂದರೆಗೊಳಗಾಗಬಾರದು. ಸಾವು ಸಂಭವಿಸಬಾರದು ಎಂಬ ಉದ್ದೇಶ ಹೊಂದಲಾಗಿದೆ. ಆದರೆ ಕೊರೊನಾದಿಂದಾಗಿ ಟಿಬಿ ಪತ್ತೆ ಹಚ್ಚುವಿಕೆ ಕಡಿಮೆಯಾಗಿವೆ. ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ, ವೃದ್ಧಾಪ್ಯ ಕೇಂದ್ರಗಳು, ಅನಾಥಾಶ್ರಮಗಳು, ಎಚ್ಐವಿ ಪೀಡಿತರು ಸೇರಿದಂತೆ ವಿವಿಧ ವರ್ಗದವರನ್ನು ತಪಾಸಣೆಗೆ ಒಳಪಡಿಸಲಾಯಿತು. ಕಳೆದ ಡಿಸೆಂಬರ್ ತಿಂಗಳಿನಲ್ಲಿ ಆರೋಗ್ಯ ಹಾಗೂ ಆಶಾ ಕಾರ್ಯಕರ್ತರು 19,093 ಮನೆಗಳ ತಪಾಸಣೆ ಕೈಗೊಂಡು 669 ಸಂದೇಹಾಸ್ಪದ ಪ್ರಕರಣಗಳಲ್ಲಿ 30 ಕ್ಷಯ ರೋಗಿಗಳನ್ನು ಪತ್ತೆಹಚ್ಚಿ ಅದೇ ದಿನದಿಂದ ಚಿಕಿತ್ಸೆ ಪ್ರಾರಂಭಿಸಲಾಗಿದೆ ಎಂದರು.
ದುರ್ಬಲ ವರ್ಗದವರಲ್ಲಿ ಕಂಡು ಬರುವ ಅಪೌಷ್ಠಿಕತೆಯನ್ನು ನಿರ್ಮೂಲನೆ ಮಾಡಬೇಕು. ಕನಿಷ್ಠ 6 ತಿಂಗಳು ಚಿಕಿತ್ಸೆ ನೀಡಬೇಕಾಗುತ್ತದೆ. ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ಜ್ವರ ಕಂಡು ಬಂದು ತೂಕ ಕಡಿಮೆಯಾಗುವುದು, ಎದೆನೋವು ಮೊದಲಾದ ಗುಣಲಕ್ಷಣಗಳನ್ನು ಕ್ಷಯ ರೋಗ ಹೊಂದಿರುತ್ತದೆ ಎಂದರು.
ಕರ್ನಾಟಕದಲ್ಲಿ ಒಂದು ಲಕ್ಷ ಜನಸಂಖ್ಯೆಗೆ 135 ಮಂದಿ ಕ್ಷಯರೋಗಕ್ಕೆ ತುತ್ತಾಗು ತ್ತಿದ್ದು, ಮರಣದ ಪ್ರಮಾಣ ಶೇ.9ರಷ್ಟಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 2019- 2020ನೆ ಸಾಲಿನವರೆಗೂ 3,150 ಕ್ಷಯ ರೋಗಿಗಳು ಪತ್ತೆಯಾಗಿದ್ದು, 2231 ರೋಗಿಗಳು ಗುಣಮುಖರಾಗಿದ್ದಾರೆ. ಶೇ.5ರಷ್ಟು ಮಂದಿ ಸಾವನ್ನಪ್ಪಿದ್ದಾರೆ ಎಂದು ವಿವರಿಸಿದರು.
ಬೆಂಗಳೂರು ನಗರ ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಎನ್.ಮನೋಹರ್ ಮಾತ ನಾಡಿ, ಕಳೆದ 15 ದಿನಗಳಿಂದ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಎರಡು ವಾರದಲ್ಲಿ ಸಾವು ಸಂಭವಿಸಿಲ್ಲ. ನಿತ್ಯ ನಾಲ್ಕುವರೆ ಸಾವಿರದಿಂದ 5 ಸಾವಿರ ಪರೀಕ್ಷೆ ಮಾಡಲಾಗುತ್ತಿದೆ. ಹೊರ ರಾಜ್ಯದಿಂದ ಬಂದವರನ್ನು ಚೆಕ್ಪೋಸ್ಟ್ ಗಳಲ್ಲಿ ಆರ್ಟಿಪಿಸಿಆರ್ ಪರೀಕ್ಷೆಗೊಳಪಡಿಸಲಾಗುತ್ತಿದೆ.
ಕೋವಿಡ್ನಿಂದಾಗಿ ಇದುವರೆಗೂ ಜಿಲ್ಲೆಯಲ್ಲಿ 443 ಮಂದಿ ಮೃತಪಟ್ಟಿದ್ದು, ಶೇ.95ರಷ್ಟು ಗುಣಮುಖರಾಗಿದ್ದಾರೆ. ಶೀತ, ತಲೆನೋವು, ಜ್ವರ, ಕಫ ಎಂದು ನಿರ್ಲಕ್ಷ್ಯ ಮಾಡಬಾರದು. ಪರೀಕ್ಷೆ ಮಾಡಿಸಿಕೊಳ್ಳಬೇಕು. ಆನೇಕಲ್ನಲ್ಲಿ ಹೆಚ್ಚು ಪ್ರಕರಣಗಳಿವೆ. 803 ಆನೇಕಲ್ನಲ್ಲಿ ಸಕ್ರಿಯ ಪ್ರಕರಣಗಳಿದ್ದರೆ, ಬೆಂಗಳೂರು ಉತ್ತರ ಹಾಗೂ ದಕ್ಷಿಣ ತಾಲ್ಲೂಕುಗಳಲ್ಲಿ ತಲಾ 247, ಪೂರ್ವ ತಾಲ್ಲೂಕಿನಲ್ಲಿ 220 ಸಕ್ರಿಯ ಪ್ರಕರಣಗಳಿವೆ. ಬಹಳಷ್ಟು ಮಂದಿ ಹೋಂ ಐಸೋಲೇಷನ್ನಲ್ಲಿ ಇದ್ದಾರೆ. ಅವರು ಕಟ್ಟುನಿಟ್ಟಾಗಿ ನಿಯಮಗಳನ್ನು ಪಾಲಿಸಬೇಕು ಎಂದರು.
ಜಿಲ್ಲೆಯಲ್ಲಿ ಕೇಂದ್ರ, ರಾಜ್ಯ ಸರ್ಕಾರಿ ಹಾಗೂ ಖಾಸಗಿ ಆರೋಗ್ಯ ಸಿಬ್ಬಂದಿಗೆ ಶೇ.87.7ರಷ್ಟು ಮೊದಲ ಹಂತದ ಲಸಿಕೆ ಹಾಗೂ ಶೇ.50.2ರಷ್ಟು 2ನೇ ಹಂತದ ಲಸಿಕೆ ನೀಡಲಾಗಿದೆ. 45 ವರ್ಷ ಮೇಲ್ಪಟ್ಟವರಿಗೆ ಏಪ್ರಿಲ್ 4ರವರೆಗೆ 60,560 ಮಂದಿಗೆ ಮೊದಲ ಹಂತದ ಲಸಿಕೆ, 1085 ಮಂದಿಗೆ 2ನೇ ಹಂತದಲ್ಲಿ ಲಸಿಕೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಬೆಂಗಳೂರುನಗರ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಜಿ.ಮರಿಸ್ವಾಮಿ, ಉಪಾಧ್ಯಕ್ಷೆ ಪಾರ್ವತಿ ಚಂದ್ರಪ್ಪ, ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಸಂಗಪ್ಪ, ಪರಿಸರವಾದಿ ಡಾ.ಎ.ಎನ್. ಯಲ್ಲಪ್ಪ ರೆಡ್ಡಿ, ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಆರ್.ನಾಗೇಶ್ ರೆಡ್ಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಎ.ಶ್ರೀನಿವಾಸ ಮತ್ತಿತರರು ಉಪಸ್ಥಿತರಿದ್ದರು.