ಸಿಎಂ ನೀಡಿದ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ದಿಕ್ಕರಿಸಿದ ತುಳಸಿ ಮುನಿರಾಜು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.14-ಅಸಮಾಧಾನವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನೀಡಿದ್ದ ಕರ್ನಾಟಕ ಪ್ರವಾಸೋದ್ಯಮ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ಬಿಜೆಪಿ ಮುಖಂಡ ತುಳಸಿ ಮುನಿರಾಜು ನಿರಾಕರಿಸಿದ್ದಾರೆ.  ಈ ಮೂಲಕ ಮುಂದಿನ ದಿನಗಳಲ್ಲಿ ತಾವು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪ್ರಬಲ ಆಕಾಂಕ್ಷಿ ಎಂಬುದನ್ನು ರುಜುವಾತು ಮಾಡಿದ್ದಾರೆ.

ನಿನ್ನೆಯಷ್ಟೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತುಳಸಿ ಮುನಿರಾಜು ಅವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಆದೇಶ ಹೊರಡಿಸಿದ್ದರು. ಆದರೆ ಇದನ್ನು ಅಷ್ಟೇ ನಯವಾಗಿ ತಿರಸ್ಕರಿಸಿರುವ ಮುನಿರಾಜು, ನನಗೆ ಯಾವುದೇ ಸ್ಥಾನಮಾನದ ಅಗತ್ಯವಿಲ್ಲ. ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಮುಂದುವರೆಯುತ್ತೇನೆ ಎನ್ನುವ ಮೂಲಕ ಭಿನ್ನಮತ ಸಾರುವ ಮುನ್ಸೂಚನೆ ನೀಡಿದ್ದಾರೆ.

ಯಾವುದೇ ಕ್ಷಣದಲ್ಲೂ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ದಿನಾಂಕ ಘೋಷಣೆಯಾಗಲಿದೆ. ಕಾಂಗ್ರೆಸ್‍ನಿಂದ ಬಂದಿರುವ ಮಾಜಿ ಶಾಸಕ ಮುನಿರತ್ನಗೆ ಟಿಕೆಟ್ ನೀಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೀರ್ಮಾನಿಸಿದ್ದಾರೆ. ಆದರೆ ಯಡಿಯೂರಪ್ಪ ಅವರ ಈ ತೀರ್ಮಾನಕ್ಕೆ ಪಕ್ಷದ ರಾಷ್ಟ್ರೀಯ ಸಂಘಟನಾ ಸಹ ಕಾರ್ಯದರ್ಶಿ ಬಿ.ಎನ್.ಸಂತೋಷ್ ಅಡ್ಡಿಯಾಗಿದ್ದಾರೆ.

ರಾಜರಾಜೇಶ್ವರಿನಗರ ಕ್ಷೇತ್ರದಿಂದ ತಮ್ಮ ಪರಮಾಪ್ತ ಶಿಷ್ಯ ತುಳಸಿ ಮುನಿರಾಜುಗೆ ಟಿಕೆಟ್ ಕೊಡಿಸಲು ಸಂತೋಷ್ ರಾಷ್ಟ್ರೀಯ ಮಟ್ಟದಲ್ಲಿ ಲಾಬಿ ನಡೆಸಿದ್ದಾರೆ. ಆದರೆ ಯಡಿಯೂರಪ್ಪ ತಮ್ಮನ್ನು ನಂಬಿ ಬಂದಿರುವ ಮುನಿರತ್ನಗೆ ಟಿಕೆಟ್ ಕೊಡಲೇಬೇಕೆಂದು ಪಟ್ಟು ಹಿಡಿದಿದ್ದಾರೆ. ಅವರು ರಾಜೀನಾಮೆ ನೀಡಿದ್ದರಿಂದಲೇ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಕೊನೆ ಕ್ಷಣದಲ್ಲಿ ಅವರಿಗೆ ಟಿಕೆಟ್ ಕೊಡದಿದ್ದರೆ ನಾವು ವಚನ ಭ್ರಷ್ಟರಾಗುತ್ತೇವೆ. ಹೀಗಾಗಿ ಮುನಿರತ್ನಗೆ ಟಿಕೆಟ್ ಕೊಡಲೇಬೇಕೆಂದು ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದಾರೆ.

ಮುಂದೊಂದು ದಿನ ತುಳಸಿ ಮುನಿರಾಜು ಬಂಡಾಯ ಸಾರಬಹುದೆಂಬ ಎಚ್ಚರಿಕೆ ಹಿನ್ನೆಲೆಯಲ್ಲಿ ಯಡಿಯೂರಪ್ಪ ನಿನ್ನೆಯಷ್ಟೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ಘೋಷಣೆ ಮಾಡಿದ್ದರು. ಇದನ್ನು ಮುನಿರಾಜು ತಿರಸ್ಕøರಿಸಿರುವುದರಿಂದ ಮುಂದೆ ನಡೆಯುವ ಆಟ ಕುತೂಹಲ ಕೆರಳಿಸಿದೆ.

Facebook Comments