ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಾಲಾದ ತುಮಕೂರು ಮಹಾನಗರ ಪಾಲಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಜ.30- ತುಮಕೂರು ಮಹಾನಗರ ಪಾಲಿಕೆಯ ಆಡಳಿತ ಈ ಬಾರಿಯೂ ಮೈತ್ರಿ ಪಕ್ಷಗಳ ಪಾಲಾಗಿದ್ದು, ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದೆ.ಕಾಂಗ್ರೆಸ್ ಪಕ್ಷದ ಫರೀದಾಬೇಗಂ ಕಳೆದ ಎರಡು ಬಾರಿಯಿಂದ ಮೇಯರ್ ಆಗಲು ಕಸರತ್ತು ನಡೆಸಿದ್ದರು. ಆದರೆ, ಸಾಧ್ಯವಾಗಿರಲಿಲ್ಲ. ಅವರ ಕನಸು ಈಗ ನನಸಾಗಿದ್ದು, ಇದೇ ಮೊದಲ ಬಾರಿಗೆ ತುಮಕೂರು ಪಾಲಿಕೆ ಇತಿಹಾಸದಲ್ಲೇ ಅಲ್ಪಸಂಖ್ಯಾತ ಮಹಿಳೆ ಮೇಯರ್ ಆಗಿರುವುದು ವಿಶೇಷ.

ಜೆಡಿಎಸ್ ಪಕ್ಷದ ಶಶಿಕಲಾ ಗಂಗಹನುಮಯ್ಯ ಅವರು ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ. ತುಮಕೂರು ಮಹಾನಗರ ಪಾಲಿಕೆಯಲ್ಲಿ ಒಟ್ಟು 35 ಸದಸ್ಯರಿದ್ದಾರೆ. ಬಿಜೆಪಿ 13 ಸದಸ್ಯ ಬಲ ಹೊಂದಿದೆ. ಅಧಿಕಾರದ ಗದ್ದುಗೆ ಹಿಡಿಯಲು ಒಟ್ಟು 18 ಮತ ಬೇಕಿತ್ತು. ಬಿಜೆಪಿಯ ಶಾಸಕ ಜ್ಯೋತಿಗಣೇಶ್, ಸಂಸದ ಜಿ.ಎಸ್.ಬಸವರಾಜು, ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಮತಗಳು ಸೇರಿ 16 ಮತಗಳಾದವು. ಇನ್ನು ಕೇವಲ ಎರಡು ಮತಗಳ ಅಗತ್ಯವಿದ್ದುದರಿಂದ ಜೆಡಿಎಸ್‍ನವರನ್ನು ಸೆಳೆಯಲು ಭಾರೀ ಕಸರತ್ತು ಕೂಡ ನಡೆಸಿತ್ತು.

ಕೆಲ ಜೆಡಿಎಸ್ ಸದಸ್ಯರು ಕೂಡಾ ಬೆಂಬಲ ಕೊಡಲು ಮುಂದೆ ಬಂದಿದ್ದರು. ಆದರೆ, ಶಾಸಕ ಜ್ಯೋತಿಗಣೇಶ್ ಅವರು ಇದಕ್ಕೆ ಆಸಕ್ತಿ ತೋರಲಿಲ್ಲ ಎಂದು ಬಿಜೆಪಿ ಸದಸ್ಯರೇ ಗಂಭೀರ ಆರೋಪ ಮಾಡುತ್ತಿದ್ದಾರೆ.16ನೇ ವಾರ್ಡ್‍ನ ಬಿಜೆಪಿ ಸದಸ್ಯೆ ವೀಣಾ ಮನೋಹರ್‍ಗೌಡ ಅವರು 13ಜನ ಸದಸ್ಯರೊಂದಿಗೆ ತೆರಳಿ ಮೇಯರ್ ಪಟ್ಟಕ್ಕಾಗಿ ನಾಮಪತ್ರ ಸಲ್ಲಿಸಿದ್ದರು. ಅವರು ನಾಮಪತ್ರ ಸಲ್ಲಿಸಲು ತೆರಳುತ್ತಿದ್ದಂತೆ ಇತ್ತ ಜೆಡಿಎಸ್‍ನ ಲಲಿತಾರವೀಶ್ (ಹಾಲಿ ಮೇಯರ್) ಅವರು ಶಾಸಕ ಜ್ಯೋತಿಗಣೇಶ್ ಅವರ ಕಚೇರಿಯಲ್ಲಿ ರಹಸ್ಯವಾಗಿ ಮಾತುಕತೆ ನಡೆಸುತ್ತಿದ್ದರು.

ಈ ವಿಷಯ ಇಳಿದ ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್, ಮಾಜಿ ಶಾಸಕರಾದ ಡಾ.ರಫೀಕ್‍ಅಹಮ್ಮದ್ ಸೇರಿದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ನಾಯಕರು ದೌಡಾಯಿಸಿ ತಮ್ಮ ಪಕ್ಷಗಳ ಕಾರ್ಪೊರೇಟರ್ ಗಳ ಕಡೆ ತೀವ್ರ ನಿಗಾ ವಹಿಸಿ ಬಿಜೆಪಿಯತ್ತ ಮುಖ ಮಾಡದಂತೆ ನೋಡಿಕೊಂಡರು. ಇದೆಲ್ಲದರ ಫಲ ಕಾಂಗ್ರೆಸ್, ಜೆಡಿಎಸ್ ಮೈತ್ರಿಕೂಟ ಮತ್ತೆ ಅಧಿಕಾರಗಳಿಸುವಲ್ಲಿ ಯಶಸ್ಸು ಸಾಧಿಸಿದೆ. ಬಿಜೆಪಿ ಅಧಿಕಾರಕ್ಕೆ ಬರುವ ಎಲ್ಲಾ ಸಾಧ್ಯತೆಗಳಿದ್ದರೂ ಅದನ್ನು ಬಳಸಿಕೊಳ್ಳುವಲ್ಲಿ ವಿಫಲವಾಗಿದೆ.

Facebook Comments

Sri Raghav

Admin