ತಲ್ವಾರ್ ಹಿಡಿದು ಅಳಿಯನ್ನ ಅಟ್ಟಾಡಿಸಿ ಕೊಲ್ಲಲೆತ್ನಿಸಿದ ಮಾವ..!

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಡಿ.5- ತನ್ನ ಮಗನ ಜತೆ ಸೇರಿಕೊಂಡು ಮಾವನೇ ಅಳಿಯನನ್ನು ಕೊಲೆ ಮಾಡಲು ಯತ್ನಿಸಿರುವ ಘಟನೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು , ಮೊಬೈಲ್‍ನಲ್ಲಿ ಸೆರೆಯಾಗಿರುವ ಕೊಲೆ ಯತ್ನ ದೃಶ್ಯ ಎಲ್ಲೆಡೆ ವೈರಲ್ ಆಗಿದೆ.ಬೆಂಗಳೂರಿನ ಉಲ್ಲಾಳ್ ಉಪನಗರ ನಿವಾಸಿಯಾದ ಕುಶಾಲ್ (31) ಎಂಬಾತನ ಮೇಲೆ ಮಾವ ಪ್ರಕಾಶ್ ಹಾಗೂ ಬಾಮೈದ ಆನಂದ್ ಮನ ಬಂದಂತೆ ಚುಚ್ಚಿ ಕೊಲೆ ಮಾಡಲು ಯತ್ನಿಸಿದ್ದಾರೆ.

ಸೋಲಾರ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಕುಶಾಲ್ ಮಾಗಡಿ ತಾಲ್ಲೂಕಿನ ಕೆಂಕೆರೆ ನಿವಾಸಿ ರಶ್ಮಿಯನ್ನು ಪ್ರೀತಿಸಿ ವಿವಾಹವಾಗಿದ್ದ. ರಶ್ಮಿ ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದರು.ದಂಪತಿಗೆ ಮೂರೂವರೆ ವರ್ಷದ ಮಗುವಿದ್ದು , ಆರಂಭದಲ್ಲಿ ಚೆನ್ನಾಗಿದ್ದ ಸಂಸಾರ ದಿನಗಳ ಕಳೆದಂತೆ ಸಣ್ಣ ಪುಟ್ಟ ವಿಚಾರಕ್ಕೂ ಜಗಳ ಆರಂಭವಾಗಿತ್ತು.

ಪತಿಯೊಂದಿಗೆ ಜಗಳವಾಡುವಾಗ ರಶ್ಮಿ ಉದ್ದೇಶಪೂರ್ವಕವಾಗಿ ತಂದೆಗೆ ಫೋನ್ ಕರೆ ಮಾಡಿ ಜಗಳದ ವಿಷಯ ಕೇಳಿಸುತ್ತಿದ್ದಳು. ಇದನ್ನು ತಪ್ಪಾಗಿ ಭಾವಿಸುತ್ತಿದ್ದ ಪ್ರಕಾಶ್ ಮತ್ತು ಆನಂದ್ ಬೆಂಗಳೂರಿಗೆ ಬಂದು ಕುಶಾಲ್ ಮೇಲೆ ಹಲ್ಲೆ ನಡೆಸುತ್ತಿದ್ದರು ಎನ್ನಲಾಗಿದೆ.

ಇದುವರೆಗೂ ತಲ್ವಾರ್ ಮತ್ತು ಚೈನ್‍ನಿಂದ ಕುಶಾಲ್ ಮೇಲೆ ಮೂರು ಬಾರಿ ಹಲ್ಲೆ ನಡೆಸಲಾಗಿತ್ತು.ಪತ್ನಿಯ ಈ ವರ್ತನೆಯಿಂದ ಬೇಸತ್ತು ಕುಶಾಲ್ ಕಳೆದ ಒಂದೂವರೆ ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ.

ಇತ್ತೀಚೆಗೆ ಮನೆಗೆ ಬಂದ ಮಾವ ಪ್ರಕಾಶ್ ಉಲ್ಲಾಳದಲ್ಲಿರುವ ನಿವೇಶನವನ್ನು ರಶ್ಮಿ ಹೆಸರಿಗೆ ವರ್ಗಾಯಿಸುವಂತೆ ಬೆದರಿಕೆ ಹಾಕಿದ್ದರು. ಆದರೆ ಇದಕ್ಕೆ ಕುಶಾಲ್ ಒಪ್ಪದೆ ಇದ್ದ ಕಾರಣ ಕೊಲೆ ಯತ್ನ ನಡೆಸಲಾಗಿದೆ ಎನ್ನಲಾಗಿದೆ.

ಈ ಕುರಿತಂತೆ ಕುಶಾಲ್ ನೀಡಿರುವ ದೂರು ದಾಖಲಿಸಿಕೊಂಡಿರುವ ನಗರ ಪೊಲೀಸರು ಪತ್ನಿ ರಶ್ಮಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮಾವ ಮತ್ತು ಬಾಮೈದ ತಲೆ ಮರೆಸಿಕೊಂಡಿದ್ದು , ಅವರ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ.

Facebook Comments