ದೇವಸ್ಥಾನಕ್ಕೆಂದು ಯುವತಿಯನ್ನು ಕರೆತಂದು ಕೊಂದು ಬೆಂಕಿ ಹಚ್ಚಿದ ದುಷ್ಕರ್ಮಿ..!

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು,ಜು.1-ಗೊರವನಹಳ್ಳಿ ಲಕ್ಷ್ಮಿ ದೇವಸ್ಥಾನಕ್ಕೆಂದು ನಂಬಿಸಿ ಯುವತಿಯನ್ನು ಕರೆತಂದ ದುಷ್ಕರ್ಮಿ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿ ಸೀಮೆಎಣ್ಣೆ ಸುರಿದು ಬೆಂಕಿಹಚ್ಚಿರುವ ಅಹಿತಕರ ಘಟನೆ ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕೊಲೆಯಾಗಿರುವ ಯುವತಿಯ ಹೆಸರು, ವಿಳಾಸ ತಿಳಿದುಬಂದಿಲ್ಲ. ಸುಮಾರು 25ರಿಂದ 30 ವರ್ಷದವರಂತೆ ಕಾಣುವ ಈಕೆಯನ್ನು ಯಾರು, ಏತಕ್ಕಾಗಿ ಕೊಲೆ ಮಾಡಿದ್ದಾರೆ ಎಂಬ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಕೊರಟಗೆರೆ ತಾಲ್ಲೂಕಿನ ತುಂಬಗಾನಹಳ್ಳಿ ಸಮೀಪದ ದೇವಲಾಪುರ ಗ್ರಾಮದ ಅರಣ್ಯ ಪ್ರದೇಶದಲ್ಲಿ ಇಂದು ಮುಂಜಾನೆ ಅರೆಬೆಂದ ಸ್ಥಿತಿಯಲ್ಲಿದ್ದ ಯುವತಿಯ ಶವವನ್ನು ನೋಡಿ ಕೊರಟಗೆರೆ ಪೊಲೀಸರಿಗೆ ತಿಳಿಸಿದ್ದಾರೆ.

ತಕ್ಷಣ ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ವಿಷಯ ತಿಳಿಸಿದ್ದು, ಎಸ್‍ಪಿ ಡಾ.ಕೋನವಂಶಿಕೃಷ್ಣ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭರಾಣಿ, ಮಧುಗಿರಿ ಡಿವೈಎಸ್ಪಿ ತಿಪ್ಪೇಸ್ವಾಮಿ, ವೃತ್ತ ನಿರೀಕ್ಷಕ ನದಾಫ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಬಗ್ಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಯುವತಿ ನಿನ್ನೆ ಬೆಳಗ್ಗೆ ಗೊರವನಹಳ್ಳಿ ಲಕ್ಷ್ಮಿ ದೇವಸ್ಥಾನಕ್ಕೆಂದು ಪರಿಚಯಿಸ್ಥನೊಂದಿಗೆ ಬಂದು ನಗರದ ಅಂಗಡಿಯೊಂದರಲ್ಲಿ ಚಪ್ಪಲಿ ಖರೀದಿಸಿರುವುದು ತಿಳಿದುಬಂದಿದೆ.

ಈಕೆ ಜೊತೆ ಬಂದಿರುವ ವ್ಯಕ್ತಿ ಯಾರೆಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದರು. ಆರೋಪಿ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದೆ. ಕೊರಟಗೆರೆ ವೃತ್ತ ನಿರೀಕ್ಷಕ ನದಾಫ್, ಸಬ್‍ಇನ್‍ಸ್ಪೆಕ್ಟರ್ ಮಂಜುನಾಥ್, ಸಿಬ್ಬಂದಿಗಳು ಈ ತಂಡದಲ್ಲಿದ್ದು, ತನಿಖೆ ನಡೆಸಿ ಆರೋಪಿಯನ್ನು ಶೀಘ್ರ ಬಂಧಿಸಲಾಗುವುದು ಎಂದರು.

ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಕೊಲೆ ನಡೆದಿರಬಹುದೇ ಎಂಬ ಅನುಮಾನ ವ್ಯಕ್ತವಾಗಿದ್ದು, ಕೊಲೆಯಾಗಿರುವ ಯುವತಿ ಯಾರೆಂಬುದು ಪತ್ತೆಯಾದರೆ ಪ್ರಕರಣದ ಸತ್ಯಾಂಶ ಹೊರಬರಲಿದೆ ಎಂದು ಶೋಭಾ ರಾಣಿ ತಿಳಿಸಿದರು.

ಯುವತಿಯ ಶವವನ್ನು ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿಡಲಾಗಿದೆ. ಯುವತಿಯ ವಾರಸುದಾರರು ಯಾರಾದರೂ ಇದ್ದಲ್ಲಿ ಕೂಡಲೇ ಕೊರಟಗೆರೆ ಠಾಣೆ ಪೊಲೀಸರನ್ನು ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ.

Facebook Comments

Sri Raghav

Admin