20 ವರ್ಷದ ನಂತರ ಹುಟ್ಟಿದ್ದ ಪ್ರೀತಿಯ ಮಗನನ್ನು ಕೊಂದು ತಂದೆ ಆತ್ಮಹತ್ಯೆ..!
ತುಮಕೂರು,ಜು.20- ಇಪ್ಪತ್ತು ವರ್ಷದ ನಂತರ ಹುಟ್ಟಿದ ಮಗನನ್ನುಕೊಂದು ನಂತರ ತಂದೆಯೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೂಲತಃ ಚಿತ್ರದುರ್ಗ ಜಿಲ್ಲೆಯ ಗೋವಿಂದಪ್ಪ(60) ಎಂಬಾತನೇ ಮಗ ಮಂಜುನಾಥ(14)ನನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿರುವ ತಂದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಕಸವಿಗೊಂಕನ ನಿವಾಸಿಗಳಾದ ಗೋವಿಂದಪ್ಪ-ಈರಮ್ಮ ದಂಪತಿಗೆ 20 ವರ್ಷಗಳ ನಂತರ ಗಂಡು ಮಗು ಹುಟ್ಟಿತು. ಕಾಲಾನಂತರದಲ್ಲಿ ಕುಟುಂಬದೊಂದಿಗೆ ತುಮಕೂರಿನ ಜಯನಗರಕ್ಕೆ ಬಂದು ನೆಲೆಸಿದ್ದರು.
ಬೆಳೆದ ಮಗನನ್ನು ಖಾಸಗಿ ಶಾಲೆಯಲ್ಲಿ ಓದಿಸುತ್ತಿದ್ದರು. ಗೋವಿಂದಪ್ಪ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದರೆ, ಪತ್ನಿ ಮನೆಗೆಲಸ ಮಾಡಿಕೊಂಡು ಕುಟುಂಬ ನಿರ್ವಹಿಸುತ್ತಿದ್ದರು. ಮಗ ವಿದ್ಯಾಭ್ಯಾಸದಲ್ಲಿ ಹೆಚ್ಚು ಆಸಕ್ತಿ ತೋರದೆ ಇದ್ದುದ್ದರಿಂದ ಅವನನ್ನು ಖಾಸಗಿ ಶಾಲೆಯಿಂದ ಬಿಡಿಸಿ ಸಿದ್ದಗಂಗಾ ಮಠಕ್ಕೆ 10ನೇ ತರಗತಿಗೆ ಸೇರಿಸಿದ್ದರು.
ಈ ನಡುವೆ ಅಪ್ಪ-ಮಗನ ಮಧ್ಯೆ ಏನಾಯಿತೋ ಏನೋ ಗೊತ್ತಿಲ್ಲ. ಮಂಗಳವಾರ ಬೆಳಗ್ಗೆ ಮಗನನ್ನು ಕರೆದುಕೊಂಡು ಶೆಟ್ಟಿಹಳ್ಳಿ ಬಳಿಯ ಕೆರೆ ಸಮೀಪ ಬಂದು ಹಗ್ಗದಿಂದ ಮಗನ ಕುತ್ತಿಗೆ ಬಿಗಿದು ಸಾಯಿಸಿ ನಂತರ ನೀರಿಗೆ ಬಿಸಾಡಿ ಅಪ್ಪ ಪರಾರಿಯಾದ್ದ.
ಬುಧವಾರ ಬೆಳಗ್ಗೆ ಕೆರೆಯಲ್ಲಿ ಶವ ತೇಲುತ್ತಿದರ ಬಗ್ಗೆ ಸ್ಥಳೀಯರು ಜಯನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಸಬ್ಇನ್ಸ್ಪೆಕ್ಟರ್ ನವೀನ್, ಸಿಬ್ಬಂದಿಗಳೊಂದಿಗೆ ಧಾವಿಸಿ ಶವವನ್ನು ನೀರಿನಿಂದ ಹೊರತೆಗೆದು ಪರಿಶೀಲನೆ ನಡೆಸಿದಾಗ ಕುತ್ತಿಗೆ ಬಳಿ ಹಗ್ಗದಿಂದ ಬಿಗಿದ ಗುರುತು ಪತ್ತೆಯಾಗಿದೆ.
ಸ್ಥಳಕ್ಕೆ ಡಿವೈಎಸ್ಪಿ ತಿಪ್ಪೇಸ್ವಾಮಿ, ತಿಲಕ್ಪಾರ್ಕ್ ವೃತ್ತ ನಿರೀಕ್ಷಕ ರಾಧಾಕೃಷ್ಣ ಭೇಟಿ ನೀಡಿ ಬಾಲಕನನ್ನು ಕೊಲೆ ಮಾಡಿರುವುದರ ಬಗ್ಗೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ಎಸ್ಪಿ ಅವರು ಆರೋಪಿ ಪತ್ತೆಗಾಗಿ ವಿಶೇಷ ತಂಡ ರಚಿಸಿ ಜಿಲ್ಲಾಸ್ಪತ್ರೆಯಲ್ಲಿ ಶವ ಪರೀಕ್ಷೆಗೊಳಪಡಿಸಿ ಮೃತ ದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಿದ್ದರು.
# ಮಾಹಿತಿ ಕಲೆ ಹಾಕಿದ ಪೊಲೀಸರು:
ತನಿಖೆ ನಡೆಸುತ್ತಿದ್ದ ಸಂದರ್ಭದಲ್ಲಿ ಕೆರೆ ಬಳಿ ದನ ಮೇಯಿಸುತ್ತಿದ್ದ ಯುವಕರು, ಅಪ್ಪ-ಮಗ ಇಬ್ಬರು ಇಲ್ಲಿಗೆ ಬಂದಿದ್ದನ್ನು ನೋಡಿದ್ದ ಬಗ್ಗೆ ನೀಡಿದ ಮಾಹಿತಿ ಮೇರೆಗೆ ಕೊಲೆಯಾದ ಯುವಕನ ಅಪ್ಪನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು.
ಬಾಲಕನ ಶವವನ್ನು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಗ್ರಾಮಕ್ಕೆ ಅಂತ್ಯಸಂಸ್ಕಾರಕ್ಕಾಗಿ ತೆಗೆದುಕೊಂಡು ಹೋದ ಸಂದರ್ಭದಲ್ಲಿ ತಂದೆ ಬರಬಹುದೆಂಬ ನಿರೀಕ್ಷೆಯಲ್ಲಿ ಪೊಲೀಸರು ಕಾಯುತ್ತಿದ್ದರು. ಆದರೆ ಗೋವಿಂದಪ್ಪ ಬರಲಿಲ್ಲ.
20 ವರ್ಷದ ನಂತರ ಹುಟ್ಟಿದ ಮಗನನ್ನು ಕೊಂದ ತಂದೆಗೆ ಪ್ರಾಯಶ್ಚಿತ ಕಾಡುತ್ತಿತ್ತು. ಪೊಲೀಸರಿಂದ ಕಣ್ತಪ್ಪಿಸಿ ಚಳ್ಳಕೆರೆಯ ತನ್ನ ಮನೆಯಲ್ಲಿದ್ದ ಗೋವಿಂದಪ್ಪ ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಚಿಂತಾಕ್ರಾಂತನಾಗಿದ್ದ. ಆದರೆ ಈ ವಿಚಾರ ಊರಿನ ಯಾರಿಗೂ ತಿಳಿದಿರಲಿಲ್ಲ. ಕುಟುಂಬಸ್ಥರಿಗೂ ಸಹ ಮಂಜುನಾಥನನ್ನು ತಂದೆಯೇ ಕೊಲೆ ಮಾಡಿರುವುದು ಗೊತ್ತಿರಲಿಲ್ಲ.
# ತಂದೆ ಆತ್ಮಹತ್ಯೆ:
ಚಳ್ಳಕೆರೆಗೆ ಇಬ್ಬರು ಪೊಲೀಸರು ಬಂದಿರುವ ಮಾಹಿತಿ ತಿಳಿದ ಗೋವಿಂದಪ್ಪ ತನ್ನನ್ನು ಬಂಧಿಸಲೆಂದೇ ಬಂದಿದ್ದಾರೆ. ನಾನು ಪೆÇಲೀಸರ ಕೈಗೆ ಸಿಕ್ಕರೆ ಮಗನನ್ನು ನಾನೇ ಕೊಂದಿರುವುದೆಂದು ಎಲ್ಲರಿಗೂ ತಿಳಿಯುತ್ತದೆ ಎಂದು ಅರಿತ ಗೋವಿಂದಪ್ಪ ಚಳ್ಳಕೆರೆಯ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪೊಲೀಸರು ಗೋವಿಂದಪ್ಪನನ್ನು ಹುಡುಕಿಕೊಂಡು ಈತನ ಮನೆಗೆ ಹೋದಾಗ ಅಲ್ಲಿ ಆತ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿದು ಬರಿಗೈಯಲ್ಲಿ ವಾಪಸ್ಸಾಗಿದ್ದಾರೆ.
# ಪ್ರಕರಣ ಕೈಚೆಲ್ಲಿದ ಪೊಲೀಸರು:
ಬಾಲಕನನ್ನು ಕೊಲೆ ಮಾಡಿದ ವ್ಯಕ್ತಿಯನ್ನು ಬಂಧಿಸಲು ಪೊಲೀಸರು ಹರಸಾಹಸಪಟ್ಟಿದ್ದರು. ಆದರೆ ಪ್ರಕರಣದಲ್ಲಿ ಆರೋಪಿ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಜಯನಗರ ಪೊಲೀಸರು ಪ್ರಕರಣವನ್ನು ಕೈಬಿಟ್ಟಿದ್ದಾರೆ.
# ಕಾರಣ ನಿಗೂಢ:
20 ವರ್ಷದ ನಂತರ ದಂಪತಿಗೆ ಮಗ ಹುಟ್ಟಿದ್ದರಿಂದ ಅತಿಯಾದ ಪ್ರೀತಿಯಿಂದಲೇ ಸಾಕಿ ಸಲುಹಿದ್ದರು.ಎಲ್ಲರಂತೆ ತಮ್ಮ ಮಗನೂ ಚೆನ್ನಾಗಿ ವಿದ್ಯಾಭ್ಯಾಸ ಮಾಡಬೇಕೆಂದು ಗೋವಿಂದಪ್ಪನ ಆಸೆಯಾಗಿತ್ತು. ಅತಿಯಾದ ಪ್ರೀತಿಯಿಂದಲೋ ಅಥವಾ ಇನ್ಯಾವುದಾದರೂ ಕಾರಣದಿಂದಲೋ ಗೊತ್ತಿಲ್ಲ. ಒಟ್ಟಾರೆ ಮಗನನ್ನು ಸಾಯಿಸಲು ಕಾರಣ ನಿಗೂಢವಾಗಿದ್ದು , ಅಪ್ಪನ ಆತ್ಮಹತ್ಯೆಯಲ್ಲಿ ಕಾರಣವೂ ಮುಚ್ಚಿಹೋಗಿದೆ.