ಮಧ್ಯಾಹ್ನ ಜೊತೆಯಲ್ಲೇ ಕುಡಿದ, ರಾತ್ರಿ ಕಲ್ಲು ಎತ್ತಿ ಹಾಕಿ ಕೊಂದ..!

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ನ.2- ನಡುರಸ್ತೆಯಲ್ಲೇ ರೌಡಿಯೊಬ್ಬನ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಕ್ಯಾತಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಹೊಸ ಬಡಾವಣೆ ವ್ಯಾಪ್ತಿಯ ವಿದ್ಯಾನಗರ ನಿವಾಸಿ ಮೋಹನ್‍ಕುಮಾರ್ (39) ಕೊಲೆಯಾದ ರೌಡಿ.

ಬೆಳಗುಂಬದ ಕೆಂಪೇಗೌಡ ಕಾಲೇಜು ಸಮೀಪದ ಮನೆಯಲ್ಲಿ ವಾಸವಾಗಿದ್ದ ರೌಡಿ ರಾಜು ಅಲಿಯಾಸ್ ಟೆಂಪಲ್ ರಾಜು ಮತ್ತು ಮೋಹನ್‍ಕುಮಾರ್ ನಿನ್ನೆ ಮಧ್ಯಾಹ್ನ ಒಟ್ಟಾಗಿ ಬಾರ್‍ವೊಂದಕ್ಕೆ ಹೋಗಿ ಮದ್ಯ ಸೇವಿಸಿದ್ದಾರೆ. ಸಂಜೆ ಜತೆಯಲ್ಲಿಯೇ ಓಡಾಡಿಕೊಂಡಿದ್ದ ಇವರಿಬ್ಬರು ಮತ್ತೆ ರಾತ್ರಿ 10 ಗಂಟೆ ಸುಮಾರಿನಲ್ಲಿ ಮದ್ಯಪಾನ ಸೇವಿಸಿ ಬೆಳಗುಂಬ ಗ್ರಾಮ ಪಂಚಾಯಿತಿ ಬಳಿ ಬಂದಾಗ ಮೋಹನ್ ಸಮಯವಾಗಿದೆ, ಮನೆಗೆ ಹೋಗೋಣ ಎಂದು ರಾಜುಗೆ ಹೇಳಿದ್ದಾನೆ.

ನನ್ನನ್ನು ಏಕವಚನದಲ್ಲಿ ಕರೆಯುತ್ತೀಯ. ಎಷ್ಟಿದೆ ನಿನಗೆ ಕೊಬ್ಬು ಎಂದು ಮೋಹನ್‍ಗೆ ಹೊಡೆದಿದ್ದಾನೆ. ಇದರಿಂದ ಕೋಪಗೊಂಡ ಮೋಹನ್ ರಾಜುಗೆ ಹೊಡೆಯಲು ಮುಂದಾಗುತ್ತಿದ್ದಂತೆ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾನೆ. ಈ ವೇಳೆ ರಾಜು ಸೈಜುಗಲ್ಲು ತೆಗೆದುಕೊಂಡು ಆತನ ತಲೆ ಮೇಲೆ ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.
ವಿಷಯ ತಿಳಿದು ಕ್ಯಾತಸಂದ್ರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

ಮೋಹನ್‍ಕುಮಾರ್ ಮೇಲೆ ಹೊಸ ಬಡಾವಣೆ ಠಾಣೆಯಲ್ಲಿ ದರೋಡೆ ಪ್ರಕರಣಗಳು ದಾಖಲಾಗಿದ್ದವು. ಜೂಜು ಅಡ್ಡಗಳ ಕಿಂಗ್‍ಪಿನ್ ಆಗಿದ್ದ ಈತ ಬಡ್ಡಿ ವ್ಯವಹಾರದಲ್ಲಿ ತೊಡಗಿಕೊಂಡಿದ್ದ. ಕೊಲೆ ಮಾಡಿ ಪರಾರಿಯಾಗಿರುವ ರೌಡಿ ರಾಜು ವಿರುದ್ಧ 2014ರಲ್ಲಿ ಆನೆದಂತ ಸಾಗಿಸುತ್ತಿದ್ದ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ. ತುಮಕೂರು ನಗರ, ಕ್ಯಾತಸಂದ್ರ ಗ್ರಾಮಾಂತರ, ಕೊರಟಗೆರೆ ತಾಲ್ಲೂಕಿನ ಹಲವು ಕಡೆ ಜೂಜು ಅಡ್ಡೆಗಳನ್ನು ನಡೆಸುವ ರೂವಾರಿಯೂ ಸಹ ಆಗಿದ್ದ ಈತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Facebook Comments