ಸಾವಲ್ಲಿ ಅಂತ್ಯವಾದ ಜಗಳ : ಪರಸ್ಪರ ಬೆಂಕಿ ಹಚ್ಚಿಕೊಂಡು ಅತ್ತೆ-ಸೊಸೆ ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಡಿ.8- ಕ್ಷುಲ್ಲಕ ವಿಚಾರಗಳಿಗೆ ಕಳೆದ ಕೆಲವು ತಿಂಗಳಿನಿಂದ ನಿರಂತರವಾಗಿ ಜಗಳವಾಡುತ್ತಿದ್ದ ಅತ್ತೆ ಸೊಸೆ ಇಬ್ಬರೂ ಪರಸ್ಪರ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಮೃತಪಟ್ಟಿರುವ ಘಟನೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಗಂಗಸಂದ್ರ ಗ್ರಾಮದಲ್ಲಿ ನಡೆದಿದೆ.

ತಾಲ್ಲೂಕಿನ ಹೆಗ್ಗೆರೆ ಬಳಿಯ ಗಂಗಸಂದ್ರದಲ್ಲಿ ನಡೆದ ಅತ್ತೆ-ಸೊಸೆಯರ ಜಗಳ ಸಾವಿನಲ್ಲಿ ಅಂತ್ಯಗೊಂಡಿದೆ. ಗಂಗಸಂದ್ರ ಗ್ರಾಮದ ದೊಡ್ಡ ನಂಜಯ್ಯ ಎಂಬುವರ ಪತ್ನಿ ಪಾರ್ವತಮ್ಮ (75), ಈಕೆಯ ಮಗ ಕುಮಾರಯ್ಯನ ಪತ್ನಿ ರಾಜೇಶ್ವರಿ (45) ಬೆಂಕಿಗೆ ಆಹುತಿಯಾದವರು.ಕಳೆದ ಮೂರು-ನಾಲ್ಕು ವರ್ಷಗಳಿಂದ ಅತ್ತೆ ಸೊಸೆಯರು ಮನೆಯಲ್ಲಿ ಆಗಾಗ ಜಗಳವಾಡುತ್ತಿದ್ದರು.

ನಿನ್ನೆ ಬೆಳಗ್ಗೆಯೂ ಸಹ ರಾಜೇಶ್ವರಿಯ ಗಂಡ ಶಿರಾ ಗೇಟ್‍ನ ಬಳಿ ಪೇಂಟಿಂಗ್ ಕೆಲಸಕ್ಕೆಂದು ತೆರಳಿದ್ದಾನೆ. ಮಾವ ದೊಡ್ಡ ನಂಜಯ್ಯ ಅವರು ತುಮಕೂರಿಗೆ ಹೋಗಿದ್ದರು. ಮನೆಯಲ್ಲಿ ಈ ಅತ್ತೆ-ಸೊಸೆ ಇಬ್ಬರು ಮಾತ್ರ ಇದ್ದಾಗ ಕ್ಷುಲ್ಲಕ ವಿಚಾರಕ್ಕೆ ಮನೆಯಲ್ಲಿದ್ದ ಜಗಳ ಆರಂಭಿಸಿದ್ದಾರೆ. ಊರಿನವರು ಹಲವು ಬಾರಿ ಜಗಳ ಮಾಡಬೇಡಿ ಎಂದು ಬುದ್ಧಿ ಹೇಳಿದ್ದರೂ ಸುಮ್ಮನಾಗದ ಅತ್ತೆ-ಸೊಸೆಯರು 10.30ರ ಸಂದರ್ಭದಲ್ಲಿ ಮನೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡು ಪರಸ್ಪರ ಜಗಳವನ್ನು ಮುಂದುವರಿಸಿದ್ದಾರೆ. ಜಗಳ ವಿಕೋಪಕ್ಕೆ ಹೋಗಿ ಪರಸ್ಪರ ಸೀಮೆಎಣ್ಣೆಯನ್ನು ಎರಚಿಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ.

ನೀರು ಕೊಡಿ ಎಂದು ಅಂಗಲಾಚಿದ ಪಾರ್ವತಮ್ಮ: ಪರಸ್ಪರ ಜಗಳವಾಡುತ್ತಿದ್ದ ಅತ್ತೆ-ಸೊಸೆಯರು ಮನೆಯೊಳಗೆ ಹೋಗಿ ಜಗಳ ಮುಂದುವರಿಸಿದಾಗ ಇದು ಮಾಮೂಲಿ ಎಂದು ಅಕ್ಕಪಕ್ಕದವರು ಸುಮ್ಮನಾಗಿದ್ದರು. ಆದರೆ ಕೆಲವೇ ನಿಮಿಷಗಳಲ್ಲಿ ಮನೆಯ ಹೆಂಚಿನ ಆಮೇಲೆ ದಟ್ಟವಾದ ಹೊಗೆ ಬರುತ್ತಿದ್ದರಿಂದ ಅನುಮಾನಗೊಂಡು ಮನೆ ಬಳಿ ಹೋಗಿ ಬಾಗಿಲು ತೆರೆಯಲು ಮುಂದಾದಾಗ ಬಾಗಿಲಿಗೆ ಒಳ ಭಾಗದಲ್ಲಿ ಚಿಲಕ ಹಾಕಲಾಗಿತ್ತು.

ಜನ ಬಾಗಿಲು ಒಡೆದು ಒಳ ಹೋದಾಗ ಸೊಸೆ ರಾಜೇಶ್ವರಿ ಒದ್ದಾಡಿ ಒದ್ದಾಡಿ ಮೃತಪಟ್ಟಿದ್ದರು. ಪಾರ್ವತಮ್ಮ ಇನ್ನೂ ವಿಲ ವಿಲ ಒದ್ದಾಡುತ್ತಿದ್ದು ಕುಡಿಯಲು ನೀರು ಕೊಡಿ ಎಂದು ಬೇಡಿದರು. ಆಕೆಯ ಬಾಯಿಗೆ ನೀರು ಬಿಟ್ಟ ಕೆಲವೇ ಕ್ಷಣಗಳಲ್ಲಿ ಪ್ರಾಣ ಪಕ್ಷಿ ಹಾರಿ ಹೋಗಿದೆ. ಕೋಪದ ಕೈಗೆ ಬುದ್ಧಿ ಕೊಟ್ಟು ದುಡುಕಿದ ಅತ್ತೆ-ಸೊಸೆಯರು ತಮ್ಮ ಜೀವವನ್ನೇ ಬಲಿ ಕೊಟ್ಟಿದ್ದಾರೆ.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ತುಮಕೂರು ನಗರದ ಡಿವೈಎಸ್ಪಿ ತಿಪ್ಪೇಸ್ವಾಮಿ, ತುಮಕೂರು ಗ್ರಾಮಾಂತರ ವೃತ್ತ ನಿರೀಕ್ಷಕ ರಾಮಕೃಷ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಲಕ್ಷ್ಮಯ್ಯ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Facebook Comments

Sri Raghav

Admin