ಡಿಎಚ್‍ಒ ಎಚ್ಚರಿಕೆ ನೀಡಿದರೂ ಕ್ಯಾರೇ ಎನ್ನದ ನರ್ಸ್..!

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಫೆ.16- ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಶೂಶ್ರೂಷಕಿಯೊಬ್ಬರು ಆಸ್ಪತ್ರೆಯಲ್ಲಿನ ಔಷಧಿಗಳನ್ನು ತಂದು ಮನೆಯಲ್ಲಿ ತಾವೇ ವೈದ್ಯರಂತೆ ಚಿಕಿತ್ಸೆ ನೀಡುತ್ತಿದ್ದು, ಖುದ್ದು ಡಿಎಚ್‍ಒ ಅವರು ದಾಳಿ ಮಾಡಿ ಎಚ್ಚರಿಕೆ ನೀಡಿದರೂ ಬದಲಾಗದೆ ಇರುವ ಪ್ರಕರಣ ನಡೆದಿದೆ.

ಪಾವಗಡ ತಾಲೂಕು ವೈಎನ್ ಹೂಸಕೋಟೆ ಪಟ್ಟಣದ ಲಕ್ಷ್ಮೀನಾರಾಯಣ ಆಸ್ಪತ್ರೆಯಲ್ಲಿ ಹೆಡ್ ನರ್ಸ್ ಆಗಿ ಕೆಲಸ ಮಾತ್ತಿರುವ ಗಂಗಮ್ಮ, ಅದೇ ಆಸ್ಪತ್ರೆಯಿಂದ ಔಷಧಿಗಳನ್ನು ಕದ್ದು ತಂದು ತನ್ನ ಮನೆಯಲ್ಲಿ ರೋಗಿಗಳಿಗೆ ಚಿಕತ್ಸೆ ನೀಡುತ್ತಿದ್ದಾಳೆ. ನರ್ಸ್ ಟ್ರೈನಿಂಗ್‍ನಲ್ಲಿ ಅನುತೀರ್ಣಳಾದ ಗಂಗಮ್ಮನಿಗೆ ಚಿಕಿತ್ಸೆ ನೀಡುವ ಯಾವ ಅರ್ಹತೆಗಳು ಇಲ್ಲದಿರುವುದನ್ನು ತಿಳಿದು ಸಾರ್ವಜನಿಕರು ದೂರು ನೀಡಿದ್ದರು.

ಅದನ್ನು ಆಧರಿಸಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಚಂದ್ರಕಲಾ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಆಸ್ಪತ್ರೆಯಿಂದ ತಂದಿರುವ ಕೆಲ ಔಷಧಿಗಳು, ಚಿಕಿತ್ಸೆಗೆ ಬೇಕಾದ ಸರ್ಜಿಕಲ್ ಉಪಕರಣಗಳು ಪತ್ತೆಯಾಗಿವೆ. ಗಂಗಮ್ಮ ಅನಧಿಕೃತವಾಗಿ ಗರ್ಭಪಾತವನ್ನು ಮಾಡಿಸುತ್ತಾಳೆ ಎಂಬ ಆರೋಪ ಇದೆ. ಸಾರ್ವಜನಿಕರ ಮಾಹಿತಿ ಆಧರಿಸಿ ಡಿಎಚ್‍ಒ ಅವರು ಗಂಗಮ್ಮಳನ್ನು ತರಾಟೆಗೆ ತೆಗೆದುಕೊಂಡರು.

ಆದರೆ ಇದರಿಂದ ವಿಚಲಿತರಾಗದ ಗಂಗಮ್ಮ ನಾನು ನಿರುದ್ಯೋಗಿ, ಆಸ್ಪತ್ರೆಯಲ್ಲಿ ನನಗೆ ಕೊಡುತ್ತಿರುವುದು 5 ಸಾವಿರ ರೂಪಾಯಿ ಸಂಬಳ ಮಾತ್ರ. ಕುಡುಕ ಗಂಡನಿದ್ದಾನೆ ನಾನು ಹೇಗೆ ಜೀವನ ಮಾಡಲಿ. ನನಗೆ ಗೋತ್ತಿರುವುದು ಇದೊಂದೇ ವೃತ್ತಿ. ಬೇರೆಲ್ಲೂ ಕೆಲಸ ಕೊಡುತ್ತಿಲ್ಲ, ನಾನೇ ಸಂಸಾರ ನಿಭಾಯಿಸಬೇಕಾಗಿದೆ ಎಂದು ಅವಲತ್ತುಕೊಂಡಿದ್ದಾಳೆ.

ಆದರೆ ಚಿಕಿತ್ಸೆಗೆ ಬೇಕಾದ ವಿದ್ಯಾರ್ಹತೆ ನಿನ್ನಲ್ಲಿಲ್ಲ. ನಿನ್ನ ಚಿಕುತ್ಸೆಯಿಂದ ಪ್ರಾಣ ಹಾನಿಯಾದರೆ ಯಾರು ಹೊಣೆಯಾಗುತ್ತಾರೆ. ಈ ಕೆಲಸ ಬಿಟ್ಟು ಬೇರೆ ವೃತ್ತಿ ಹುಡುಕಿಕೋ ಎಂದು ಎಚ್ಚರಿಕೆ ನೀಡಿದರು . ಇದಕ್ಕೂ ಜಗ್ಗದ ಗಂಗಮ್ಮ ಏನೇನೋ ಸಬೂಬು ಹೇಳಲು ಹೋದಾಗ ಡಿಎಚ್‍ಒ ಚಂದ್ರಕಲಾ ನೀನು ಇದೇ ವೃತ್ತಿಯನ್ನು ಮುಂದುವರಿಸಿದರೆ, ನಿನ್ನ ವಿರುದ್ಧ ಪೊಲೀಸ್ ಕೇಸನ್ನು ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಠಿಣ ಎಚ್ಚರಿಕೆ ನೀಡಿದರು ಕ್ಯಾರೆ ಎನ್ನದ ಗಂಗಮ್ಮ ಮತ್ತೆ ತನ್ನ ಹಳೆಯ ವೃತ್ತಿಯನ್ನೇ ಮುಂದುವರಿಸಿರುತ್ತಾಳೆ. ಇದೇ ವೇಳೆ ಲಕ್ಷ್ಮೀ ನಾರಾಯಣ ಆಸ್ಪತ್ರೆಯ ಮೇಲೂ ದಾಳಿ ಮಾಡಿದ ಡಿಎಚ್‍ಒ ಅವರು, ವಿವಿಧ ದಾಖಲೆಗಳನ್ನು ಪರಿಶೀಲಿಸಿ ಗಂಗಮ್ಮ ಮಾಡುತ್ತಿರುವ ಕೆಲಸವನ್ನು ಆಸ್ಪತ್ರೆಯ ವೈದ್ಯರಾದ ಪ್ರೇಮ ಯೋಗಿ ಮುಂದೆ ಬಿಚ್ಚಿಟ್ಟಿದ್ದಾರೆ. ಆಸ್ಪತ್ರೆಯ ಕೆಲಸಗಾರರ ಮೇಲೆ ನಿಗಾ ವಹಿಸುವಂತೆ ತಾಕೀತು ಮಾಡಿದ್ದಾರೆ. ನಿಮ್ಮ ಸಿಬ್ಬಂದಿ ಇದೇ ವೃತ್ತಿಯನ್ನು ಮಾಡಿದರೆ ಆಸ್ಪತ್ರೆಯನ್ನು ಮುಚ್ಚಿ ಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

# ಆಡಕ್ಕುಂಟು ಲೆಕ್ಕಕ್ಕಿಲ್ಲದಂತಾದ ಸರ್ಕಾರಿ ಆಸ್ಪತ್ರೆ:
ವೈಎನ್‍ಹೊಸಕೋಟೆ ಪಟ್ಟಣ ತಾಲ್ಲೂಕು ಕೇಂದ್ರ ಪಾವಗಡ ಪಟ್ಟಣದಷ್ಟೆ ಜನಸಂಖ್ಯೆ ಹೊಂದಿದೆ. ಶಾಸಕ ವೆಂಕಟರಮಣಪ್ಪ ನವರ ಸ್ವಗ್ರಾಮದ ಹತ್ತಿರವೇ ಇದೆ. ಇಲ್ಲಿ ಸಮುದಾಯ ಆರೋಗ್ಯ ಕೇಂದ್ರವಿದ್ದರೂ ಸೂಕ್ತ ಸೌಲಭ್ಯಗಳಿಲ್ಲ, ವೈದ್ಯರಿಲ್ಲ. ಹಾಗಾಗಿ ಸಾರ್ವಜನಿಕರು ಖಾಸಗಿ ವೈದ್ಯರು ಮತ್ತು ಆರ್‍ಎಂಪಿ ವೈದ್ಯರನ್ನು ಆಶ್ರಯಿಸಬೇಕಿದೆ.

ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಿಲ್ಲ. ಹೀಗಾಗಿ ಜನ ಜನಪ್ರತಿ ನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಆದರೂ ದಪ್ಪ ಚರ್ಮದ ಜನಪ್ರತಿನಿಧಿಗಳು ತಲೆ ಕೆಡಿಸಿಕೊಂಡಿಲ್ಲ. ಖುದ್ದು ಡಿಎಚ್‍ಒ ಅವರು ದಾಳಿ ನಡೆಸಿ ಎಚ್ಚರಿಕೆ ನೀಡಿದರೂ ಗಂಗಮ್ಮ ಮಾತ್ರ ಜಗ್ಗಿಲ್ಲ.

Facebook Comments

Sri Raghav

Admin